ಪುಟ:ಭಾರತ ದರ್ಶನ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೩೭

ಆಜ್ಞಪ್ತರಾದ ಗೌರ್ನರುಗಳಿಗೆ ಅದೇ ವೇದವಾಕ್ಯವಾಯಿತು. ಕಾಂಗ್ರೆಸ್ ಮಂತ್ರಿಮಂಡಲಗಳು ತಮಗೆ ಮನಬಂದಂತೆ ನಡೆದಿದ್ದರೆ ಅವುಗಳನ್ನು ಪೂರೈಸಿಬಿಡುತ್ತಿದ್ದರು. ಆದ್ದರಿಂದ ಇವುಗಳೆಲ್ಲ ಒಂದೇ ನೀತಿ ಹಿಡಿದು ಇಂಡಿಯಾ ಸರಕಾರವನ್ನು ಎದುರಿಸುವುದು ಅವಶ್ಯವಿತ್ತು. ಪ್ರಾಂತ ಸರಕಾರಗಳಲ್ಲಿ ಈ ಏಕಮುಖ ಸಹಕಾರ ಅಸಾಧ್ಯವಾಗಲೆಂದೇ ಇಂಡಿಯಾ ಸರಕಾರದ ಅಭಿಮತವಿದ್ದು ಇತರ ಕಡೆ ಅದೇ ಸಮಸ್ಯೆ ಇದ್ದರೂ ಪ್ರತಿಯೊಂದು ಪ್ರಾಂತದೊಡನೆಯೂ ಪ್ರತ್ಯೇಕವಾಗಿಯೇ ವ್ಯವಹರಿಸ ತೊಡಗಿತು.

೧೯೩೭ ರಲ್ಲಿ ಕಾಂಗ್ರೆಸ್ ಪ್ರಾಂತ ಸರಕಾರಗಳು ಏರ್ಪಟ್ಟ ಒಡನೆ ಕಾಂಗ್ರೆಸ್ ಕಾರ್ಯಸಮಿತಿ ಈ ರೀತಿ ನಿರ್ಣಯ ಮಾಡಿತು. “ರಾಷ್ಟ್ರದ ಪುನರುಜೀವನ ಮತ್ತು ಸಾಮಾಜಿಕ ಪುನರ್ವ್ಯಸ್ಥೆಯ ಯೋಜನೆಗೆ ಅತ್ಯವಶ್ಯಕವಾದ ಕೆಲವು ತ್ವರಿತದ ಮುಖ್ಯ ಪ್ರಶ್ನೆಗಳನ್ನು ಪರಿಹರಿಸಲು ತಜ್ಞರ ಒಂದು ಸಮಿತಿಯನ್ನು ರಚಿಸಬೇಕೆಂದು ಕಾಂಗ್ರೆಸ್ ಕಾರಕಾರಿ ಸಮಿತಿಯು ಕಾಂಗ್ರೆಸ್ ಮಂತ್ರಿಗಳಿಗೆ ಸಲಹೆ ಮಾಡುತ್ತದೆ. ಆ ಪರಿಹಾರ ಕಂಡುಹಿಡಿಯಲು ಆಳವಾದ ಸಮೀಕ್ಷೆಯೂ, ಅಂಕಿ ಅಂಶಗಳ ವಿಷಯ ಸಂಗ್ರಹಣವೂ, ಸ್ಪಷ್ಟವೂ ನಿರ್ದಿಷ್ಟವೂ ಆದ ಸಾಮಾಜಿಕ ಧೈಯವೂ ಅತ್ಯವಶ್ಯಕ. ಈ ಅನೇಕ ಸಮಸ್ಯೆಗಳು ನೆರೆಯ ಪ್ರಾಂತಗಳಿಗೂ ಸಂಬಂಧಿಸಿರುವುದರಿಂದ ಒಂದೇ ಪ್ರಾಂತ ದೃಷ್ಟಿಯಿಂದ ಪರಿಹರಿಸಲು ಸಾಧ್ಯವಿಲ್ಲ ; ನದಿಗಳ ಪ್ರವಾಹದ ವಿನಾಶಕಾರಕ ಹಾವಳಿ ತಪ್ಪಿಸುವುದು, ನೀರಾವರಿ ಕೆಲಸಗಳಿಗೆ ನೀರನ್ನು ಉಪಯೋಗಿಸುವುದು, ಭೂಮಿ ಕೊರಕಲು ಬೀಳದಂತೆ ತಡೆಗಟ್ಟುವುದು, ಮಲೇರಿಯಾ ರೋಗದ ಹಾವಳಿ ನಿಲ್ಲಿಸುವುದು, ವಿದ್ಯುಚ್ಛಕ್ತಿಯ ನಿರ್ಮಾಣ ಮುಂತಾದ ಯೋಜನೆಗಳಿಗೆ ಸಮಗ್ರ ದೃಷ್ಟಿಯಿಂದ ನದಿ ಕಣಿವೆಗಳ ಸಮೀಕ್ಷೆಗಳು ಅವಶ್ಯ ಇವೆ. ಇದಕ್ಕಾಗಿ ಇಡೀ ನದೀ ಕಣಿವೆಯನ್ನೇ ಸಾಕ್ಷಿಸಿ ವಿಚಾರಮಾಡಿ ದೊಡ್ಡ ಪ್ರಮಾಣದ ರಾಷ್ಟ್ರ ಯೋಜನೆಯನೆಯನ್ನೇ ಕೈಗೊಳ್ಳಬೇಕಾಗುತ್ತದೆ. ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಿ ಹತೋಟಿಯಲ್ಲಿಡಲು ಸಹ ಅನೇಕ ಪ್ರಾಂತಗಳ ಒಮ್ಮುಖ ಪ್ರಯತ್ನ ಮತ್ತು ಸಹಕಾರ ಅವಶ್ಯವಿದೆ. ಆದ್ದರಿಂದ ಈ ಸಮಸ್ಯೆಯ ಸಾಮಾನ್ಯ ಸ್ವಭಾವ ಕಂಡುಹಿಡಿದು ಯಾವ ಕ್ರಮದಲ್ಲಿ ಹೇಗೆ ಅದನ್ನು ಎದುರಿಸಬೇಕೆಂದು ಸಲಹೆಮಾಡಲು ಒಂದು ಅಂತರ ಪ್ರಾಂತೀಯ ತಜ್ಞರ ಸಮಿತಿಯನ್ನು ರಚಿಸಬೇಕೆಂದು ಕಾರ್ಯಸಮಿತಿಯು ಸೂಚಿಸುತ್ತದೆ. ಪ್ರತಿಯೊಂದು ಸಮಸ್ಯೆಯನ್ನೂ ಪ್ರತ್ಯೇಕ ವಿಚಾರ ಮಾಡುವದಕ್ಕೂ ಮತ್ತು ಸಂಬಂಧಪಟ್ಟ ಪ್ರಾಂತ ಸರಕಾರಗಳು ಯಾವ ರೀತಿ ಒಮ್ಮುಖ ಕಾರ್ಯನೀತಿ ಅನುಸರಿಸಬೇಕೆಂದು ಸಲಹೆ ಮಾಡುವದಕ್ಕೂ ಸಮಿತಿಯು ವಿಶೇಷ ಉಪಸಮಿತಿಗಳನ್ನು ಏರ್ಪಡಿಸಬಹುದು.”

