ಪುಟ:ಭಾರತ ದರ್ಶನ.djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨೨

ಭಾರತ ದರ್ಶನ

ಸೋಲು ಗೆಲುವು ಯಾರದೇ ಇರಲಿ, ಯುದ್ಧದ ಜಯಾಪಜಯಕ್ಕೂ ಈ ದುರಂತಕ್ಕೂ ಯಾವ ಸಂಬಂಧವೂ ಇರಲಿಲ್ಲ. ಅಕ್ಷ ರಾಷ್ಟ್ರಗಳ ಗೆಲುವು ನಮಗೆ ಇಷ್ಟವಿರಲಿಲ್ಲ. ಏಕೆಂದರೆ ಅದರಿಂದ ಸರ್ವ ನಾಶ ಖಂಡಿತವಿತ್ತು. ಜಪಾನರು ಬಂದು ಭಾರತದ ಯಾವ ಭಾಗ ಆಕ್ರಮಿಸುವುದೂ ನಮಗೆ ಇಷ್ಟವಿರಲಿಲ್ಲ. ಏನೆ ಆಗಲಿ ಅವಶ್ಯ ಅದನ್ನು ಎದುರಿಸಲೇಬೇಕೆಂದು ಜನರಿಗೆ ಮೇಲಿಂದ ಮೇಲೆ ತಿಳಿಸಿದೆವು. ಆದರೆ ಇದೆಲ್ಲ ಅಭಾವ ವೈರಾಗ್ಯದ ಮಾತು. ಈ ಯುದ್ಧದ ನಿಜವಾದ ಗುರಿಯಾದರೂ ಏನು? ನಮ್ಮ ಭವಿಷ್ಯ ಏನು? ಹಿಂದಿನ ಮೂರ್ಖತನ ಮತ್ತು ಗಂಡಾಂತರಗಳ ಪುನರಾವರ್ತನವೆ? ಮಾನವನ ಆಸೆ ಮತ್ತು ಭಾವನೆಗಳಿಗೆ ಯಾವ ಲಕ್ಷೆಯನ್ನೂ ಕೊಡದ ಪ್ರಕೃತಿ ಶಕ್ತಿಗಳ ಕುರುಡು ನಾಟಕವೆ? ಭಾರತದ ಭವಿಷ್ಯ ಏನು?

ಒಂದು ವರ್ಷದ ಹಿಂದೆ ರವೀಂದ್ರರು ತಮ್ಮ ಮರಣಶಯ್ಕೆಯಿಂದ ಕೊಟ್ಟ ಅಂತಿಮ ಸಂದೇಶವನ್ನು ನಾವು ಜ್ಞಾಪಿಸಿಕೊಂಡೆವು. “ಪಾಶವೀ ಸ್ವಭಾವದ ರಾಕ್ಷಸೀ ಶಕ್ತಿಯು ಎಲ್ಲ ನಾಚಿಕೆಯನ್ನೂ ಬಿಟ್ಟಿದೆ, ಮಾನವೀಯತೆಯನ್ನೂ ನುಚ್ಚು ನುರಿಮಾಡಿ ಪ್ರಳಯಾಂತಕ ವಿನಾಶದಲ್ಲಿ ಮುಳುಗಿಸಲು ಸಿದ್ದವಾಗಿ ನಗ್ನ ನಖಗಳನ್ನು ಚಾಚಿ ಹೊರ ಬಿದ್ದಿದೆ. ದಿಗಂತದಿಂದ ದಿಗಂತದವರೆಗೂ ಪ್ರಪಂಚವನ್ನು ಆವರಿಸಿ ದ್ವೇಷದ ವಿಷಮಯ ಹೊಗೆಯು ವಾಯುಮಂಡಲವನ್ನು ಕಪ್ಪುಗಟ್ಟಿ ಮುಸುಕಿದೆ. ಪಾಶ್ಚಾತ್ಯರ ಮನೋಭೀತಿಯ ಹಿಂದೆ ಸುಷುಪ್ತವಿದ್ದ ಹಿಂಸಾ ಮನೋಭಾವವು ಹುಚ್ಚೆದ್ದು ಕೆರಳಿ ಮಾನವೀಯತೆಯ ಭಾವನೆಯನ್ನೇ ಕುಲಗೆಡಿಸುವಂತಿದೆ.

"ಕಾಲಚಕ್ರದ ಒತ್ತಾಯದಿಂದ ಇಂಗ್ಲಿಷರು ಎಂದೋ ಒಂದು ದಿನ ಭಾರತದಲ್ಲಿನ ತಮ್ಮ ಸಾಮ್ರಾಜ್ಯದ ಅಧಿಕಾರ ತೊರೆಯಬೇಕಾಗುತ್ತದೆ. ಆದರೆ ಅವರು ಹಿಂದೆ ಬಿಟ್ಟು ಹೋಗುವ ಭಾರತದ ಸ್ಥಿತಿ ಎಂತದು? ಏನು ಸಂಕಟದ ಗೋಳು? ಶತಮಾನಗಳ ಅವರ ಅಧಿಕಾರ ಪ್ರವಾಹ ಬಿತ್ತಿದಾಗ ಅವರು ಬಿಟ್ಟು ಹೋಗುವ ಕೊಚ್ಚೆ ಎಷ್ಟು? ಕೆಸರು ಎಷ್ಟು? ಯೂರೋಪಿನ ಹೃದಯಕಮಲದಿಂದ ನಾಗರಿಕತೆಯ ಬುಗ್ಗೆ ಉಕ್ಕೇರಿ ಹರಿಯುವುದೆಂದು ಒಂದಾನೊಂದು ಕಾಲ ನಾನು ನಂಬಿದ್ದೆ. ಈ ಪ್ರಪಂಚ ಬಿಟ್ಟು ಹೊರಡುತ್ತಿರುವ ನನಗೆ ಇಂದು ಆ ನಂಬಿಕೆ ಸಂಪೂರ್ಣ ನಾಶವಾಗಿ ಹೋಗಿದೆ.

