ಪುಟ:ಭಾರತ ದರ್ಶನ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ

೩೦೩

ಸಂಸ್ಕೃತಿಯ ಮೇಲೆ ವಿಶೇಷ ಹೆಮ್ಮೆ ಇದ್ದರೂ ಜೀವನದ ಕಟು ಸಮಸ್ಯೆಗಳ ನಿವಾರಣೆಗೆ ಆತನು ತೋರಿಸಿದ ದಾರಿ ಅತಿ ನವೀನವಾದದ್ದು. ಆತನು ಸನಾತನ ಮತ್ತು ಆಧುನಿಕ ದೃಷ್ಟಿಗಳೆರಡರ ಸಮನ್ವಯಾಚಾರನಾದನು. ಬಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಆತನು ಉತ್ತಮ ಭಾಷಣಕಾರನೂ, ಬಂಗಾಲಿ ಗದ್ಯ ಮತ್ತು ಪದ್ಯ ರಚನೆಯಲ್ಲಿ ಶ್ರೇಷ್ಠ ಬರಹಗಾರನೂ ಆಗಿದ್ದನು. ಆತನು ಉನ್ನತನೂ, ಆಜಾನುಬಾಹುವೂ, ಪ್ರತಿಭಾವಂತ ಗೌರವಾನ್ವಿತ ದೃಢ ವ್ಯಕ್ತಿಯೂ ತನ್ನ ಕಾರದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ತುಂಬ ಆತ್ಮ ವಿಶ್ವಾಸವುಳ್ಳವನೂ ಆಗಿದ್ದನು. ಆತನಲ್ಲಿ ಭಾರತವು ಎಲ್ಲ ದೇಶಗಳಿಗೂ ಮುಂದೆ ಇರಬೇಕೆಂಬ ಮಹತ್ವಾಕಾಂಕ್ಷೆಯೂ, ಉಜ್ವಲ ಕಾರ್ಯ ತತ್ಪರತೆಯ, ಭಾವಾವೇಶವೂ, ಕಾ ಯ ೯ ಪ ಟು ತ್ವ ವೂ ಇತ್ತು. ಅನೀತಿಯಿಂದ ಅಧೋಗತಿಗಿಳಿದಿದ್ದ ಹಿಂದೂ ಮನೋಪ್ರಪಂಚಕ್ಕೆ ಆತನು ಒಂದು ಮಹಾಕಾಯಕಲ್ಪವಾಗಿ ಅದಕ್ಕೊಂದು ಆತ್ಮಶ್ರದ್ಧೆ ಯನ್ನು ಕೊಟ್ಟು ಪುನರುಜ್ಜಿವನಗೊಳಿಸಿದನು, ೧೮೯೩ರಲ್ಲಿ ಚಿಕಾಗೊ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಸಭೆಗೆ ಹೋದನು; ಸಂಯುಕ್ತ ಸಂಸ್ಥಾನಗಳಲ್ಲಿ ಒಂದು ವರ್ಷ ಪ್ರವಾಸಮಾಡಿದನು ; ಯೂರೋಪ್ ಖಂಡದಲ್ಲಿ ಸಂಚಾರಮಾಡಿ ಅಥೆನ್ಸ್ ಮತ್ತು ಕಾನ್‌ಸ್ಟೆಂಟಿನೋಪಲ್‌ವರೆಗೂ ಹೋಗಿ, ಈಜಿಪ್ಟ್, ಚೀನಾ ಮತ್ತು ಜಪಾನ್ ದೇಶಗಳಿಗೆ ಭೇಟಿಕೊಟ್ಟನು, ಎಲ್ಲಿಗೆ ಹೋದರೂ ತನ್ನ ವ್ಯಕ್ತಿತ್ವ ದಿಂದ, ಆಡಿದ ಮಾತು ಮತ್ತು ರೀತಿಗಳಿಂದ ಒಂದು ಸಣ್ಣ ಕ್ರಾಂತಿಯನ್ನೇ ಎಬ್ಬಿಸಿದನು. ಒಂದು ಬಾರಿ ಈ ಹಿಂದೂ ಸಂನ್ಯಾಸಿಯನ್ನು ನೋಡಿದವರು ಆತನ ವ್ಯಕ್ತಿತ್ವವನ್ನಾಗಲಿ, ಸಂದೇಶವನ್ನಾಗಲಿ ಮರೆಯುವುದು ಅಸಾಧ್ಯವಾಯಿತು. ಅಮೆರಿಕಾದಲ್ಲಿ “ ಸುಂಟರಗಾಳಿಯ ಹಿಂದೂ” ಎಂದು ಹಸ ರಾದನು. ಪಾಶ್ಚಾತ್ಯ ಪ್ರವಾಸದಿಂದ ಆತನಲ್ಲ ಮಹತ್ಪರಿಣಾಮಗಳಾದವು. ಪಟ್ಟು ಹಿಡಿದು ಸಾಧಿ ಸುವ ಬ್ರಿಟಿಷರ ಶಕ್ತಿಯನ್ನೂ, ಅಮೆರಿಕೆಯ ಜನರ ಕಾರ್ಯಶಕ್ತಿ ಮತ್ತು ಸಮಾನದೃಷ್ಟಿಯನ್ನೂ ಮೆಚ್ಚಿದನು. “ ಯಾವ ಭಾವನೆಯ ಪ್ರಚಾರಕ್ಕಾದರೂ ಪ್ರಪಂಚದಲ್ಲಿ ಇತರ ಕಡೆಗಿಂತ ಅಮೆರಿಕ ದಲ್ಲಿ ಉತ್ತಮ ಅವಕಾಶವಿದೆ” ಎಂದು ಭಾರತದಲ್ಲಿನ ತನ್ನ ಸ್ನೇಹಿತನೊಬ್ಬನಿಗೆ ಪತ್ರ ಬರೆದಿದ್ದಾನೆ. ಆದರೆ ಪಾಶ್ಚಾತ್ಯರ ಧಾರ್ಮಿಕ ಸ್ವರೂಪಗಳು ಆತನ ಮೇಲೆ ಯಾವ ಪರಿಣಾಮವನ್ನೂ ಮಾಡಲಿಲ್ಲ; ಅದಕ್ಕೆ ಪ್ರತಿಯಾಗಿ ಭಾರತೀಯ ದಾರ್ಶನಿಕ ಮತ್ತು ಧಾರ್ಮಿಕ ಹಿನ್ನಲೆಯಲ್ಲಿ ಆತನಿಗಿದ್ದ ವಿಶ್ವಾ ಸವು ಇನ್ನೂ ದೃಢವಾಯಿತು. ಎಷ್ಟೇ ಅವನತಿಗಿಳಿದಿದ್ದರೂ ಭಾರತವೇ ಆತನ ಜೀವನಜ್ಯೋತಿಯಾಯಿತು.

ವೇದಾಂತದ ಅದೈತ ದರ್ಶನದ ಏಕತ್ವ ವಾದವನ್ನು ಆತನು ಬೋಧಿಸಿದನು. ವಿಚಾರಪರ ಮಾನವಕುಲದ ಧರ್ಮ ಮುಂದೆ ಅದೊಂದೇ ಎಂದು ಪೂರ್ಣ ನಂಬಿದ್ದನು. ಏಕೆಂದರೆ ವೇದಾಂತವು ಧಾರ್ಮಿಕ ಮಾತ್ರವಲ್ಲದೆ ತರ್ಕಪೂರ್ಣವಿತ್ತು. ಬಾಹ್ಯ ಪ್ರಕೃತಿಯ ವೈಜ್ಞಾನಿಕ ಸಂಶೋಧನೆಗಳಿಗೆ ಅನುಗುಣವಿತ್ತು. “ಈ ವಿಶ್ವವು ವಿಶ್ವಾತೀತನಾದ ದೇವರೊಬ್ಬನಿಂದ ಸೃಷ್ಟಿಯಾದುದಲ್ಲ; ಬೇರೊಂದು ಬಾಹ್ಯ ವಿಭೂತಿಯ ಕಾರ್ಯವೂ ಅಲ್ಲ, ಅದು ಸ್ವಯಂಸೃಜಿತ, ಸ್ವಯಂ ವಿನಾಶಿತ, ಸ್ವಯಂ ಪ್ರಕಾಶಿತ, ಏಕೈಕ ಅನಂತ ಶಾಶ್ವತ ಬ್ರಹ್ಮ ಎಂದು ಹೇಳಿದ್ದಾನೆ. ವೇದಾಂತದ ಆದರ್ಶವು ಮಾನವನ ಅಸ್ತಿತ್ವ ಮತ್ತು ಆತನ ಅಂತರ್ಜನಿತ ದೈವೀ ಸ್ವಭಾವ; ಮಾನವನಲ್ಲಿ ದೈವತ್ವವನ್ನು ಕಾಣುವುದೇ ನಿಜವಾದ ದೈವಿಕ ಸಾಕ್ಷಾತ್ಕಾರ, ಸರ್ವ ಜೀವಿಗಳಲ್ಲಿ ಮಾನವನೇ ಶ್ರೇಷ್ಠ. ಆದರೆ ಆದರ್ಶ ವೇದಾಂತವು ನಿತ್ಯ ಜೀವನದಲ್ಲಿ ಜೀವನದ ಉಸಿರಾಗಿ, ಕಾವ್ಯಮಯವಾಗಬೇಕು, ಅತ್ಯಂತ ಜಟಿಲವಾದ ಪೌರಾಣಿಕ ಕಥೆಗಳಿಂದ ಸಾಪೇಕ, ನೀತಿಗಳು ರೂಪುಗೊಳ್ಳಬೇಕು ; ಮತ್ತು ಕಷ್ಟತಮಯೋಗ ಸಾಧನೆಯಿಂದ ಶುದ್ಧ ವೈಜ್ಞಾನಿಕ ಮತ್ತು ಪ್ರಾಯೋಗಿಕ ಮನಶ್ಯಾಸ್ತ್ರವು ಬೆಳೆಯಬೇಕು ” ಎಂದಿದ್ದಾನೆ. ಭಾರತವು ತನ್ನ ಸಂಕುಚಿತ ಭಾವನೆಯಿಂದ ಅಧೋಗತಿಗಿಳಿದು, ಚಿಪ್ಪುಗಟ್ಟಿಕೊಂಡು, ಇತರ ಜನಾಂಗಗಳ ಸಂಪರ್ಕದಿಂದ ದೂರವಾಯಿತು. ಮತ್ತು ಅದರ ನಾಗರಿಕತೆಯೂ ಕ್ಷೀಣಿಸಿ, ನಿರ್ಜೀವವಾಗಿ ನಿರ್ದಿಷ್ಟವಾಯಿತು.