ಪ್ರಾಂತ ಸರಕಾರಗಳಿಗೆ ಕೆಲವು ವೇಳೆ ಕಾಂಗ್ರೆಸ್ ಕಾರ್ಯಸಮಿತಿಯು ಕೊಡುತ್ತಿದ್ದ ಸಲಹೆಗಳು ಏನು ಎಂಬುದಕ್ಕೆ ಈ ನಿರ್ಣಯ ಒಂದು ನಿದರ್ಶನ. ಆರ್ಥಿಕ ಮತ್ತು ಕೈಗಾರಿಕಾ ನೀತಿಯಲ್ಲಿ ಪ್ರಾಂತ ಸರ್ಕಾರಗಳು ಸಹಕರಿಸಿ ಕೆಲಸಮಾಡುವಂತೆ ಪ್ರೋತ್ಸಾಹ ಕೊಟ್ಟಿದ್ದ ಕ್ಕೂ ಇದು ನಿದರ್ಶನ. ಈ ಸಲಹೆಯನ್ನು ಕಾಂಗ್ರೆಸ್ ಸರ್ಕಾರಗಳಿಗೆ ಮಾತ್ರ ಕೊಡುತ್ತಿದ್ದರೂ ಅದರ ವ್ಯಾಪ್ತಿಯನ್ನು ಅಷ್ಟಕ್ಕೇ ನಿಲ್ಲಿಸಲಿಲ್ಲ. ಸಮಗ್ರ ನದಿ ಕಣಿವೆಯ ಸಮೀಕ್ಷೆ ಎಂದರೆ ಎರಡು ಮೂರು ಪ್ರಾಂತಗಳ ಗಡಿಯೊಳಗೆ ನಡೆಯಬೇಕಾಗುತ್ತದೆ. ಗಂಗಾ ನದಿ ಕಣಿವೆಯ ಸಮೀಕ್ಷೆಗಾಗಿ ಗಂಗಾನದಿ ಸಮಿತಿಯನ್ನು ನೇಮಿಸಬೇಕಾದ್ದು ಅತಿ ಮುಖ್ಯ ಕೆಲಸ. ಅದು ಇನ್ನೂ ಸಾಧ್ಯವಾಗಿಲ್ಲ. ಆದರೆ ಸಂಯುಕ್ತ ಪ್ರಾಂತ, ಬೀಹಾರ ಮತ್ತು ಬಂಗಾಲ ಸರಕಾರಗಳು ಸಹಕರಿಸದೆ ಅದು ಸಾಧ್ಯವಿಲ್ಲ.

ರಾಷ್ಟ್ರದ ಬೃಹದ್ಯೋಜನೆಗಳಿಗೆ ಕಾಂಗ್ರೆಸ್ ಎಷ್ಟು ಪ್ರಾಮುಖ್ಯತೆ ಕೊಟ್ಟಿತು ಎಂಬುದನ್ನು ಸಹ ಈ ನಿರ್ಣಯದಿಂದ ನೋಡಬಹುದು. ಕೇಂದ್ರದಲ್ಲಿ ಪ್ರಜಾಪ್ರಭುತ್ವವಿಲ್ಲದೆ, ಪ್ರಾಂತ ಸರಕಾರಗಳ ಮೇಲಿನ ಬಂಧನ ಕಳಚದೆ ಅಂತಹ ಯೋಜನೆಗಳಿಗೆ ಸಾಧ್ಯವೇ ಇರಲಿಲ್ಲ. ಆದರೂ ಅತ್ಯವಶ್ಯಕವಾದ ಪೂರ್ವ ಸಿದ್ದತೆಯನ್ನು ಮಾಡಬಹುದೆಂದೂ, ಮುಂದಿನ ಯೋಜನೆಗೆ ತಳಹದಿ ಹಾಕಬಹುದೆಂದೂ ಯೋಚಿಸಿದೆವು. ದುರದೃಷ್ಟದಿಂದ ಪ್ರಾಂತಸರಕಾರಗಳು ತಮ್ಮ ಸ್ವಂತ ಸಮಸ್ಯೆಗಳಲ್ಲೇ ಮಗ್ನರಾದುದರಿಂದ ಈ ನಿರ್ಣಯ ಕಾರ್ಯಗತವಾಗಲು ತಡವಾಯಿತು. ೧೯೩೮ ನೆಯ ವರ್ಷದ ಕೊನೆಯಲ್ಲಿ ರಚಿತವಾದ ರಾಷ್ಟ್ರೀಯ ಯೋಜನಾ ಸಮಿತಿಗೆ ನಾನೇ ಅಧ್ಯಕ್ಷನಾದೆನು.