ಪುಟ:ಭಾರತ ದರ್ಶನ.djvu/೪೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೪೨೮
ಭಾರತ ದರ್ಶನ

ಧೈರ್ಯದಿಂದ ಪ್ರತಿಭಟಿಸುವಂತೆ ಅವರನ್ನು ಹುರಿದುಂಬಿಸುವುದು ಅತ್ಯವಶ್ಯವಿತ್ತು. ಮೊದಲು ಮೊದಲು ಬ್ರಿಟಿಷ್ ಅಧಿಕಾರಿಗಳ ನಿರಂಕುಶ ಆಜ್ಞೆಗಳ ವಿರುದ್ಧ ಈ ಪ್ರತಿಭಟನೆಯು ಆರಂಭವಾದರೂ ಅದರಿಂದ ಒಂದು ಶಕ್ತಿ ದೊರೆತು ಅನಂತರ ಆ ಶಕ್ತಿಯನ್ನು ಶತ್ರುವನ್ನು ಎದುರಿಸಲು ಉಪಯೋಗ ಮಾಡಿಕೊಳ್ಳಬಹುದು. ಒಬ್ಬನಿಗೆ ತಲೆಬಾಗಿ ಗುಲಾಮರಾಗುವುದೆಂದರೆ ಇನ್ನೊಬ್ಬನ ಎದುರಿನಲ್ಲೂ ಅದೇ ದಾಸ್ಯ ಮನೋಭಾವ ಮೂಡುತ್ತದೆ; ಅಪಮಾನಕ್ಕೂ, ಆತ್ಮಪತನಕ್ಕೂ ಮಾರ್ಗವಾಗುತ್ತದೆ ಎಂದರು.

ಈ ವಾದಸರಣಿ ಎಲ್ಲ ನಮಗೆ ಪರಿಚಯವಿತ್ತು; ಅವುಗಳಲ್ಲಿ ನಮಗೆ ಪೂರ್ಣ ವಿಶ್ವಾಸವಿತ್ತು ಮತ್ತು ಅನೇಕ ಬಾರಿ ಅವನ್ನೇ ನಾವು ಪ್ರತಿಪಾದಿಸಿದ್ದೆವು. ಆದರೆ ಅದ್ಭುತ ನೈತಿಕ ಪರಿವರ್ತನೆಗೆ ಅಡ್ಡಿ ಬಂದುದು ಬ್ರಿಟಿಷರ ನೀತಿ ಒಂದೇ. ಯುದ್ಧ ಸಮಯದಲ್ಲಿ ತಾತ್ಕಾಲಿಕ ಆದರೂ ಈ ಪ್ರಶ್ನೆ ಬಿಡಿಸಬೇಕೆಂಬ ನಮ್ಮ ಪ್ರಯತ್ನವೆಲ್ಲ ನಿಷ್ಪಲವಾಗಿತ್ತು. ಯುದ್ಧ ಗುರಿ ತಿಳಿಸಿರೆಂದು ಕೇಳಿದ ನಮ್ಮ ಕೂಗು ಎಲ್ಲ ಅರಣ್ಯ ರೋದನವಾಗಿತ್ತು. ಇನ್ನೂ ಒಂದು ಪ್ರಯತ್ನ ಮಾಡಿದರೆ ಅದರಲ್ಲೂ ಅಪಯಶಸ್ಸು ಖಂಡಿತವಿತ್ತು. ಹಾಗಾದರೆ ಮುಂದೇನು? ಹೋರಾಟವೇ ನಿಶ್ಚಯವಾದರೆ ನೈತಿಕ ಮತ್ತು ಇತರ ಕಾರಣಗಳಿಂದ ಅದು ಎಷ್ಟೇ ಸಾಧು ಇದ್ದರೂ ಭಾರತದ ಮುತ್ತಿಗೆಯ ವಿಪತ್ತಿನ ಸಮಯದಲ್ಲಿ ಯುದ್ಧ ಪ್ರಯತ್ನಗಳಿಗೆ ಅಡ್ಡಿ ಬರುವುದೆಂಬುದರಲ್ಲಿ ಯಾವ ಸಂದೇಹವೂ ಇರಲಿಲ್ಲ. ಆ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಬೇರೆ ಉಪಾಯವೂ ಇರಲಿಲ್ಲ. ಆದರೆ ಆ ಅಪಾಯದ ಭಯವೇ ನಮ್ಮ ಮನಸ್ಸಿನ ತುಮುಲ ಯುದ್ಧಕ್ಕೂ ಕಾರಣವಾಗಿತ್ತು. ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ. ವಿಷಮ ಪರಿಸ್ಥಿತಿಗೆ ತಕ್ಕ ಸಾಮರ್ಥ್ಯದಿಂದ ಜನತೆಯ ಪ್ರತಿಭಟನೆಯ ವ್ಯೂಹರಚಿಸುವ ಜವಾಬ್ದಾರಿ ಹೊರಲಾರದ, ಪೂರ್ಣ ಅಯೋಗ್ಯರೂ, ಅಶಕ್ತರೂ ಆದ ಬ್ರಿಟಿಷ್ ಅಧಿಕಾರಿಗಳ ದುರಾಡಳಿತಕ್ಕೆ ನಮ್ಮ ದೇಶ ಬಲಿಗೊಟ್ಟು ರಾಷ್ಟ್ರ ವಿನಾಶ ನೋಡಲು ಸಾಧ್ಯವಿರಲಿಲ್ಲ. ಬಹು ಕಷ್ಟದಿಂದ ಅದುಮಿ ಹಿಡಿದಿದ್ದ ನಮ್ಮ ಕೆಚ್ಚು ಮತ್ತು ಶಕ್ತಿಗಳು ಯಾವುದಾದರೂ ಮಾರ್ಗದಲ್ಲಿ ಹೊರಬೀಳಲು ಕುದಿಯುತ್ತಿದ್ದವು.

ಗಾಂಧಿಜಿಗೆ ವಯಸ್ಸಾಗುತ್ತ ಬಂದಿತ್ತು, ಎಪ್ಪತ್ತು ವರ್ಷ ತುಂಬಿತ್ತು, ತಡೆಯಿಲ್ಲದ ಕಾರ್ಯಾಚರಣೆಯ ದೈಹಿಕ, ಮಾನಸಿಕ ಶ್ರಮಗಳ ಕಷ್ಟತಮ ಜೀವನದಿಂದ ಅವರ ಶಕ್ತಿ ಕುಂದಿತ್ತು. ಆದರೂ ಅವರಲ್ಲಿದ್ದ ಶಕ್ತಿ ಅದ್ಭುತವಿತ್ತು; ಮತ್ತು ಯಾವುದಕ್ಕೆ ಅವರು ವಿಶೇಷ ಮಹತ್ವದ ಬೆಲೆ ಕೊಟ್ಟಿದ್ದರೋ ಅದರ ನ್ಯಾಯಪರತೆಯ ಸಾಧನೆಗಾಗಿ ಏನಾದರೂ ಕಾರ್ಯಕ್ರಮ ತೆಗೆದುಕೊಳ್ಳದಿದ್ದರೆ ಮತ್ತು ಅಂದಿನ ವಿಷಮ ಸನ್ನಿವೇಶಕ್ಕೆ ಸುಮ್ಮನೆ ಶರಣು ಹೋದರೆ ತಮ್ಮ ಜೀವನ ಕಾರವೆಲ್ಲ ವ್ಯರ್ಥವೆಂದು ಭಾವಿಸಿದರು. ಭಾರತದ ಮತ್ತು ಇತರ ದಾಸ್ಯದಲಿತ ಜನಾಂಗಗಳ ಮತ್ತು ಜನರ ಸ್ವಾತಂತ್ರ್ಯ ಪ್ರೇಮಕ್ಕೆ ಅವರ ಅಹಿಂಸಾವಾದ ಅಡ್ಡ ಬರಲಿಲ್ಲ. ದೇಶದ ರಕ್ಷಣೆ ಮತ್ತು ಅವಸರದ ರಾಷ್ಟ್ರ ಕಾರ್ಯಗಳಲ್ಲಿ ಸಹ ಅಹಿಂಸಾ ಮಾರ್ಗ ತ್ಯಜಿಸಲು ತಮಗೆ ಒಪ್ಪಿಗೆ ಇಲ್ಲದಿದ್ದರೂ ಬಹು ಕಷ್ಟ ಮತ್ತು ಸಂಕೋಚದಿಂದ-ಈ ಹಿಂದೆಯೇ ಕಾಂಗ್ರೆಸ್ಸಿಗೆ ಅನುಮತಿ ಕೊಟ್ಟಿದ್ದರು. ಆದರೆ ತಾವು ಮಾತ್ರ ಆ ಮಾರ್ಗದಿಂದ ಸರಿದರು. ಅವರ ಈ ಅರೆ ಮನಸ್ಸಿನ ನಿಲುವು ಬ್ರಿಟನ್ ಮತ್ತು ಇತರ ಮಿತ್ರ ರಾಷ್ಟ್ರಗಳೊಡನೆ ಒಪ್ಪಂದಕ್ಕೆ ಅಡ್ಡಿ ಬರಬಹುದೆಂದು ಅರಿತರು. ಆದ್ದರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಭಾರತದ ಅಪಾರ ರಾಷ್ಟಶಕ್ತಿ ಮತ್ತು ಸಂಪತ್ತನ್ನೆಲ್ಲ ಸ್ವಾತಂತ್ರ್ಯದ ಹೋರಾಟಕ್ಕೆ, ಆಕ್ರಮಣ ಎದುರಿಸುವುದಕ್ಕೆ ಮತ್ತು ಭಾರತದ ರಕ್ಷಣೆಗೆ ವಿನಿಯೋಗಿಸಿ ತನ್ನ ಅಧೀನವಿರುವ ಸೈನ್ಯ ಮತ್ತು ಇತರ ಎಲ್ಲ ರಕ್ಷಣಾ ಪಡೆಗಳ ಸಹಾಯದಿಂದ ಸಂಯುಕ್ತ ಮಿತ್ರರಾಷ್ಟ್ರಗಳೊಂದಿಗೆ ಪೂರ್ಣ ಸಹಕಾರದಿಂದ ಹೋರಾಡುವುದೇ ಸ್ವತಂತ್ರ ಭಾರತದ ತಾತ್ಕಾಲಿಕ ಸರಕಾರದ ಪ್ರಥಮ ಕರ್ತವ್ಯ ಎಂದು ತಾವೇ ಕಾಂಗ್ರೆಸ್ಸಿನಲ್ಲಿ ಒಂದು ನಿರ್ಣಯ ಮಂಡಿಸಿದರು. ಈ ರೀತಿ ಒಂದು ಬಂಧನಕ್ಕೆ ಕಟ್ಟು ಬೀಳುವುದು ಅವರಿಗೆ ಸುಲಭದ ಮಾತಾಗಿರಲಿಲ್ಲ. ಭಾರತ ಸ್ವತಂತ್ರವಾಗಿ ಸ್ವಾತಂತ್ರ್ಯದಿಂದ ಶತ್ರುವನ್ನು ಎದುರಿಸಲು ಸಾಧ್ಯ ಆಗುವುದಾದರೆ ಯಾವ ಒಪ್ಪಂದಕ್ಕಾದರೂ ಸಿದ್ಧ ಎನ್ನುವಷ್ಟು ಉತ್ಕಟ ಸ್ವಾತಂತ್ರ್ಯಾಭಿಲಾಷೆ ಅವರಲ್ಲಿ ಅಷ್ಟು ಬಲಗೊಂಡಿತ್ತು; ಆದ್ದರಿಂದ ಈ ಕಹಿಯನ್ನೂ ಅವರು ನುಂಗಿದರು.