ಪುಟ:ಭಾರತ ದರ್ಶನ.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೩೩

ಭಿನ್ನಾಭಿಪ್ರಾಯಗಳು ಹೊರಬಿದ್ದಿವೆ. ಆಮೇಲೆ ಹೀಗೆ ಮಾಡಿದ್ದರೆ ಚೆನ್ನಾಗಿತ್ತೆಂದು ಬುದ್ದಿ ಹೇಳುವುದು ಸುಲಭ, ಆದರೆ ಅಂದಿನ ರಾಜಕೀಯ ದೃಷ್ಟಿಯಿಂದ ನಾವು ಅನುಸರಿಸಿದ ರೀತಿಯೇ ಸರಿ ಎಂದು ನನ್ನ ಭಾವನೆ. ಆದರೂ ಕೋಮುವಾರು ಪ್ರಶ್ನೆಯ ಮೇಲೆ ಅದರಿಂದ ಅನಿಷ್ಟ ಪರಿಣಾಮವಾಯಿತು. ಅನೇಕ ಮುಸ್ಲಿಮರಲ್ಲಿ ಅಸಮಾಧಾನವೂ, ಪ್ರತ್ಯೇಕತೆಯ ಮನೋಭಾವವೂ ಹೆಚ್ಚಿತು. ಪ್ರತಿಗಾಮಿಗಳು ಇದನ್ನೇ ಉಪಯೋಗಿಸಿಕೊಂಡು ತಮ್ಮ ಪಕ್ಷವನ್ನು ಬಲಪಡಿಸಿಕೊಂಡರು.

ರಾಜಕೀಯ ದೃಷ್ಟಿಯಿಂದ ಆಗಲಿ ಘಟನಾತ್ಮಕ ದೃಷ್ಟಿಯಿಂದ ಆಗಲಿ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳು ಏರ್ಪಟ್ಟುದರಿಂದ ಬ್ರಿಟಿಷರ ರಾಜ್ಯಾಡಳಿತ ರಚನೆಯಲ್ಲಿ ಮುಖ್ಯ ಪರಿವರ್ತನೆಯೂ ಆಗಲಿಲ್ಲ. ನಿಜವಾದ ಅಧಿಕಾರ ಇದ್ದಲ್ಲಿಯೇ ಉಳಿಯಿತು. ಆದರೆ ದೇಶದಲ್ಲಿ ಅದ್ಭುತ ಮಾನಸಿಕ ಪರಿವರ್ತನೆಯಾಗಿ ಒಂದು ವಿದ್ಯುತ್ ಪ್ರವಾಹ ಹರಿದಂತೆ ಜನರು ಚಕಿತರಾದರು. ಪರಿವರ್ತನೆಯು ಪಟ್ಟಣಗಳಿಂದ ಗ್ರಾಮಾಂತರಗಳಲ್ಲಿ ವಿಶೇಷ ಪರಿಣಾಮಕಾರಿಯಾಗಿತ್ತು. ಕೈಗಾರಿಕಾ ಕೇಂದ್ರಗಳ ಶ್ರಮಜೀವಿಗಳಲ್ಲೂ ಅದನ್ನು ಕಾಣಬಹುದಿತ್ತು. ಜನರನ್ನು ಅದಮುತ್ತಿದ್ದ ಹೊರೆ ಸ್ವಲ್ಪ ಇಳಿದುದರಿಂದ ಬಿಡುಗಡೆಯ ಬೆಲೆಯನ್ನರಿತರು. ಎಲ್ಲೆಡೆಯಲ್ಲೂ ತಳಹತ್ತಿದ್ದ ಜನಶಕ್ತಿಯ ಉತ್ಸಾಹ ಉಕ್ಕೇರಿ ಹರಿದಿತ್ತು. ಸ್ವಲ್ಪ ಮಟ್ಟಿಗಾದರೂ ಪೋಲೀಸರ ಮತ್ತು ಗುಪ್ತಚಾರರ ಭಯ ಮಾಯವಾಯಿತು. ಕಡುಬಡವ ರೈತನಲ್ಲಿ ಸಹ ಆತ್ಮವಿಶ್ವಾಸ ಮತ್ತು ಆತ್ಮಗೌರವದ ಭಾವನೆ ಬೆಳೆಯಿತು. ರಾಷ್ಟ್ರ ಜೀವನದಲ್ಲಿ ತನಗೂ ಬೆಲೆ ಇದೆ, ತನ್ನನ್ನು ಯಾರೂ ಮರೆಯುವಂತೆ ಇಲ್ಲ ಎಂಬ ಅರಿವುಂಟಾದದ್ದು ಇದೇ ಅವನಲ್ಲಿ ಪ್ರಪ್ರಥಮ, ಇಂದಿನ ಸರಕಾರವು ತನ್ನನ್ನು ಆದಷ್ಟು ಸುಲಿಗೆ ಮಾಡಿ, ಹತ್ತಿರ ಹೋಗಲು ಅಸಾಧ್ಯವಾದ ಅಸಂಖ್ಯಾತ ಅಧಿಕಾರಿ ಗಳಿಂದ ದೂರವಿರುವ ಒಂದು ಅಪರಿಚಿತ, ಅವ್ಯಕ್ತ ಪೆಡಂಭೂತವಲ್ಲ ಎಂದು ಗೊತ್ತಾಯಿತು. ಇದು ವರೆಗೆ ಅಲಭ್ಯವಿದ್ದ ಅಧಿಕಾರ ಸ್ಥಾನಗಳು ತಾನು ಕಂಡು, ಕೇಳಿ, ಮಾತನಾಡಿದ ಮತ್ತು ಕೆಲವು ಕಾಲ ತನ್ನೊಂದಿಗೆ ಸೆರೆಮನೆಯಲ್ಲಿ ವಾಸವಾಗಿದ್ದು ಸ್ನೇಹಿತರಾಗಿ ಪರಿಚಿತವಿದ್ದ ವ್ಯಕ್ತಿಗಳ ಕೈಗೆ ಬಂದಿದೆ ಎಂಬ ಅರಿವು ಆಯಿತು. ಬ್ರಿಟಿಷ್ ಅಧಿಕಾರಿವರ್ಗದ ಕೋಟೆಗಳಂತಿದ್ದ ಪ್ರಾಂತ್ಯ ಸರಕಾರಗಳ ರಾಜಧಾನಿಗಳಲ್ಲಿ ಅನೇಕ ವಿಚಿತ್ರ ದೃಶ್ಯಗಳು ನಡೆದವು. ಉನ್ನತ ಅಧಿಕಾರಿಗಳ ಅವಾಸಸ್ಥಾನವಾಗಿದ್ದ ಈ ಕೇಂದ್ರಗಳು ಪರಮಾವಧಿ ಸ್ಥಾನಗಳಾಗಿದ್ದವು. ಅಲ್ಲಿಂದ ಹೊರಟ ವಿಚಿತ್ರ ಆಜ್ಞೆಗಳನ್ನು ಎದುರಿಸುವವರೇ ಇರಲಿಲ್ಲ. ಎಲ್ಲಿ ನೋಡಿದರೂ ಥಳಥಳಿಸುವ ಕಠಾರಿಗಳನ್ನು ಸೊಂಟಕ್ಕೆ ಸಿಕ್ಕಿಸಿಕೊಂಡ ಪೋಲೀಸರ ಮತ್ತು ಕೆಂಪು ಕಿನಕಾಸಿನ ಸಮವಸ್ತ್ರ ಧಾರಿಗಳ ಸರ್ಪಕಾವಲು. ತುಂಬ ಅದೃಷ್ಟ ಶಾಲಿಗಳಿಗೋ, ಧೈರ್ಯ ನಾನರಿಗೋ ಅಥವ ಹಣವಂತರಿಗೋ ಮಾತ್ರ ಅಲ್ಲಿ ಪ್ರವೇಶ, ಈಗ ಪಟ್ಟಣಗಳ, ಹಳ್ಳಿಗಳ ಜನರು ಅಸಂಖ್ಯಾತರಾಗಿ ಈ ಪವಿತ್ರ ಸ್ಥಳಗಳಿಗೆ ನುಗ್ಗಿ ಮನಬಂದಂತೆ ತಿರುಗಾಡಲಾರಂಭಿಸಿದರು. ಎಲ್ಲದರಲ್ಲೂ ಅವರಿಗೆ ಕುತೂಹಲ. ಶಾಸನ ಸಭೆ ನಡೆಯುವ ಸಭಾಭವನಕ್ಕೆ ನುಗ್ಗಿದರು; ಮಂತ್ರಿಗಳ ಕೋಣೆಗಳೊಳಗೆ ಸಹ ಇಣಿಕಿಹಾಕಿದರು. ಪರಕೀಯರೆಂಬ ಭಾವನೆ ಹೋದ ಕಾರಣ ಅವರನ್ನು ತಡೆಯಲು ಸಾಧ್ಯವಿರ ಲಿಲ್ಲ. ಅದೆಲ್ಲ ಅವರಿಗೆ ಅರ್ಥವಾಗದಿದ್ದರೂ, ನಮ್ಮದು ಎಂಬ ಅಭಿಮಾನವಿತ್ತು. ಬೆಳಗುವ ಕಠಾರಿಗಳ ಪೋಲೀಸರೂ, ಚಪ್ರಾಸಿಗಳೂ ಬೆರಗಾದರು. ಹಿಂದಿದ್ದ ಬೆಲೆ ಈಗ ಮಾಯವಾಯಿತು. ಅಧಿಕಾರ ಮತ್ತು ದರ್ಪದ ಐರೋಪ್ಯರ ಉಡುಪಿಗೆ ಈಗ ಬೆಲೆ ಇಲ್ಲದಾಯಿತು. ಶಾಸನ ಸಭೆಗಳ ಸದಸ್ಯರನ್ನು ಸಾಮಾನ್ಯ ಹಳ್ಳಿಯ ರೈತನಿಂದ ಅಥವ ಪಟ್ಟಣದ ವರ್ತಕನಿಂದ ಗುರುತಿಸಲು ಕಷ್ಟವಾಯಿತು. ಎಲ್ಲರ ಮೈಮೇಲೂ ಅದೇ ಕೈನೂಲಿನ ಖಾದಿಬಟ್ಟೆ ಮತ್ತು ತಲೆಗೆ ಖಾದಿ ಟೋಪಿ.

ಕೆಲವು ತಿಂಗಳ ಮೊದಲೇ ಮಂತ್ರಿ ಮಂಡಲಗಳೇರ್ಪಟ್ಟ ಪಂಜಾಬ ಮತ್ತು ಬಂಗಾಲದಲ್ಲಿ ಪರಿಸ್ಥಿತಿಯೇ ಬೇರೆ ಇತ್ತು. ಅಲ್ಲಿ ರಾಜಕೀಯ ಬಿಕ್ಕಟ್ಟು ಯಾವುದೂ ಬಂದಿರಲಿಲ್ಲ. ಮಂತ್ರಿಮಂಡಲ ಏರ್ಪಟ್ಟಾಗಲೂ ಮೇಲೆ ಯಾವ ವ್ಯತ್ಯಾಸವೂ ಆಗಲಿಲ್ಲ, ಪಂಜಾಬಿನಲ್ಲಿ ಹಳೆಯ ಆಡಳಿತವೇ ಮುಂದುವರಿಯಿತು, ಹೊಸಮಂತ್ರಿಗಳೂ ಹೆಚ್ಚು ಜನರು ಬರಲಿಲ್ಲ. ಮೊದಲೇ ಉನ್ನತ ಅಧಿಕಾರಿಗಳಾಗಿದ್ದವರು,