ಪುಟ:ಭಾರತ ದರ್ಶನ.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦೪

ಭಾರತ ದರ್ಶನ

ಅವರ ತತ್ವ ಸಾಕ್ಷಾತ್ಕಾರದ ಒರೆಗಲ್ಲು. ಆದರೆ ಕಲ್ಲಿನೇಟು ತಿಂದ ರಾಷ್ಟ್ರ ನಾಯಕನಿಗೆ ಬುದ್ಧಿಶಕ್ತಿ ಕಡಮೆಯಾಗಿ ತನ್ನ ಕಾರ್ಯದಲ್ಲಿ ಅಪಯಶಸ್ಸು ಪಡೆಯಬಹುದು. ಅಥವ ಧರ್ಮಪ್ರವರ್ತಕ ತನ್ನ ಕೆಲಸಕ್ಕೂ ತಾರತಮ್ಯವರಿಯದೆ ಬುದ್ಧಿ ಭ್ರಮೆಯಿಂದ ಅಪಯಶಸ್ಸು ಪಡೆಯಬಹುದು. ಅಂತ್ಯದಲ್ಲಿ ಆತನ ನಾಯಕತ್ವದ ಲೋಪದೋಷಗಳಲ್ಲಿ ಆತನ ಮಹಾತ್ಯಾಗದ ಎದುರು ಮರೆತು ಹೋಗಿ ಆತನ ಮಾನವೀಯತೆಗೆ ಗೌರವ ದೊರೆಯುತ್ತದೆ. ಇಲ್ಲವೇ ಎಂಬುದನ್ನು ಭವಿಷ್ಯ ಮಾತ್ರ ನಿರ್ಧರಿಸಬಲ್ಲುದು. ಏನೇ ಆಗಲಿ ಇತರ ನಾಯಕರು ಧ್ಯೇಯ ಸಾಧನೆಗೆ ಸ್ವಲ್ಪವೂ ಉಪಯೋಗವಿಲ್ಲದಿದ್ದರೂ ತಾತ್ಕಾಲಿಕ ಲಾಭಕ್ಕಾಗಿ ಸತ್ಯದ ಕೊಲೆಮಾಡುವ ಸಾಮಾನ್ಯ ತಪ್ಪಿನಿಂದಲಾದರೂ ಆತನು ದೂರ ಇರುತ್ತಾನೆ. ಚಾತುರದ ಹೆಸರಿನಲ್ಲಿ ಏಕೆಂದರೆ ಸತ್ಯದ ಕೊಲೆಯೇ ಒಂದು ಅಭ್ಯಾಸವಾದರೆ ಆತನ ಭಾವನಾಗರ್ಭದಿಂದ ಹೊರಬೀಳುವುದೆಲ್ಲ ವಿಕೃತಭಾವನೆಗಳೇ ಆಗುತ್ತವೆ.

ಸತ್ಯಾವಲಂಬನೆಯಲ್ಲೂ ಪ್ರಗತಿ ಹೊಂದುತ್ತ ಸತ್ಯಸಾಧನೆಯಲ್ಲಿ ಎಲ್ಲ ಪ್ರಗತಿಯನ್ನೂ ಒಂದು ಗುರಿಯ ಕಡೆಗೆ ತಿರುಗಿಸಲು ರಾಜಮಾರ್ಗ ಯಾವುದಾದರೂ ಇದೆಯೇ? ಸಮಯೋಚಿತ ಕೌಶಲ್ಯದಿಂದ ತಮ್ಮ ಪ್ರತಿಪಾದನೆ ಮಾಡುತ್ತ ಹೋದರೆ ಪ್ರಾಯಶಃ ಇದು ಸಾಧ್ಯವಾಗಬಹುದು; ಅಂತಿಮ ಧ್ಯೇಯದ ಪ್ರಾಮುಖ್ಯತೆ ಬಿಟ್ಟು ಕೊಡದೆ ಸಮಯೋಚಿತ ಮಾರ್ಗದಲ್ಲಿ ಅದನ್ನು ಸಾಧಿಸಹೋದರೆ ಸಾಧ್ಯವಾಗಬಹುದು, ಸತ್ಯಕ್ಕೆ ವಿರೋಧವಿದ್ದೇ ಇರುತ್ತದೆ; ಅದರಲ್ಲೂ ಅದು ಹೊಸ ಭಾವನೆಯ ಸ್ವರೂಪ ತಾಳಿದರೆ ಸತ್ಯದ ಗುರಿ ಮಾತ್ರವಲ್ಲದೆ ಅದರ ಸಾಧನೆಯ ಮಾರ್ಗದ ಕಡೆಗೂ ಸ್ವಲ್ಪ ಗಮನ ಕೊಟ್ಟರೆ ವಿರೋಧದ ಪ್ರಮಾಣ ಸ್ವಲ್ಪ ಕಡಿಮೆ ಮಾಡಬಹುದು. ಎದುರಿನ ವಿರೋಧ ನಿರ್ಮೂಲಮಾಡಿ ಪ್ರವೇಶಮಾಡಲು ಯತ್ನಿಸುವ ಬದಲು ಅಕ್ಕ ಪಕ್ಕದ ಒಳದಾರಿಯಲ್ಲಿ ಪ್ರವೇಶಮಾಡಿದರೆ ಸತ್ಯ ಪ್ರವೇಶಕ್ಕೆ ಹೆಚ್ಚು ಇಂಬು ದೊರೆಯುತ್ತದೆ. ಆದರೆ ಈ ಬಗೆಯ ಯಾವ ಅಪ್ರತ್ಯಕ್ಷ ಪ್ರವೇಶದಲ್ಲಿಯೇ ಆಗಲಿ ಸತ್ಯದಿಂದ ದೂರ ಆಗದಂತೆ ಮಾತ್ರ ಎಚ್ಚರದಿಂದ ಇರಬೇಕು; ಏಕೆಂದರೆ ಅಂತ್ಯಕ್ಕೆ ಬೀಳುವುದೆಂದರೆ ಎಲ್ಲ ನಿಜವಾದ ಪ್ರಗತಿಗೂ ಅಡ್ಡಗೋಡೆ ಹಾಕಿದಂತೆ. ಹೊಸಭಾವನೆಗಳಿಗೆ ಜನಬೆಂಬಲ ಹೇಗೆ ದೊರೆಯಿತೆಂದು ಬೇರೆ ಬೇರೆ ಹಂತಗಳಿಂದ ನೋಡುತ್ತ ಹೋದರೆ, ಅವುಗಳನ್ನು ಕೇವಲ ಹೊಸ ಭಾವನೆಗಳೆಂದು ಪ್ರಚಾರಮಾಡ ಹೋಗದೆ ಮೊದಲಿನಿಂದ ಆಚರಣೆಯಲ್ಲಿದ್ದು ಈಚೆಗೆ ನಾವು ಮರೆತ ರೀತಿ ನೀತಿಗಳ ಆಧುನಿಕ ರೀತಿಯ ಪುನರುಜ್ಜಿವನ ಎಂದು ಪ್ರಚಾರಮಾಡಿದಾಗ ಮಾರ್ಗ ಸುಗಮವಾಗಿರುವುದು ಕಂಡುಬರುತ್ತದೆ. ಅದಕ್ಕೆ ಬೇಕಾದ್ದು ಮೋಸವಲ್ಲ; ಆದರೆ ಕಳಚಿದ ಕೊಂಡಿಯನ್ನು ಹುಡುಕಿ ಸೇರಿಸುವುದು. ಏಕೆಂದರೆ ಪ್ರಪಂಚದಲ್ಲಿ ಹೊಸತೆಂಬುದು ಯಾವುದೂ ಇಲ್ಲ.”*

