ಪುಟ:ಭಾರತ ದರ್ಶನ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೬

ಭಾರತ ದರ್ಶನ

ಆನಂದವೂ ಕರುಬೂ ಏಕಕಾಲದಲ್ಲಿ ಉಂಟಾದವು. ಅಲ್ಪ ಕಾಲದ ಹಿಂದೆ ಬೇರೆ ಬೇರೆ ಜೀವನ ಮಟ್ಟದಲ್ಲಿದ್ದ ಸುಮಾರು ಎರಡು ನೂರು ಜನಾಂಗಗಳು ಸೌಹಾರ್ದದಿಂದಲೂ ಶಾಂತಿಯಿಂದಲೂ ಪ್ರಗತಿಮಾರ್ಗದಲ್ಲಿ ಸುಖವಾಗಿ ಬಾಳುವುದನ್ನು ನೋಡಿ, ಮತ್ತು ಶ್ರೇಷ್ಠ ನಾಗರಿಕತೆಯ ಉನ್ನತ ಶಿಖರವನ್ನೇರಿದವರೂ, ಬುದ್ದಿಶಾಲಿಗಳೂ ಆದ ನಮ್ಮ ದೇಶದ ಜನರು ಮೃಗಗಳಂತೆ ಕಚ್ಚಾಡುವುದನ್ನು ನೋಡಿ, ಎರಡು ಸರಕಾರಗಳನ್ನೂ ಹೋಲಿಕೆ ಮಾಡದೆ ಗತ್ಯಂತರವಿಲ್ಲ. ಒಂದು ಸಹಕಾರ ತತ್ವವನ್ನು ಅವಲಂಬಿಸಿದ್ದು, ಇನ್ನೊಂದು ಜೀವವನ್ನು ಹೀರತಕ್ಕದ್ದು ; ಅದರಿಂದಲೇ ಈ ಎಲ್ಲ ವ್ಯತ್ಯಾಸ” ಎಂದು ಸಂದೇಶ ಸಾರಿದರು.

ಇತರರು ಮುಂದುವರಿಯಬಹುದಾದರೆ ನಮಗೇಕೆ ಸಾಧ್ಯವಿಲ್ಲ ? ನಮ್ಮ ಕಾರ್ಯ ಶಕ್ತಿ, ಬುದ್ದಿ ಶಕ್ತಿ, ಉಳಿದು ಬಾಳಿ ಮುಂದುವರಿಯಬೇಕೆಂಬ ಮನೋ ಸಂಕಲ್ಪ, ಇವುಗಳಲ್ಲಿ ವಿಶ್ವಾಸವಿತ್ತು. ನಮ್ಮ ಎದುರಿನ ತೊಂದರೆಗಳು, ಬಡತನ, ಹೀನಸ್ಥಿತಿ, ಪ್ರತಿಗಾಮಿ ಪಂಗಡಗಳು, ಭಿನ್ನತೆಗಳು ಎಲ್ಲವೂ ನಮಗೆ ತಿಳಿದಿದ್ದವು; ಆದರೂ ಅವುಗಳನ್ನೆಲ್ಲ ಎದುರಿಸಿ ಜಯಿಸಲು ನಿಶ್ಚಯಿಸಿದೆವು. ಅದಕ್ಕೆ ಕೊಡಬೇಕಾದ ಬೆಲೆಯೂ ಅಪಾರವೆಂದು ತಿಳಿದಿತ್ತು. ಆದರೆ ಈಗ ನಮ್ಮ ಪರಿಸ್ಥಿತಿಯಲ್ಲಿ ಅನುಭವಿಸುತ್ತಿದ್ದುದಕ್ಕಿಂತ ಹೆಚ್ಚಿನದೇನೂ ಅಲ್ಲವೆಂದು ಭಾವಿಸಿದೆವು. ಆದರೂ ಹೊರಗೆ ಯಾವ ಕಡೆ ತಿರುಗಿದರೂ, ಬ್ರಿಟಿಷರ ದಾಸ್ಯದ ಪ್ರಶ್ನೆಯೇ ನಮ್ಮ ಎದುರು ನಿಂತು ನಮ್ಮ ಎಲ್ಲ ಪ್ರಯತ್ನವನ್ನೂ ವಿಫಲಗೊಳಿಸುತ್ತಿರುವಾಗ ನಮ್ಮ ಒಳಗಿನ ಸಮಸ್ಯೆಗಳನ್ನು ಬಗೆಹರಿಸುವುದೆಂತು?

