ಪುಟ:ಭಾರತ ದರ್ಶನ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೪೦೭

ಮೇಲೆ ಮಮತೆ ಹೆಚ್ಚಿತು; ಅವರ ಶಕ್ತಿ ಮತ್ತು ಕಾರ್ಯಪಟುತ್ವಗಳು ಸಾಂಕ್ರಾಮಿಕವಾದವು. ಭಾರತದ ಬ್ರಿಟಿಷ್ ಅಧಿಕಾರಿಗಳ ಈ ಗುಣ ಅಭಾವಕ್ಕೂ ಅಮೆರಿಕನರ ಕಾರ್ಯತತ್ಪರತೆಗೂ ಯಾವ ಸಾಮ್ಯವೂ ಇರಲಿಲ್ಲ. ಅಧಿಕಾರದ ಬಿಗುಮಾನವಿಲ್ಲದ ಅವರ ಸ್ವತಂತ್ರ ಮತ್ತು ಸರಳ ಸ್ವಭಾವ ಕಂಡು ಜನ ಮೆಚ್ಚಿದರು. ಈ ಹೊಸಬರಿಗೂ ಅಧಿಕಾರಿವರ್ಗಕ್ಕೂ ಒಳಗೊಳಗೆ ನಡೆಯುತ್ತಿದ್ದ ತಿಕ್ಕಾಟ ಕಂಡು ಜನರಲ್ಲಿ ಒಂದು ಬಗೆಯ ಹರ್ಷವುಂಟಾಯಿತು; ಸುಳ್ಳೋ ನಿಜವೋ ಅನೇಕ ಕತೆಗಳೂ ಕೇಳಬಂದುವು.

ಯುದ್ಧವು ಭಾರತಕ್ಕೆ ಬಹಳ ಸಮಿಾಪ ಬಂದುದನ್ನು ಕಂಡು ಗಾಂಧಿಜಿ ಬಹಳ ತಳಮಳಗೊಂಡರು. ಅವರ ಅಹಿಂಸಾ ತತ್ತ್ವವನ್ನೂ, ಅವರ ಕಾರ್ಯನೀತಿಯನ್ನೂ ಈ ಹೊಸ ಸನ್ನಿವೇಶಕ್ಕೆ ಅಳವಡಿಸುವುದು ಕಷ್ಟವಾಯಿತು. ದಂಡೆತ್ತಿ ಬಂದ ಸೈನ್ಯದ ಎದುರಿನಲ್ಲಿ ಎರಡು ಸೈನ್ಯಗಳು ಯುದ್ಧ ಸನ್ನದ್ಧರಾಗಿ ಎದುರು ನಿಂತ ವೇಳೆಯಲ್ಲಿ ಶಾಸನಭಂಗ ಸಾಧ್ಯವಿರಲಿಲ್ಲ. ಆಕ್ರಮಣ ಒಪ್ಪುವುದೂ ಅಥವ ಸುಮ್ಮನೆ ಕುಳಿತಿರುವುದೂ ಸಾಧ್ಯವಿರಲಿಲ್ಲ. ಹಾಗಾದರೆ ಮಾಡುವುದೇನು? ಆ ಸಮಯದಲ್ಲಿ ಅಹಿಂಸೆ ಸಾಧ್ಯವಿಲ್ಲವೆಂದೂ, ದಂಡೆತ್ತಿ ಬಂದಾಗ ಸಶಸ್ತ್ರರಾಗಿ ಎದುರಿಸುವ ಬದಲು ಅಹಿಂಸೆಯಿಂದ ಎದುರಿಸಲು ಸಾಧ್ಯವಿಲ್ಲವೆಂದೂ ಅವರ ಸಹೋದ್ಯೋಗಿಗಳೂ, ಕಾಂಗ್ರೆಸ್ನ ಅಹಿಂಸೆಯನ್ನು ನಿರಾಕರಿಸಿದ್ದರು; ಆ ರೀತಿ ನಿರಾಕರಿಸಲು ನಮಗೆ ಹಕ್ಕೂ ಇದೆ ಎಂದು ಗಾಂಧಿಜಿ ಒಪ್ಪಿಯೂ ಇದ್ದರು. ಆದರೂ ಅವರು ಬಹಳ ಮನನೊಂದರು. ವೈಯಕ್ತಿಕವಾಗಿ ಯಾವ ಹಿಂಸಾತ್ಮಕ ಮಾರ್ಗವನ್ನೂ ಅವಲಂಬಿಸಲು ಅವರಿಂದ ಸಾಧ್ಯವಿರಲಿಲ್ಲ. ಆದರೆ ಅವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ರಾಷ್ಟ್ರೀಯ ಚಳುವಳಿಯಲ್ಲಿ ಅವರಿಗೆ ಒಂದು ಅಧಿಕಾರ ಸ್ಥಾನವಿರಲಿ ಇಲ್ಲದಿರಲಿ ಅವರಿಗೆ ಒಂದು ಪ್ರಭಾವಶಾಲಿಯಾದ ಉನ್ನತ ಸ್ಥಾನವಿತ್ತು; ಅವರ ಮಾತು ಅನೇಕರಿಗ ವೇದವಾಕ್ಯವಾಗಿತ್ತು.

ಹಿಂದೆ ಆಗಲಿ ಮುಂದೆ ಆಗಲಿ ಬೇರೆ ಯಾರಿಂದಲೂ ಸಾಧ್ಯವಿಲ್ಲದಂತೆ ಗಾಂಧಿಜಿ ಭಾರತದ ಹೃದಯವನ್ನು ಮುಖ್ಯವಾಗಿ ಭಾರತದ ಜನಕೋಟಿಯ ಮನಸ್ಸನ್ನು ಅರಿತಿದ್ದರು. ದೇಶಾದ್ಯಂತ ಭಾರತದಲ್ಲೆಲ್ಲ ಸಂಚಾರ ಮಾಡಿ ಕೋಟ್ಯಂತರ ಜನರ ಸೂಕ್ಷ್ಮ ಸಂಪರ್ಕ ಇದ್ದುದು ಮಾತ್ರವಲ್ಲದೆ, ಜನತೆಯಲ್ಲಿ ಒಂದು ಭಾವಾವೇಶ ತುಂಬುವ ಯಾವುದೊ ಒಂದು ಅದ್ಭುತ ಶಕ್ತಿ ಅವರಲ್ಲಿತ್ತು. ಜನತೆಯೊಂದಿಗೆ ಅವರು ಐಕ್ಯವಾಗಿ ಜನರ ಹೃದಯದೊಂದಿಗೆ ಮಿಡಿಯುತ್ತಿದ್ದರು. ಜನರಿಗೆ ಇದು ಸಂಪೂರ್ಣ ತಿಳಿದಿದ್ದರಿಂದ ಗಾಂಧಿಜಿಯಲ್ಲಿ ಅವರ ಭಕ್ತಿ ವಿಶ್ವಾಸ ಅಪಾರವಿತ್ತು. ಆದರೂ ಬಾಲ್ಯದಲ್ಲಿ ಗುಜರಾತದಲ್ಲಿ ಪಡೆದ ದೃಷ್ಟಿಯಿಂದಲೇ ಸ್ವಲ್ಪ ಮಟ್ಟಿಗೆ ಭಾರತವನ್ನೂ ನೋಡಿದರು. ಗುಜರಾತಿಗಳು ಜೈನರ ಅಹಿಂಸಾ ತತ್ತ್ವದ ಪ್ರಭಾವಕ್ಕೆ ಒಳಗಾದ ಶಾಂತಪ್ರಿಯ ವರ್ತಕರು ಮತ್ತು ವ್ಯಾಪಾರಿಗಳು. ಭಾರತದ ಇತರ ಭಾಗಗಳಲ್ಲಿ ಈ ಪ್ರಭಾವ ಅಷ್ಟು