ಪುಟ:ಭಾರತ ದರ್ಶನ.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೩೯

ಏಕಾಏಕಿ ಪೂರ್ಣ ವ್ಯತ್ಯಾಸಗೊಳಿಸುವುದು ಅಸಾಧ್ಯವಿತ್ತು. ಕೆಲವು ವ್ಯಕ್ತಿಗಳು ಪರಿವರ್ತನೆಗೊಳ್ಳಬಹುದು. ಇನ್ನು ಕೆಲವರು ಹೊಸಸನ್ನಿವೇಶಕ್ಕೆ ಹೊಂದಿಕೊಳ್ಳಬಹುದು; ಆದರೆ ಅವರಲ್ಲಿ ಬಹುಸಂಖ್ಯಾತರ ಭಾವನೆಯು ತೀರ ಭಿನ್ನ ವಿದ್ದು ಅವರ ವರ್ತನೆಯೂ ಬೇರೆ ಇತ್ತು. ಇವರಲ್ಲಿ ಪ್ರಳಯಾಂತಕ ಪರಿವರ್ತನೆಯಾಗಿ ಅವರು ಹೊಸಬಾಳಿನ ಹರಿಕಾರರಾಗಬೇಕೆಂದರೆ ಹೇಗೆ ಸಾಧ್ಯ ? ಹೆಚ್ಚೆಂದರೆ ಅರೆಮನಸ್ಸಿನಿಂದ ನಿಧಾನವಾಗಿ ಹೊಂದಿಕೊಂಡಾರು. ಅವರ ಅಧಿಕಾರಪಟ್ಟಕ್ಕೇ ಸಂಚಕಾರ ತರುವ ಮತ್ತು ಅವರಿಗೆ ವಿಶ್ವಾಸವಿಲ್ಲದ ಈ ಹೊಸ ಕಾರ್ಯ ವಿಧಾನದಲ್ಲಿ ಉಜ್ವಲ ಕಾರ್ಯೊತ್ಸಾಹ ತೋರುವುದು ಅವರಿಗೆ ಸಾಧ್ಯವಿರಲಿಲ್ಲ. ಆದರೆ ಅರೆಮನಸ್ಸಿನ ವಿಶ್ವಾಸವೂ ಅನೇಕಬಾರಿ ಅವರಲ್ಲಿ ತೋರಲಿಲ್ಲ.

ನಿರಂಕುಶಾಧಿಕಾರ ಮತ್ತು ದರ್ಪದಿಂದ ಬಹುಕಾಲ ಆಡಳಿತ ನಡೆಸಿದ ಸಿವಿಲ್ ಸರ್ವಿಸಿನ ಉನ್ನತ ಅಧಿಕಾರಿಗಳಂತೂ ಈ ಮಂತ್ರಿಗಳು ಮತ್ತು ಶಾಸನ ಸಭಾ ಸದಸ್ಯರನ್ನು ತಮ್ಮ ಮೀಸಲು ರಾಜ್ಯದ ಅತಿ ಕ್ರಮಣಕಾರರೆಂದು ಭಾವಿಸಿದರು. ಮುಖ್ಯವಾಗಿ ಬ್ರಿಟಿಷ್ ಅಧಿಕಾರಿಗಳಲ್ಲಿದ್ದ “ಇಂಡಿಯ ಎಂದರೆ ತಾವು, ಉಳಿದದ್ದೆಲ್ಲ ಎಣಿಕೆಗೆ ಬಾರದ ವಸ್ತು” ಎಂಬ ಭಾವನೆ ನಾಶವಾಗುವುದು ಕಷ್ಟವಾಯಿತು. ಈ ಆಗಂತುಕರನ್ನು ಸಹಿಸುವುದೂ, ಅವರಿಂದ ಆಜ್ಞೆ ಪಡೆಯುವುದೂ ಅವರಿಗೆ ಕಷ್ಟವಾಯಿತು. ಅಸ್ಪೃಶ್ಯರು ತಮ್ಮ ಪವಿತ್ರ ದೇವಸ್ಥಾನದೊಳಗೆ ಪ್ರವೇಶಮಾಡಿದರೆ ಸನಾತನಿ ಹಿಂದೂಗಳಿಗೆ ಯಾವ ಭಾವನೆಯಾಗುತ್ತದೆಯೋ ಅದೇ ಭಾವನೆ ಈ ಉನ್ನತ ಅಧಿಕಾರಿಗಳಲ್ಲೂ ಉಂಟಾಯಿತು. ಅವರಿಗೊಂದು ಜಾತಿಧರ್ಮವಾಗಿದ್ದು ಕಷ್ಟ ಪಟ್ಟು ಕಟ್ಟಿದ ದರ್ಪ ಮತ್ತು ಜನಾಂಗ ಶ್ರೇಷ್ಠತೆ ಕುಸಿದು ಬೀಳುವುದರಲ್ಲಿತ್ತು. ಚೀಣರಿಗೆ “ಮುಖ”ದಲ್ಲಿ ಬಹಳ ನಂಬಿಕೆಯಂತೆ, ಆದರೂ ಭಾರತದಲ್ಲಿ ಬ್ರಿಟಿಷರಿಗೆ ಇದ್ದ “ಮುಖ'ದರ್ಪವನ್ನು ಬೇರೆಲ್ಲೂ ಕಾಣೆ. ಅವರಿಗೆ ಅದು ತಮ್ಮ ವೈಯಕ್ತಿಕ ಜನಾಂಗ ಮತ್ತು ರಾಷ್ಟ್ರೀಯ ಪ್ರಶ್ನೆ ಮಾತ್ರವಾಗಿರದೆ ತಮ್ಮ ಅಧಿಕಾರ ಮತ್ತು ಹಕ್ಕಿನ ಪ್ರಶ್ನೆಯೂ ಆಗಿತ್ತು.

