ಪುಟ:ಭಾರತ ದರ್ಶನ.djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩೪

ಭಾರತ ದರ್ಶನ

ಈ ಭಾವನೆ ಹೊಸದಾಗಿ ಉದ್ಭವಿಸಿದ ಒಂದು ಕೌತುಕವೇನಲ್ಲ. ಅನೇಕ ವರ್ಷಗಳಿಂದ ಇದ್ದೇ ಇತ್ತು. ಆದರೆ ಘಟನೆಗಳ ಗತಿಗನುಗುಣವಾಗಿ ಮುಂದುವರಿಯುವಂತೆ ಅದನ್ನು ಅನೇಕ ವಿಧ ಕಡಿವಾಣ ಹಾಕಿ ಹದ್ದು ಬಸ್ತಿನಲ್ಲಿ ಅದನ್ನು ನಡೆಸಲಾಗಿತ್ತು. ಯುದ್ಧವೇ ಒಂದು ಬಗೆಯಲ್ಲಿ ಈ ಹಿಡಿತ ಬಿಗಿ ಮಾಡುವ ಮತ್ತು ಇನ್ನೊಂದು ಬಗೆಯಲ್ಲಿ ಹಿಡಿತ ಸಡಿಲಿಸುವ ಘಟನೆಯಾಗಿತ್ತು. ಒಂದು ಕಡೆ ಅಪಾರ ಪ್ರಗತಿಪರ ಕ್ರಾಂತಿಕಾರಕ ಪರಿವರ್ತನೆಗಳನ್ನು ನಮ್ಮ ದೃಷ್ಟಿ ಪಥಕ್ಕೆ ತಂದು ಆ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರೇರಿಸುತ್ತಿದ್ದಿತು. ಇನ್ನೊಂದು ಕಡೆ ಅಕ್ಷ ರಾಷ್ಟ್ರಗಳ ವಿರುದ್ಧ ಹೋರಾಟದಲ್ಲಿ ಯಾವ ಬಗೆಯ ತೊಂದರೆಯನ್ನೂ ಮಾಡದೆ ಸಹಾಯಮಾಡಬೇಕೆಂಬ ನಮ್ಮ ಇಚ್ಛೆ ಮತ್ತು ಅನೇಕ ಕಾರ್ಯಗಳಿಗೆ ಅಡ್ಡಿಯಾಯಿತು.

ಆದರೆ ಯುದ್ಧ ಮುಂದುವರಿದಂತೆ ಪಾಶ್ಚಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳು ಯಾವ ಪರಿವರ್ತನೆಯೂ ಇಲ್ಲದೆ ತಮ್ಮ ಹಿಂದಿನ ಸಾಮ್ರಾಜ್ಯ ನೀತಿಯನ್ನೇ ಮುಂದುವರಿಸಲು ಯುದ್ಧ ಮಾಡುತ್ತಿರುವಂತೆ ಸ್ಪಷ್ಟವಾಗುತ್ತ ಬಂದಿತು. ಯುದ್ಧಕ್ಕೆ ಮುಂಚೆ ಫ್ಯಾಸಿಸಂ ಬೆನ್ನು ಕಟ್ಟಿದ್ದವು. ಅದಕ್ಕೆ ಕಾರಣ ಪರಿಣಾಮಗಳ ಭಯವು ಮಾತ್ರವಲ್ಲ; ಫ್ಯಾಸಿಸ್ಟ್ ತತ್ವದಮೇಲೆ ಒಂದು ಬಗೆಯ ಸಹಾನುಭೂತಿ ಇದ್ದುದಲ್ಲದೆ ಬೇರೆಮಾರ್ಗ ಅನುಸರಿಸಲು ಮನಸ್ಸು ಇಲ್ಲದಿದ್ದುದು. ನಾಜಿ ಮತ್ತು ಫ್ಯಾಸಿಸ್ಟ್ ತತ್ವಗಳು ಐತಿಹಾಸಿಕ ಆಕಸ್ಮಿಕಗಳಲ್ಲ; ಸಾಮ್ರಾಜ್ಯಗಳ ಸ್ಥಾಪನೆ, ವರ್ಣಭೇದ, ರಾಷ್ಟ್ರಗಳ ಹೋರಾಟಗಳು, ಅಧಿಕಾರದ ಕೇಂದ್ರೀಕರಣ, ಅಂದಿನ ಸಮಾಜದ ರಚನೆಯಲ್ಲಿ ಪೂರ್ಣ ವಿಕಾಸಗೊಳ್ಳಲು ಅವಕಾಶವಿಲ್ಲದ ಔದ್ಯೋಗಿಕ ಪ್ರಗತಿ, ಪ್ರಜಾ ಸತ್ತಾತ್ಮಕ ಧೈಯಕ್ಕೂ ಮತ್ತು ಅದರ ವಿರುದ್ಧವಿದ್ದ ಸಮಾಜರಚನೆಗೂ ಮಧ್ಯೆ ಇದ್ದ ಮೂಲಘರ್ಷಣೆ ಈ ಎಲ್ಲ ಐತಿಹಾಸಿಕ ಘಟನಾ ಪರಂಪರೆಗಳ ಸ್ವಾಭಾವಿಕ ಫಲಗಳು, ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೆರಿಕೆಯ ರಾಜಕೀಯ ಪ್ರಜಾಸತ್ತೆಯು ರಾಷ್ಟ್ರೀಯ ಮತ್ತು ವೈಯಕ್ತಿಕ ಪ್ರಗತಿಗೆ ಮುಕ್ತ ದ್ವಾರ ಮಾಡಿತ್ತು; ಆರ್ಥಿಕ ಸಮಾನತೆಯೇ ಮುಖ್ಯಗುರಿಯುಳ್ಳ ಹೊಸ ಶಕ್ತಿಗಳಿಗೂ ಜನ್ಮಕೊಟ್ಟ ಆ ಪರಿಸ್ಥಿತಿಯಲ್ಲೇ ಘರ್ಷಣೆ ಅನಿವಾರ್ಯವಿತ್ತು. ಆ ಪ್ರಜಾಸತ್ತೆಯು ಇನ್ನೂ ವಿಶಾಲಗೊಳ್ಳಬೇಕು. ಅಥವ ಸಂಕುಚಿತಗೊಂಡು ನಿರ್ನಾಮವಾಗಬೇಕು. ಮೇಲಿಂದಮೇಲೆ ವಿರೋಧಬಂದರೂ ಪ್ರಜಾಸತ್ತೆಯ ತಿರುಳು ಮತ್ತು ವೈಶಾಲ್ಯ ಬಲಗೊಂಡವು; ಮತ್ತು ಆದರ್ಶ ರಾಜಕೀಯ ಪದ್ಧತಿ ಎಂದು ಅದು ಸರ್ವಮಾನ್ಯವಾಯಿತು. ಆದರೆ ಇನ್ನೂ ಮುಂದುವರಿದರೆ ಸಮಾಜರಚನೆಯ ಬುಡಕ್ಕೇ ಪೆಟ್ಟು ಎಂಬ ಕಾಲವೂ ಬಂದಿತು. ಆಗ ಸಂಪ್ರದಾಯಶರಣ ಸಂರಕ್ಷಕರು ಪ್ರತಿಭಟಿಸಿ, ಜಗಳಹೂಡಿ, ಸಂಘಟಿತರಾಗಿ ಆ ಬದಲಾವಣೆ ವಿರೋಧಿಸಿದರು. ಯಾವ ಯಾವ ದೇಶಗಳಲ್ಲಿ ಪರಿಸ್ಥಿತಿ ವಿಷಮಿಸಲು ಅನುಕೂಲ ಸನ್ನಿವೇಶಗಳು ಬೇಗ ಒದಗಿ ಬಂದವೋ ಅಲ್ಲಿ ಬಹಿರಂಗವಾಗಿ, ಉದ್ದೇಶಪೂರ್ವಕವಾಗಿ ಪ್ರಜಾಸತ್ತೆಯ ಕೊಲೆಯಾಗಿ ಫ್ಯಾಸಿಸ್ಟ್ ಮತ್ತು ನಾಜಿ ತತ್ವಗಳ ಅವತಾರವಾಯಿತು. ಪಶ್ಚಿಮಯೂರೋಪಿನ ಮತ್ತು ಉತ್ತರ ಅಮೆರಿಕೆಯ ಪ್ರಜಾ ಪ್ರಭುತ್ವಗಳ ವಿರುದ್ಧ ಸಹ ಅದೇ ಶಕ್ತಿಗಳು ಹೋರಾಟ ನಡೆಸುತ್ತಿದ್ದವು; ಆದರೆ ಇತರ ಕಾರಣಗಳು ಆ ವಿಷಮಪರಿಸ್ಥಿತಿಯನ್ನು ತಡೆದವು. ಪ್ರಾಯಶಃ ದೀರ್ಘಕಾಲದ ಶಾಂತಿಯುತ ಪ್ರಜಾಸತ್ತೆಯ ಸಂಪ್ ದಾಯವೂ ಸಹಾಯಕವಾಗಿರಬೇಕು. ಆದರೆ ಈ ಕೆಲವು ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಯಾವ ಪ್ರಜಾ ಪ್ರಭುತ್ವದಗಂಧವೂ ಇಲ್ಲದ ಮತ್ತು ಫ್ಯಾಸಿಸ್ಟ್ ಮನೋಭಾವದ ಸರ್ವಾಧಿಕಾರದ ಸಾಮ್ರಾಜ್ಯಗಳಿದ್ದವು. ಫ್ಯಾಸಿಸ್ಟ್ ರಾಷ್ಟ್ರಗಳಂತೆ ಈ ಸಾಮ್ರಾಜ್ಯಗಳಲ್ಲಿ ಸಹ ಜನರ ಸ್ವಾತಂತ್ರ್ಯದ ಬೇಡಿಕೆಯನ್ನು ನಿರ್ಮೂಲ ಮಾಡಲು ಆಡಳಿತವರ್ಗವು ಪ್ರತಿಗಾಮಿ ಮನೋಭಾವದ ಪಂಗಡಗಳು, ಸ್ವಾರ್ಥಸಾಧಕರು; ಮತ್ತು ಪಾಳೆಯಗಾರಿಕೆಯ ಶ್ರೀಮಂತ ಮನೆತನಗಳವರೊಂದಿಗೆ ಸ್ನೇಹ ಬೆಳಸಿತು. ತಮ್ಮ ತಾಯ್ಯಾಡಿಗೆ ಪ್ರಜಾಪ್ರಭುತ್ವವು ಒಳ್ಳೆಯ ಮತ್ತು ಯೋಗ್ಯ ಆದರ್ಶವೆಂದು ನಂಬಿದ್ದರೂ ಅಧೀನರಾಷ್ಟ್ರಗಳಿಗೆ ಪ್ರಸ್ತುತ ವಿಶೇಷ ಪರಿಸ್ಥಿತಿಯಲ್ಲಿ ಅದು ಯುಕ್ತವಲ್ಲವೆಂದು ಸಾಧಿಸತೊಡಗಿದರು. ಆದ್ದರಿಂದ ಫ್ಯಾಸಿಸ್ಟರ ಅನೇಕ ಕ್ರೂರ ಪಾಶವೀ ಕೃತ್ಯಗಳನ್ನು ಒಪ್ಪದಿದ್ದರೂ, ಈ ಪಶ್ಚಿಮ ಯೂರೋಪಿನ ಪ್ರಜಾಪ್ರಭುತ್ವಗಳಿಗೂ ಫ್ಯಾಸಿಸ್ಟ್ ರಾಷ್ಟ್ರಗಳಿಗೂ ಒಂದು ಬಗೆಯ ನೈತಿಕ ಸಹಾನುಭೂತಿ ಸ್ವಾಭಾವಿಕವಾಯಿತು.