೭. ಬಿಕ್ಕಟ್ಟು.

೧೯೪೨ರ ಆರಂಭದ ತಿಂಗಳುಗಳಲ್ಲಿ ಭಾರತದಲ್ಲಿ ಬಿಕ್ಕಟ್ಟು ಬೆಳೆಯುತ್ತ ಬಂದಿತು. ಯುದ್ಧ ರಂಗವೂ ತೀರ ಹತ್ತಿರ ಬಂದಿತ್ತಲ್ಲದೆ ಭಾರತದ ನಗರಗಳ ಮೇಲೆ ವಿಮಾನಧಾಳಿಯ ಭಯವೂ ಹೆಚ್ಚಿತು. ಈಗ ಯುದ್ಧರಂಗಗಳಾದ ಪೌರ್ವಾತ್ಯ ದೇಶಗಳ ಭವಿಷ್ಯವೇನು? ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಇರುವ ಸಂಬಂಧದಲ್ಲಿ ಯಾವ ಹೊಸ ಘಟನೆಗಳೇಳುತ್ತವೆ? ಒಬ್ಬರನೊಬ್ಬರು ಗುರುಗುಟ್ಟಿ ನೋಡುತ್ತ, ಕೈ ಕಟ್ಟಿ ಕುಳಿತು, ಹಿಂದಿನ ಇತಿಹಾಸದ ಕಹಿ ನೆನಪಿನಿಂದ ದೂರಸರಿದು, ಯಾರಿಂದಲೂ ಬಿಡಿಸಲಾಗದ ದುರಂತ ದುರದೃಷ್ಟವೆಂದು ಹಿಂದಿನಂತೆ ಬಾಳುವುದೆ? ಇಬ್ಬರ ಎದುರು ನಿಂತ ವಿಪತ್ತಿನ ಸಮಯದಲ್ಲಿ ಇಬ್ಬರೂ ನಮ್ಮ ನಮ್ಮ ಭಿನ್ನ ಭಾವನೆಗಳನ್ನು ಮರೆತು ಸಹಕರಿಸಿ ಮುಂದುವರಿಯುವುದೆ? ಪೇಟೆಯ ವರ್ತಕರು ಸಹ ತಮ್ಮ ನಿದ್ರೆಯಿಂದ ಎಚ್ಚೆತ್ತರು; ಎಲ್ಲರಲ್ಲ ಒಂದು ಕೌತುಕ ದೃಷ್ಟಿ, ಯಾರ ಬಾಯಲ್ಲಿ ನೋಡಿದರೂ ಏನೇನೋ ಸುದ್ದಿ. ವಿದ್ಯುದ್ವೇಗದ ಪ್ರಳಯ ಮುನ್ನುಗ್ಗುವಂತೆ ಹಣವಂತರು ಭಯಗ್ರಸ್ತರಾದರು; ಭವಿಷ್ಯ

*Liddel Hart—Strategy of Indirect Approach.