ಪುಟ:ಭಾರತ ದರ್ಶನ.djvu/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅ೦ಕ ೩

೪೨೯

ನಮಗೂ ಗಾಂಧಿಜಿಗೂ ಇದ್ದ ತಾತ್ವಿಕ ಮತ್ತು ಇತರ ಭಿನ್ನಾಭಿಪ್ರಾಯಗಳು ಈಗ ಮಾಯವಾದವು. ಆದರೂ ಒಂದು ದೊಡ್ಡ ತೊಂದರೆ ಮಾತ್ರ ಎದುರು ನಿಂತಿತು. -ನಮ್ಮ ಕಾರ್ಯಾಚರಣೆ ಏನೇ ಇರಲಿ ಅದು ಯುದ್ಧ ಪ್ರಯತ್ನಕ್ಕೆ ಅಡ್ಡಿಯಾಗಬಹುದೆಂದು, ಬ್ರಿಟಿಷ್ ಸರ್ಕಾರದೊಡನೆ ಒಪ್ಪಂದಕ್ಕೆ ಬರಲು ಇನ್ನೂ ಸಾಧ್ಯವಿದೆ, ಆ ಸಾಧನೆಗೆ ವಿಶ್ವ ಪ್ರಯತ್ನ ಮಾಡುವುದಾಗಿ ಹೇಳಿದ ಗಾಂಧಿಜಿಯ ವಿಶ್ವಾಸ ಕಂಡು ನಮಗೆ ಅತ್ಯಾಶ್ಚರ್ಯವೆನಿಸಿತು. ಆದ್ದರಿಂದ ಕೃತಿ ಎಂದು ಅವರು ಅನೇಕ ಬಾರಿ ಹೇಳಿದ್ದರೂ ಅದು ಏನೆಂದು ಅವರು ವಿವರಿಸಲಿಲ್ಲ ಮತ್ತು ತಾನಾದರೂ ಮಾಡುವುದು ಏನು ಎಂದೂ ತಿಳಿಸಲಿಲ್ಲ.

ಈ ರೀತಿ ನಾವು ಅನುಮಾನ ಮತ್ತು ಚರ್ಚೆಯಲ್ಲಿ ಕಾಲಕಳೆಯುತ್ತ ಇದ್ದಾಗ ದೇಶದ ವಾತಾವರಣ ಇದ್ದಕ್ಕಿದ್ದಂತೆ ಬಿಸಿಯಾಯಿತು; ನಿಶ್ಚತನ ಕಾರ್ಯಶೂನ್ಯತೆಯ ಸ್ಥಿತಿಯಿಂದ ಮಹೋತ್ಸಾಹಭರಿತ ಆಶಾ ಪೂರ್ಣ ಮನೋಭಾವ ಮೂಡಿತು. ಕಾಂಗ್ರೆಸ್ ತೀರ್ಮಾನ ಅಥವ ನಿರ್ಣಯವಾಗಲೆಂದು ಘಟನೆಗಳು ಕಾಯಲಿಲ್ಲ. ಗಾಂಧಿಜಿಯ ಸಂದೇಶದಿಂದ ತಾವೇ ಪ್ರವಾಹದೋಪಾದಿಯಲ್ಲಿ ಮುಂದುರುಳಿ ನುಗ್ಗುತ್ತಿದ್ದವು. ತಮ್ಮ ಶಕ್ತಿ ಮತ್ತು ಓಟಗಳನ್ನು ತಾವೇ ನಿರ್ಧರಿಸುತ್ತಿದ್ದವು. ತಪ್ಪೋ ಸರಿಯೋ ಗಾಂಧಿಜಿ ಜನರ ಮನೋಭಿಪ್ರಾಯಕ್ಕೆ ಒಂದು ಹೊಸ ರೂಪುಕೊಟ್ಟಂತೆ ತೋರಿತು. ಅದರಲ್ಲಿ ಒಂದು ಹುಚ್ಚು ಧೈರ್ಯವಿತ್ತು, ಆ ಭಾವೋದ್ರೇಕದ ಆವೇಶದಲ್ಲಿ ಕಾರ್ಯಾಚರಣೆಯ ಪರಿಣಾಮದ ಯೋಚನೆ, ತರ್ಕ, ಮನಸ್ಸಿನ ವಿವೇಚನೆ, ಶಾಂತಿ ಎಲ್ಲ ಮಾಯವಾದವು. ಆ ಪರಿಣಾಮಗಳ ಅರಿವೂ ನಮಗಿತ್ತು, ಮತ್ತು ಫಲ ಏನೇ ದೊರೆಯಲಿ ದೊರೆಯದಿರಲಿ ಅಪಾರ ಸಾವು ನೋವು ಅನಿವಾರ್ಯವೆಂದು ನಮಗೆ ತಿಳಿದಿತ್ತು. ಆದರೂ ನಿತ್ಯ ನಾವು ಅನುಭವಿಸುತ್ತಿದ್ದ ಮನೋವೇದನೆಯ ಬೆಲೆಯೂ ಕಡಮೆ ಇರಲಿಲ್ಲ.” ಅದರ ನಿವಾರಣೆಗೆ ಯಾವ ಮಾರ್ಗವೂ ಕಾಣಲಿಲ್ಲ. ಕ್ರೂರ ವಿಧಿಗೆ ಕರುಣಾಜನಕ ಯಜ್ಞಪಶುಗಳಾಗಿರುವುದಕ್ಕಿಂತ ಕಾಣದ ಕಡಲಿನೊಳಗೆ ಧುಮಿಕಿ ಮುಳುಗುವುದೂ ಮೇಲೆಂದು ತೋರಿತು, ಇದು ರಾಜಕಾರಣಿಯ ದೃಷ್ಟಿ ಆಗಿರದೆ ಪರಿಣಾಮ ಲೆಕ್ಕಿಸದ ನಿರ್ಭಯ ಹುಚ್ಚು ಸಾಹಸದ ಕಾರ್ಯಕ್ರಮವಾಗಿತ್ತು. ಆದರೂ ಕಾರಣಬದ್ದವಿರಬೇಕೆಂಬ ಪ್ರಯತ್ನ, ವಿರೋಧ ಭಾವನೆಗಳನ್ನು ಸಮನ್ವಯಗೊಳಿಸಬೇಕೆಂಬ ಪ್ರಯತ್ನ, ಮಾನವನ ಸಹಜ ಗುಣಗಳ ಮೂಲ ಭಿನ್ನತೆಗಳಲ್ಲಿ ಏನಾದರೂ ಐಕ್ಯತೆ ಕಂಡು ಹಿಡಿಯುವ ಪ್ರಯತ್ನ ಸದಾ ಇದ್ದೇ ಇತ್ತು. ಇನ್ನೂ ಅನೇಕ ವರ್ಷ ದೀರ್ಘಕಾಲ ಯುದ್ಧ ನಡೆಯುವಂತೆ ತೋರಿತು ; ವಿಪತ್ತುಗಳು ಒದಗಿದ್ದವು; ಇನ್ನೂ ಅನೇಕ ಒದಗುವುದರಲ್ಲಿದ್ದವು; ಆದರೆ ಯಾವ ದ್ವೇಷಾಸೂಯೆಗಳು ಯುದ್ಧಕ್ಕೆ ಮೂಲಕಾರಣಗಳಾಗಿದ್ದವೋ ಮತ್ತು ಯಾವ ದ್ವೇಷಾಸೂಯೆಗಳಿಗೆ ಯುದ್ಧವೇ ಪ್ರೋತ್ಸಾಹ ಕೊಟ್ಟತ್ತೊ ದ್ವೇಷಾಸೂಯೆಗಳನ್ನು ಸಂಪೂರ್ಣ ಹಿಡಿತಕ್ಕೆ ತಂದು ಅವುಗಳ ವಿಷ ನುಂಗುವವರೆಗೂ ಯುದ್ಧ ನಡೆಯಲೇ ಬೇಕು. ಅಪಜಯಕ್ಕಿಂತ ಹೆಚ್ಚು ಸಂಕಟ ಉಂಟುಮಾಡುವ ಅರೆಬರೆಯ ಜಯಗಳಿಂದ ಯಾವ ಪ್ರಯೋಜನವೂ ಇರಲಿಲ್ಲ. ಸೈನ್ಯ ಕಾರ್ಯಾಚರಣೆಯಲ್ಲಿ ತಪ್ಪು ದಾರಿ ಹಿಡಿದಿದ್ದು ದಲ್ಲದೆ ಯಾವ ಧ್ಯೇಯಕ್ಕಾಗಿ ಯುದ್ಧ ಹೂಡಲಾಗಿತ್ತೋ ಆ ಮೂಲ ಧ್ಯೇಯದ ವಿಷಯದಲ್ಲಿ ಸಹ ಅಡ್ಡ ದಾರಿ ಹಿಡಿಯಲಾಗಿತ್ತು. ಪ್ರಾಯಶಃ ನಮ್ಮ ಕಾರ್ಯಾಚರಣೆಯಿಂದ ಈ ಎರಡನೆಯ ತಪ್ಪನ್ನಾದರೂ ಅರಿತುಕೊಳ್ಳುವ ಪರಿಸ್ಥಿತಿ ಒದಗಿದರೆ ಒಂದು ಹೊಸ ಆಶಾದಾಯಕ ಮಾರ್ಗ ಗೋಚರವಾಗಬಹುದು. ಒಡನೆ ನಮಗೆ ಜಯ ದೊರೆಯದಿದ್ದರೂ ಕ್ರಮೇಣ ಆ ಉನ್ನತ ಧ್ಯೇಯಕ್ಕಾದರೂ ಜಯ ದೊರೆಯಬಹುದು. ಮುಂದಿನ ಸೈನ್ಯ ಕಾರ್ಯಾಚರಣೆಗೂ ನಾವು ದೊಡ್ಡ ಬೆಂಬಲಕೊಡಲು ಅನುಕೂಲವಾಗಬಹುದು ಎಂದು ಯೋಚಿಸಿದೆವು.

ಜನರ ಉತ್ಸಾಹ ಹೆಚ್ಚಿದಂತೆ ಸರಕಾರದ ದಬ್ಬಾಳಿಕೆಯೂ ಹೆಚ್ಚಿತು. ಅದಕ್ಕೆ ಯಾವ ಭಾವೋದ್ರೇಕವೂ, ಒತ್ತಾಯವೂ ಬೇಕಿರಲಿಲ್ಲ; ಅವರ ಸಹಜಗುಣ, ಸಾಮಾನ್ಯ ಆಡಳಿತ ನೀತಿಗಳೇ ಆ ರೀತಿ ಇದ್ದವು. ಪರಾಕ್ರಮಿತ ದಾಸ್ಯ ರಾಷ್ಟ್ರಗಳಲ್ಲಿ ವಿದೇಶೀ ಆಡಳಿತಗಾರರ ಸಾಮ್ರಾಜ್ಯ ನೀತಿಯೇ ಆ ರೀತಿ ಇತ್ತು. ತನ್ನ ಇಷ್ಟಕ್ಕೆ ವಿರುದ್ಧ ನಿಂತ ಎಲ್ಲ ಶಕ್ತಿಗಳನ್ನೂ ಒಂದು ಏಟನಲ್ಲಿ ನಿರ್ನಾಮಮಾಡಲು ದೊರೆತ ಈ ಅವಕಾಶವನ್ನು ಸರಕಾರವು ಸ್ವಾಗತಿಸುವಂತೆ ತೋರಿತು. ಆ ದಬ್ಬಾಳಿಕೆಗೆ ಎಲ್ಲ ಸಿದ್ಧತೆಗಳನ್ನೂ ಮಾಡಿತು.