ಆದರೂ ಈ ಆಗುಂತಕರನ್ನು ಸಹಿಸಬೇಕಾಗಿತ್ತು ; ಆದರೆ ಆಪತ್ತಿನ ಭಯ ಹಿಮ್ಮೆಟ್ಟಿದಂತೆ ಅವರ ಸಹನೆಯೂ ಕಡಮೆಯಾಗುತ್ತ ಬಂದಿತು. ಆಡಳಿತದ ಎಲ್ಲ ಇಲಾಖೆಗಳಲ್ಲೂ ಇದೇ ಭಾವನೆ ಬೆಳೆಯಿತು; ಆದರೆ ಆಡಳಿತಕೇಂದ್ರದಿಂದ ದೂರದ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಮೀಸಲಾಗಿದ್ದ ಶಾಂತಿಪಾಲನೆ ಮತ್ತು ರಕ್ಷಣೆ ಇಲಾಖೆಗಳಲ್ಲಿ ಈ ಅಸಹನೆ ಇನ್ನೂ ಹೆಚ್ಚಿತು. ವ್ಯಕ್ತಿ ಸ್ವಾತಂತ್ರಕ್ಕೆ ಕಾಂಗ್ರೆಸ್ ಕೊಟ್ಟ ಮಹತ್ವದ ನೆಪದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರು ಆಗಬಾರದ ಕಾರ್ಯಗಳಿಗೆ ಅವಕಾಶಕೊಟ್ಟರು. ಈ ಅನಿಷ್ಟ ದುಷ್ಕೃತ್ಯಗಳಿಗೆ ಕೆಲವು ಕಡೆ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರಿಂದಲೇ ಪ್ರೋತ್ಸಾಹದೊರೆಯಿತೆಂದು ನನಗೆ ಮನವರಿಕೆಯಾಗಿದೆ. ಅನೇಕ ಕೋಮುವಾರು ದಂಗೆಗಳಾದದ್ದು ಬೇರೆ ಬೇರೆ ಕಾರಣಗಳಿಂದ ಆದರೂ ನ್ಯಾಯಾಧೀಶರುಗಳೂ ಪೊಲೀಸರೂ ನಿರ್ದೋಷಿಗಳಾಗಿರಲಿಲ್ಲ. ದಕ್ಷತೆಯಿಂದ ಶೀಘ್ರ ಕಾರ್ಯಕ್ರಮ ತೆಗೆದುಕೊಂಡರೆ ದಂಗೆ ಅಡಗಿಸುವುದು ಸಾಧ್ಯವೆಂದು ಅನುಭವದಿಂದ ತಿಳಿದಿತ್ತು. ಆದರೆ ಪ್ರತಿಯೊಂದು ಬಾರಿ ಪೊಲೀಸರು ತೋರಿಸುತ್ತಿದ್ದ ನಿಧಾನ ಮತ್ತು ಕಾರ್ಯವಿಮುಖತೆ ಅತ್ಯಾಶ್ಚರ್ಯವಾಗಿತ್ತು. ಕಾಂಗ್ರೆಸ್ ಸರಕಾರಗಳನ್ನು ದೂಷಣೆಗೆ ಗುರಿಮಾಡುವುದೇ ಅವರ ಉದ್ದೇಶವೆಂಬುದು ಸ್ಪಷ್ಟವಾಯಿತು. ಸ್ಥಳೀಯ ಅಧಿಕಾರಿಗಳ ಮನಃಪೂರ್ವಕ ಅಜಾಗರೂಕತೆ ಮತ್ತು ಅವ್ಯವಸ್ಥೆಗೆ ಸಂಯುಕ್ತ ಪ್ರಾಂತದ ಕೈಗಾರಿಕಾ ಕೇಂದ್ರವಾದ ಕಾಮ್ಪುರದ ನಿದರ್ಶನವೇ ಸಾಕು. ೧೯೨೦ ರಿಂದ ೧೯೩೫ ರ ವರೆಗೆ ಕೋಮುವಾರು ತಿಕ್ಕಾಟದಿಂದ ಸ್ಥಳೀಯ ದಂಗೆಗಳು ಕೆಲವು ಕಡೆ ಹೆಚ್ಚಾದವು. ಕಾಂಗ್ರೆಸ್ ಸರಕಾರಗಳು ಅಧಿಕಾರಕ್ಕೆ ಬಂದಮೇಲೆ ಇದು ಸ್ವಲ್ಪಮಟ್ಟಿಗೆ ಕಡಮೆಯಾಯಿತು. ಆದರೆ ಈಗ ಅದರ ಸ್ವಭಾವವು ಬದಲಾಗಿ ಸ್ಪಷ್ಟ ರಾಜಕೀಯ ರೂಪ ತಾಳಿತು; ಮತ್ತು ಅಧಿಕಾರಿಗಳ ಮನಃಪೂರ್ವಕ ಪ್ರೋತ್ಸಾಹವೂ ದೊರೆಯಿತು, ವ್ಯವಸ್ಥಿತವೂ ಆಯಿತು.

ಸಿವಿಲ್ ಸರ್ವಿಸ್ ಅಧಿಕಾರಿಗಳು ಬಹಳ ದಕ್ಷರೆಂದು ಒಂದು ಮುಖ್ಯ ಸ್ವಯಂಕಲ್ಪಿತ ಪ್ರತೀತಿ ಇತ್ತು. ಆದರೆ ತಮಗೆ ಅಭ್ಯಾಸವಾಗಿದ್ದ ಸಂಕುಚಿತ ಆವರಣ ಬಿಟ್ಟರೆ ಅಸಾಯಕರೂ, ನಿರುಪಯೋಗಿಗಳೂ ಎಂದು