ಇರಲಿಲ್ಲ; ಕೆಲವು ಕಡೆ ಆ ಪ್ರಭಾವ ಏನೂ ಇರಲಿಲ್ಲ. ಭಾರತಾದ್ಯಂತ ಎಲ್ಲೆಡೆಯಲ್ಲೂ ಹರಡಿದ್ದ ಯುದ್ಧಪ್ರಿಯ ಕ್ಷತ್ರಿಯರಿಗೆ ಯುದ್ಧದಲ್ಲಿ ಮತ್ತು ಬೇಟೆಯಲ್ಲಿ ಈ ಅಹಿಂಸಾತತ್ಯ ಅಡ್ಡಿ ಬರಲಿಲ್ಲ. ಆದರೆ ಬ್ರಾಹ್ಮಣರ ಇನ್ನೂ ಕೆಲವು ಪಂಗಡಗಳು ಅದರ ಪ್ರಭಾವಕ್ಕೆ ಒಳಗಾಗಿದ್ದರು. ಆದರೂ, ಭಾರತೀಯ ಇತಿಹಾಸದಲ್ಲಿ ಅಹಿಂಸಾತತ್ಯ ನಿರಾಕರಿಸಿದ ಉದಾಹರಣೆಗಳು ಅನೇಕವಿದ್ದರೂ, ಗಾಂಧಿಜಿ ಭಾರತೀಯ ದರ್ಶನದ ಮತ್ತು ಇತಿಹಾಸದ ಬೆಳವಣಿಗೆಯ ವಿಷಯದಲ್ಲಿ ಒಂದು ವಿಶಾಲ ದೃಷ್ಟಿ ಇಟ್ಟು ಅಹಿಂಸೆಯೇ ಅದರ ಮೂಲ ತತ್ತ್ವವೆಂದರು. ಈ ದೃಷ್ಟಿಗೆ ಆಧಾರವಿಲ್ಲವೆಂದು ಅನೇಕ ಭಾರತೀಯ ದಾರ್ಶನಿಕರು. ಚರಿತ್ರಕಾರರು ಭಿನ್ನಾಭಿಪ್ರಾಯ ಸೂಚಿಸಿದರು. ಆಧುನಿಕ ಮಾನವ ಜೀವನ ರೀತಿಯಲ್ಲಿ ಅಹಿಂಸೆಯ ಪಾತ್ರಾ ಪಾತ್ರತೆ ಏನು ಎಂಬುದಕ್ಕೂ ಈ ದೃಷ್ಟಿಗೂ ಯಾವ ಸಂಬಂಧವೂ ಇಲ್ಲದಿದ್ದರೂ ಗಾಂಧಿಜಿಯ ಮನಸ್ಸಿನಲ್ಲಿ ಒಂದು ಐತಿಹಾಸಿಕ ಒಲವು ಇತ್ತೆಂಬುದು ಸ್ಪಷ್ಟವಿದೆ.

ಭೂಗೋಲದ ಆಕಸ್ಮಿಕಗಳು ರಾಷ್ಟ್ರೀಯ ಶೀಲ ಮತ್ತು ಇತಿಹಾಸ ನಿರ್ಧರಿಸುವುದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಉತ್ತರದಲ್ಲಿ ಭದ್ರವಾದ ಕೋಟೆಯಂತಿದ್ದ ಹಿಮಾಲಯ ಪರ್ವತ ಶ್ರೇಣಿ, ಉಳಿದ ಕಡೆಗಳಲ್ಲಿ ಅಪಾರ ಸಮುದ್ರ ಇವುಗಳಿಂದ ಭಾರತಾದ್ಯಂತ ಒಂದು ಬಗೆಯ ಐಕ್ಯತೆಯುಂಟಾಯಿತು. ಜೊತೆಗೆ ಒಂದು ಬಗೆಯ ಪ್ರತ್ಯೇಕತಾ ಭಾವನೆಯೂ ಬೆಳೆಯಿತು. ಈ ವಿಶಾಲ ದೇಶದಲ್ಲಿ ಆಸೇತು