ಪುಟ:ಭಾರತ ದರ್ಶನ.djvu/೪೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅ೦ಕ ೩

೪೨೫

ಅವಶ್ಯಕತೆ ಇದ್ದರೂ ಭವಿಷ್ಯದ ವಿಷಯದಲ್ಲಿ ಸಂಶಯವಿತ್ತು. ಸೋವಿಯಟ್ ಯೂನಿಯನ್‌ನಲ್ಲಿ ನಮಗೆ ತಿಳಿದ ಮಟ್ಟಿಗೆ ಯಾವ ಅನುಮಾನ ಅಥವ ಚರ್ಚೆಯೂ ಇರಲಿಲ್ಲ (ಅದಕ್ಕೆ ಅವಕಾಶ ಇರಲಿಲ್ಲವೆಂಬುದೂ ನಿಜ.) ತಮ್ಮ ಮುಂದಿನ ಧ್ಯೇಯದಲ್ಲಿ ಸಂಪೂರ್ಣ ಆತ್ಮವಿಶ್ವಾಸವಿತ್ತು.

ಭಾರತದಲ್ಲಿ? ಪ್ರಸಕ್ತ ಪರಿಸ್ಥಿತಿಯಿಂದ ಎಲ್ಲರೂ ಬೇಸರಗೊಂಡಿದ್ದರು, ಭವಿಷ್ಯವಂತೂ ಕಾಣದ ಕಗ್ಗತ್ತಲೆಯಾಗಿತ್ತು. ಜನರಲ್ಲಿ ದೇಶವಾತ್ಸಲ್ಯದಿಂದ ಹೊರಹೊಮ್ಮಿದ ಉನ್ನತ ಧ್ಯೇಯ ಯಾವುದೂ ಇರಲಿಲ್ಲ; ಪರಾಕ್ರಮಣದಿಂದ ಮತ್ತು ದೊಡ್ಡ ವಿಪತ್ತಿನಿಂದ ರಕ್ಷಣೆ ಮಾಡಿಕೊಳ್ಳಲು ಇಷ್ಟ ಮಾತ್ರ ಇತ್ತು. ಕೆಲವರು ಅಂತರ ರಾಷ್ಟ್ರೀಯ ಭಾವನೆಗಳಿಂದ ಮಾತನಾಡುತ್ತಿದ್ದರು. ಈ ಎಲ್ಲ ಭಾವನೆಗಳ ಕಲಸು ಮೇಲೋಗರದಲ್ಲಿ ಪರಕೀಯ ಸಾಮ್ರಾಜ್ಯ ಶಕ್ತಿಯು ಜನರನ್ನು ತುಳಿದು ಸುಲಿಗೆ ಮಾಡಿ ಆಜ್ಞೆ ಮಾಡುತ್ತ ಇತ್ತು. ಆ ಸಾಮ್ರಾಜ್ಯ ಶಕ್ತಿಯ ಆಡಳಿತ ರಚನೆಯಲ್ಲಿಯೇ ಏನೋ ಒಂದು ದೊಡ್ಡ ನ್ಯೂನತೆ ಇತ್ತು; ಯಾವ ಕೆಲಸ ಇರಲಿ ನಿರಂಕುಶ ಅಧಿಕಾರಿಯ ಇಷ್ಟ ಮತ್ತು ಮನಸ್ಸಿನಂತೆ ನಡೆಯಬೇಕಾಗಿತ್ತು, ಸ್ವಾತಂತ್ರ್ಯ ಎಲ್ಲರಿಗೂ ಬೇಕು; ಆದರೆ ಅದನ್ನು ಕಳೆದುಕೊಂಡವರಿಗೆ ಅಥವ ಕಳೆದುಕೊಳ್ಳುವೆವೆಂಬ ಭಯ ಇರುವವರಿಗೆ ಅದರ ಬೆಲೆ ಇನ್ನೂ ಹೆಚ್ಚು. ಆಧುನಿಕ ಪ್ರಪಂಚದಲ್ಲಿ ಸ್ವಾತಂತ್ರ್ಯಕ್ಕೇ ಅನೇಕ ಮಿತಿಗಳಿವೆ. ಸ್ವಾತಂತ್ರ್ಯ ಕಳೆದುಕೊಂಡವರಿಗೆ ಇದು ಅರ್ಥವಾಗದೆ ಅದಕ್ಕೊಂದು ಆದರ್ಶಭಾವನೆ ಕೊಡುತ್ತಾರೆ. ಅದರ ಪರಿಣಾಮವಾಗಿ ಸ್ವಾತಂತ್ರ ಸಾಧನೆಯ ಉತ್ಕಟೇಚ್ಛೆಯ ಒಂದು ಭಾವೋನ್ಮಾದವಾಗುತ್ತದೆ. ಆ ಇಚ್ಚೆಗೆ ಹೊಂದದ ಅಥವ ವಿರುದ್ಧ ಇರುವ ಇತರ ಯಾವ ವಿಷಯಕ್ಕೂ ಅವಕಾಶವೇ ಇಲ್ಲ. ಸಹಸ್ರ ಗಟ್ಟಲೆ ಜನರು ಅಪಾರ ತ್ಯಾಗಮಾಡಿ ಸಂಕಟ ಅನುಭವಿಸಿ ನಿರೀಕ್ಷಿಸಿದ ಸ್ವಾತಂತ್ರದ ಆಸೆಗೆ ಭಾರತದಲ್ಲಿ ದೊಡ್ಡ ಪೆಟ್ಟು ಬಿದ್ದಿತು. ಅಷ್ಟೆ ಅಲ್ಲದೆ ಎಟುಕದ ಬಹುದೂರದ ದಿಗಂತಕ್ಕೆ ಅದು ಸರಿದಂತೆಯೂ ಇತ್ತು. ಸುತ್ತಲೂ ಆವರಿಸಿದ್ದ ಪ್ರಪಂಚದ ಘೋರಯುದ್ದಕ್ಕೆ ಆ ಉತ್ಕಟೇಚ್ಛೆಯನ್ನು ಅಣಿಗೊಳಿಸಿ, ಭಾರತದ ಮತ್ತು ಪ್ರಪಂಚದ ಸ್ವಾತಂತ್ರ್ಯ ಮತ್ತು ಭಾರತದ ರಕ್ಷಣೆಗೆ ಭಾರತದ ಅಪಾರ ಶಕ್ತಿಯನ್ನು ಉಪಯೋಗಿ ಸಿಕೊಳ್ಳದೆ ಯುದ್ಧವನ್ನು ಅದರಿಂದ ಪ್ರತ್ಯೇಕಿಸಲಾಯಿತು; ಮತ್ತು ಯುದ್ಧದ ಫಲಾಫಲಗಳಲ್ಲಿ ಯಾವ ಆಸೆಯನ್ನೂ ಹುಟ್ಟಿಸಲಿಲ್ಲ. ಯಾರನ್ನೂ-ಶತ್ರುಗಳನ್ನೂ ಸಹ-ಆಶಾರಹಿತರನ್ನಾಗಿ ಬಿಡುವುದು ಒಳ್ಳೆಯದಲ್ಲ.

ಈ ಯುದ್ಧದಲ್ಲಿ ಧುಮಿಕಿರುವ ವಿವಿಧ ರಾಷ್ಟ್ರಗಳ ರಾಜಕಾರಣಿಗಳ ಅಲ್ಪ ಆಸೆಗಳಿಗಿಂತ ಈ ಯುದ್ಧವು ಮಹತ್ಪರಿಣಾಮಕಾರಿಯಾದುದೆಂದು ಭಾರತದಲ್ಲಿ ಇನ್ನು ಕೆಲವರು ಭಾವಿಸಿದ್ದರು; ಸೈನ್ಯಪಡೆಗಳ ವಿಜಯೋತ್ಸವ, ರಾಜಕಾರಣಿಗಳ ಪ್ರಣಾಳಿಕೆ, ಕೌಲು ಕರಾರುಗಳು ಏನೇ ಇರಲಿ ಯುದ್ಧದ ಪರವಸಾನ ಮತ್ತು ಅದರ ಪರಿಣಾಮದಿಂದ ಪ್ರಪಂಚದಲ್ಲಿ ಕ್ರಾಂತಿಕಾರಕ ಪರಿವರ್ತನೆ ಆಗುವುದೆಂಬ ಭಾವನೆ ಇನ್ನು ಕೆಲವರಲ್ಲಿ ಉಂಟಾಗಿ ಆ ಮಹದಾಸೆಯು ಅವರ ರಕ್ತನಾಳಗಳಲ್ಲಿ ಹರಿಯುತ್ತಿತ್ತು. ಆದರೆ ಇವರ ಸಂಖ್ಯೆ ಸ್ವಾಭಾವಿಕ ವಾಗಿ ಅತ್ಯಲ್ಪವಿತ್ತು; ಆದರೆ ಬಹು ಸಂಖ್ಯಾತರು ಇತರ ಎಲ್ಲ ದೇಶಗಳ ಜನರಂತೆ ಸಂಕುಚಿತ ವಾಸ್ತವಿಕ ದೃಷ್ಟಿಯನ್ನೆ ತಾಳಿದರು; ತಾತ್ಕಾಲಿಕ ಸಮಸ್ಯೆಗಳೇ ಅವರಿಗೆ ಮುಖ್ಯವಾದವು. ಇನ್ನು ಕೆಲವರು ಸ್ವಾರ್ಥ ದೃಷ್ಟಿಯಿಂದ ಬ್ರಿಟಿಷರ ನೀತಿಯನ್ನೇ ಒಪ್ಪಿ ಯಾವ ಅಧಿಕಾರಿವರ್ಗ ಅಥವ ನೀತಿ ಇದ್ದರೂ ಹೊಂದಿಕೊಳ್ಳುವಂತೆ ಅದರೊಂದಿಗೂ ಹೊಂದಿಕೊಂಡರು. ಇನ್ನು ಕೆಲವರು ಈ ನೀತಿಗೆ ಪ್ರತಿಭಟಿಸದೆ ಸಮ್ಮತಿ ತೋರುವುದೆಂದರೆ ಭಾರತದ ಹಿತ ಮಾತ್ರವಲ್ಲದೆ ಪ್ರಪಂಚದ ಹಿತವನ್ನು ಸಹ ಕೊಲೆಮಾಡಿದಂತಾಗುವು ದೆಂದರು. ಆದರೆ ಬಹು ಸಂಖ್ಯಾಕ ಜನತೆ ಕ್ರಿಯಾಶೂನ್ಯತೆಯಿಂದ ನಿಶ್ಚತನಗೊಂಡು ಸ್ತಂಭೀಭೂತವಾಗಿತ್ತು. ಭಾರತೀಯರ ಬಹುಕಾಲದ ಈ ಲೋಪದೋಷಗಳನ್ನು ನಿರ್ಮೂಲ ಮಾಡಬೇಕೆಂದೇ ಇಷ್ಟು ದಿನ ಹೋರಾಡಿದ್ದೆವು.

ಭಾರತದ ಮನಸ್ಸಿನಲ್ಲಿ ಈ ಹೋರಾಟ ನಡೆಯುತ್ತಿರುವಾಗ ಮತ್ತು ನಿರಾಶಾಭಾವನೆ ಬೆಳೆಯುತ್ತಿದ್ದಾಗ ಗಾಂಧಿಜಿ ಕೆಲವು ಲೇಖನಗಳನ್ನು ಬರೆದರು. ಅವುಗಳಿಂದ ಇದ್ದಕ್ಕಿದ್ದ ಹಾಗೆ ಜನರ ಭಾವನೆಗಳಿಗೆ ಒಂದು ಹೊಸ ಸ್ವರೂಪ ದೊರೆಯಿತು. ಕೆಲವು ಅಸ್ಪಷ್ಟ ಭಾವನೆಗಳಿಗೆ ಸ್ಪಷ್ಟ ಆಕೃತಿ ದೊರೆಯಿತು.

32