“ಎತ್ತ ನೋಡಿದರೂ ಕುಸಿದು ಬೀಳುತ್ತಿರುವ ಒಂದು ಗರ್ವಿಷ್ಠ ನಾಗರಿಕತೆಯ ಅವಶೇಷಗಳೂ ದೊಡ್ಡದೊಂದು ವಿಫಲತೆಯ ಕಸದ ರಾಶಿಯಂತೆ ಹರಡಿರುವುದು ಕಣ್ಣಿಗೆ ಕಾಣುತ್ತಿದೆ. ಆದರೂ ಮಾನವ ನಲ್ಲಿ ನಂಬಿಕೆ ಕಳೆದುಕೊಳ್ಳುವ ಮಹಾ ಪಾಪ ನಾನು ಮಾಡುವುದಿಲ್ಲ. ಈ ಪ್ರಳಯ ಕಾಲ ಕೊನೆಗಂಡು ಸೇವೆ ತ್ಯಾಗಗಳಿಂದ ವಾತಾವರಣ ತಿಳಿಗಟ್ಟಿದ ಮೇಲೆ ಮಾನವನ ಇತಿಹಾಸದಲ್ಲಿ ಹೊಸ ಅಧ್ಯಾಯ ಒಂದು ಆರಂಭವಾಗುವುದೆಂದು ನಂಬಿದ್ದೇನೆ, ಸೂದ್ಯೋದಯ ಆಗುವುದು ಇಲ್ಲಿ ಪೂರ್ವದಲ್ಲಿ; ಪ್ರಾಯಶಃ ಇದೇ ದಿಗಂತದಿಂದಲೇ ಉಷಃಕಾಲ ಆರಂಭವಾಗಬಹುದು. ಗೆದ್ದ ಮನುಷ್ಯ ತನ್ನ ಗೆಲುವಿನ ದಾರಿ ಬಿಟ್ಟು, ಎಲ್ಲ ಅಡ್ಡಗೋಡೆಗಳನ್ನೂ ಒಡೆದು, ಕಳಕೊಂಡ ಮಾನವೀಯತೆಯ ಅಸ್ತಿತ್ವವನ್ನು ಪುನಃ ಸಂಪಾದಿಸುವ ದಿನವೂ ಬರುತ್ತದೆ.

"ಪಾಶವೀಶಕ್ತಿಯ ದುರಹಂಕಾರದ ಜೊತೆಗೆ ಇರುವ ವಿಪತ್ತುಗಳೇ ಇಂದು ನಮ್ಮ ಕಣ್ಣಿಗೆ ಕಾಣುತ್ತಿದ್ದರೂ ಋಷಿವಾಣಿಯಲ್ಲಿ ಉಕ್ತವಿರುವ ಪೂರ್ಣ ಸತ್ಯವು ಒಂದಲ್ಲ ಒಂದು ದಿನ ಬೆಳಕಿಗೆ ಬಂದೇ ಬರುತ್ತದೆ.

"ಅಧರ್ಮದಿಂದ ಮನುಷ್ಯ ಕೀರ್ತಿ ಪಡೆಯಬಹುದು, ಕಾಮಿತ ವಸ್ತುಗಳನ್ನು ಸಂಪಾದಿಸಬಹುದು, ಶತ್ರುಗಳನ್ನು ಜಯಿಸಬಹುದು, ಆದರೆ ಮೂಲತಃ ನಾಶಹೊಂದುತ್ತಾನೆ.”

ಇಲ್ಲಿ ಮಾನವನಲ್ಲಿ ನಂಬಿಕೆ ಕಳೆದುಕೊಳ್ಳಬಾರದು. ದೇವರು ಇಲ್ಲವೆಂದರೂ ಅನ್ನಬಹುದು; ಆದರೆ ಮಾನವನ ಅಸ್ತಿತ್ವದಲ್ಲು ನಂಬಿಕೆ ಇಡದಿದ್ದರೆ ಉಳಿಯುವುದೇನು? ಎಲ್ಲವೂ ನಿಷ್ಫಲ. ಆದರೆ ಯಾವುದರಲ್ಲಿ ನಂಬಿಕೆ ಇಡುವುದೂ ಕಷ್ಟವಾಗಿತ್ತು; ಧರ್ಮಕ್ಕೆ ಜಯ ಸಿದ್ಧವೆಂದು ನಂಬುವುದೂ ಕಷ್ಟವಿತ್ತು.