ಆದರೂ ಈ ಪ್ರಾಂತಾಡಳಿತದಲ್ಲಿ ನಮಗಿದ್ದ ಅವಕಾಶ ಎಷ್ಟೇ ಅಲ್ಪವೂ ಸಂಕುಚಿತವೂ ಇದ್ದರೂ ಅದರಿಂದ ಆದಷ್ಟು ಉಪಯೋಗಪಡೆಯೋಣವೆನಿಸಿತು. ಕಾಯಂ ಆಡಳಿತ ವರ್ಗಕ್ಕೂ ತಮಗೂ ಸೌಹಾರ್ದ ಮತ್ತು ಏಕತ್ರ ದೃಷ್ಟಿ ಇಲ್ಲದ ಕಾರಣ ನಮ್ಮ ಮಂತ್ರಿವರ್ಗಕ್ಕೆ ಈ ಕೆಲಸ ಮತ್ತು ಜವಾಬ್ದಾರಿ ನಿರ್ವಹಣೆ ಅತಿ ಕಷ್ಟವಾಯಿತು. ದುರದೃಷ್ಟವಶಾತ್ ಈ ಮಂತ್ರಿಗಳ ಸಂಖ್ಯೆಯೂ ಬಹಳ ಕಡಿಮೆ ಇತ್ತು. ಅವರ ಸಂಬಳವೂ ಕಡಮೆ ಇತ್ತು. ಸರಳ ಜೀವನದಿಂದ ಮತ್ತು ಮಿತವ್ಯಯದಿಂದ ಮಾದರಿಯಾಗ ಬೇಕಾಗಿತ್ತು. ಇಂಡಿಯ ಸಿವಿಲ್ ಸರ್ವಿಸಿನ, ಅದರ ಕಾರ್ಯದರ್ಶಿಯೋ ಅಥವ ಬೇರೆ ಕಡಮೆ ದರ್ಜೆಯ ಅಧಿಕಾರಿಯೋ ಮಂತ್ರಿಗಳ ನಾಲ್ಕರಷ್ಟೋ, ಐದರಷ್ಟೋ ಸಂಬಳ ತೆಗೆದುಕೊಳ್ಳುತ್ತಿದ್ದನು. ಅಧಿಕಾರಿಗಳ ಸಂಬಳವನ್ನು ನಾವು ಮುಟ್ಟುವಂತೆ ಇರಲಿಲ್ಲ. ಮಂತ್ರಿಗಳು ಎರಡನೆಯ ತರಗತಿ ಯಲ್ಲೂ ಮೂರನೆಯ ತರಗತಿಯಲ್ಲೋ ಪ್ರಯಾಣ ಮಾಡುವ ರೈಲಿನಲ್ಲೇ ಕೆಳ ಅಧಿಕಾರಿಯು ಮೊದಲನೆಯ ತರಗತಿಯಲ್ಲೋ ಅಥವ ಪ್ರತ್ಯೇಕ ಗಾಡಿಯಲ್ಲೇ ಪ್ರಯಾಣಮಾಡುತ್ತಿದ್ದ.

ಮೇಲಿನಿಂದ ಆಜ್ಞೆ ಮಾಡುತ್ತ ಕೇಂದ್ರ ಕಾಂಗ್ರೆಸ್ ಸಮಿತಿಯು ಪ್ರಾಂತ ಸರಕಾರಗಳ ಆಡಳಿತದಲ್ಲಿ ಕೈ ಹಾಕುತ್ತದೆ ಎಂಬ ಆಕ್ಷೇಪ ಬಂದಿತ್ತು. ಇದು ಶುದ್ಧ ತಪ್ಪು ; ಒಳ ಆಡಳಿತದಲ್ಲಿ ಎಂದಿಗೂ ಕೈ ಹಾಕಲಿಲ್ಲ. ಮುಖ್ಯ ರಾಜಕೀಯ ವಿಷಯಗಳಲ್ಲಿ ಎಲ್ಲ ಪ್ರಾಂತ ಸರಕಾರಗಳಿಗೂ ಒಂದೇ ನೀತಿ ಇರಬೇಕೆಂದು ಚುನಾವಣಾ ಘೋಷಣೆಯಲ್ಲಿ ಹೇಳಿದ ಕಾಂಗ್ರೆಸ್ ಕಾರ್ಯಕ್ರಮವನ್ನು ಸಾಧ್ಯವಾದ ಮಟ್ಟಿಗೆ ಕಾರ್ಯ ರೂಪಕ್ಕೆ ತರಬೇಕೆಂದೂ ಕಾಂಗ್ರೆಸ್ ಕಾರ್ಯಸಮಿತಿಯ ಅಭಿಮತವಾಗಿತ್ತು. ಮುಖ್ಯವಾಗಿ ಸರ್ಕಾರಗಳಿಗೂ ಗೌರರುಗಳಿಗೂ ಮಧ್ಯೆ ಒಂದೇ ಬಗೆಯ ಸಂಬಂಧ ಇರಬೇಕೆಂದು ಕಾಂಗ್ರೆಸ್ ನೀತಿಯಾಗಿತ್ತು.

ಕೇಂದ್ರ ಆಡಳಿತದಲ್ಲಿ ಯಾವ ವ್ಯತ್ಯಾಸವೂ ಇಲ್ಲದೆ ಜವಾಬ್ದಾರಿ ರಹಿತವೂ ಕೇಂದ್ರೀಕೃತವೂ ಆಗಿದ್ದಾಗ ಪ್ರಾಂತಾಡಳಿತವು ಜವಾಬ್ದಾರಿಯುತವಾದರೆ ಪ್ರಾಂತಭಾವನೆಯೂ, ಭಿನ್ನತೆಯೂ ಹೆಚ್ಚಿ ಭಾರತದ ಐಕ್ಯತೆಗೆ ಪೆಟ್ಟು ಬೀಳುವುದರಲ್ಲಿತ್ತು. ಪ್ರಾಯಶಃ ಈ ಛಿದ್ರ ಮನೋಭಾವನೆಯನ್ನೂ, ಶಕ್ತಿಗಳನ್ನೂ ಪ್ರೋತ್ಸಾಹಿಸಬೇಕೆಂದೇ ಬ್ರಿಟಿಷರ ಅಭಿಮತವಿರಬಹುದು. ಭಾರತ ಸರಕಾರ ಅಲುಗಾಡದೆ ಬೇಜವಾಬ್ದಾರಿಯಿಂದ ನಿರ್ಲಕ್ಷದಿಂದ, ಮೊದಲಿನ ಬ್ರಿಟಿಷ್ ಸಾಮ್ರಾಜ್ಯವಾದಿಗಳ ಪದ್ದತಿಯನ್ನೇ ಅನುಸರಿಸಿ ಎಲ್ಲ ಪ್ರಾಂತಗಳಿಗೂ ಒಂದೇ ನೀತಿಯನ್ನು ಹಾಕಿದರು, ಸಿಮಲಾ ಅಥವ ದೆಹಲಿಯಿಂದ