ಪುಟ:ಭಾರತ ದರ್ಶನ.djvu/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೩೭

ಇಂಡಿಯಾ ಸರಕಾರ ಬಹಳ ಕಾತರವಾಗಿತ್ತು. ಆದರೆ ಭಾರತದ ರಾಷ್ಟ್ರೀಯ ಚಳವಳಿಯನ್ನು, ಪ್ರತಿನಿಧಿಯಾದ ಕಾಂಗ್ರೆಸನ್ನು ನಿರ್ನಾಮ ಮಾಡದಿದ್ದರೆ-ಈ ಎರಡನೆಯ ಜಯವಿಲ್ಲದೆ-ಯುದ್ಧದಲ್ಲಿ ಮಾತ್ರ ಜಯದೊರೆತರೆ ಅದು ಅವರಿಗೆ ಅಪೂರ್ಣವೆನಿಸಿತು. ಕ್ರಿಪ್ಸ್ ಸಲಹೆಗಳಿಂದ ಇಂಡಿಯಾ ಸರಕಾರಕ್ಕೆ ಅವು ಎಲ್ಲಿ ಯಶಸ್ವಿಯಾಗುವುವೊ ಎಂದು ಬಹಳ ತಲೆನೋವು ಬಂದಿತ್ತು; ಅದು ಮುರಿದು ಬಿದ್ದುದು ಅವರಿಗೆ ದೊಡ್ಡ ಹಬ್ಬವಾಯಿತು. ಈಗ ಕಾಂಗ್ರೆಸ್ಸಿನ ಮೇಲೆ ಮತ್ತು ಅದರೊಂದಿಗೆ ಸಹಾನುಭೂತಿಯುಳ್ಳವರ ಮೇಲೆ ಗದಾಪ್ರಹಾರ ಮಾಡಿ ಅವರ ಹುಟ್ಟಡಗಿಸಲು ಸುಸಂಧಿಯಾಗಿತ್ತು. ಹಿಂದೆ ಯಾವ ಕಾಲದಲ್ಲಿಯೂ ಕೇಂದ್ರೀಕೃತವಾಗಿರದ ಮಿತಿ ಇಲ್ಲದ ಅಧಿಕಾರವು, ಕೇಂದ್ರದಲ್ಲಿ ಮತ್ತು ಪ್ರಾಂತ್ಯಗಳಲ್ಲಿ ವೈಸರಾಯ್ ಮತ್ತು ಆತನ ಅಧೀನ ಅಧಿಕಾರಿಗಳ ಕೈಯಲ್ಲಿ ಕೇಂದ್ರೀಕೃತವಾಗಿದ್ದುದರಿಂದ ಸಮಯಾನುಕೂಲವೂ ಒದಗಿತ್ತು. ಯುದ್ಧ ಪರಿಸ್ಥಿತಿಯೂ ಕಷ್ಟವಿತ್ತು. ಆದ್ದರಿಂದ ಈಗ ಯಾವ ವಿರೋಧ ಅಥವ ಅಡಚಣೆಯನ್ನೂ ಸಹಿಸಲು ಸಾಧ್ಯವಿಲ್ಲವೆಂಬವಾದವೂ ಸಹಜ ಕಂಡಿತು. ಇಂಗ್ಲೆಂಡ್ ಮತ್ತು ಅಮೆರಿಕೆಗಳಲ್ಲಿ ಭಾರತಕ್ಕೆ ಸಹಾನುಭೂತಿ ತೋರುತ್ತಿದ್ದ ಲಿಬರಲ್ ಪಂಥದವರು ಸಹ ಕ್ರಿಪ್ಸ್ ಸಂಧಾನದ ಮತ್ತು ಅನಂತರದ ಪ್ರಚಾರದಿಂದ ಮೌನತಾಳಿದರು. ಇಂಗ್ಲೆಂಡಿನಲ್ಲಿ ಭಾರತದ ವಿಷಯ ತಾವು ಮಾಡಬೇಕಾದುದನ್ನೆಲ್ಲ ಮಾಡಿದ್ದೆವೆ ಎಂಬ ಆತ್ಮವಿಶ್ವಾಸ ಬೆಳೆದಿತ್ತು. ಭಾರತೀಯರೆಲ್ಲ ದುರಾಗ್ರಹಿಗಳು, ತಂಟೆಕೋರರು, ಸಂಕುಚಿತ ಮನೋ ಭಾವದವರು, ಅಪಾಯ ಪರಿಸ್ಥಿತಿಯನ್ನು ಸಹ ಅರಿಯಲಶಕರು, ಪ್ರಾಯಶಃ ಜಪಾನರೊಂದಿಗೆ ಸಹಾನುಭೂತಿಯುಳ್ಳವರು ಎಂಬ ಭಾವನೆ ಅವರಲ್ಲಿ ಬೆಳೆಯಿತು. "ಗಾಂಧಿಯ ಲೇಖನಗಳು ಮತ್ತು ಹೇಳಿಕೆಗಳಿಂದ ಆತನು ಎಷ್ಟು ಅಸಾಧ್ಯ ಮನುಷ್ಯ ಎಂಬುದು ಸ್ಪಷ್ಟ ತೋರುತ್ತದೆ; ಆದ್ದರಿಂದ ಗಾಂಧಿಯನ್ನು ಮತ್ತು ಕಾಂಗ್ರೆಸ್ಸನ್ನು ಒಂದುಬಾರಿ ಮಟ್ಟ ಹಾಕಿ ನಿರ್ನಾಮಮಾಡಿ ಇದನ್ನೆಲ್ಲ ಪೂರೈಸಿ ಬಿಡುವುದು ಒಂದೇ ಮಾರ್ಗ” ಎಂಬ ಭಾವನೆ ಹೆಚ್ಚಿತು.

೩. ಸಾಮೂಹಿಕ ವಿಪ್ಲವಗಳು ಮತ್ತು ಅವುಗಳ ದಮನ

೧೯೪೨ನೆ ಆಗಸ್ಟ್ ೯ನೆಯ ದಿನ ಬೆಳಗಿನ ಜಾವದಲ್ಲಿ ಭಾರತಾದ್ಯಂತ ಅಸಂಖ್ಯಾತ ಜನರ ಬಂಧನ ವಾಯಿತು. ಆಮೇಲೆ ಏನಾಯಿತು? ಅನೇಕವಾರಗಳು ಕಳೆದುಹೋದರೂ ನಮಗೆ ದೊರಕುತ್ತಿದ್ದುದು ಹರಕು ಮುರುಕು ಸುದ್ದಿ ಮಾತ್ರ. ಅಂದಿನ ಘಟನೆಗಳ ಪೂರ್ಣ ಚಿತ್ರದ ಕಲ್ಪನೆಯು ಈಗಲೂ ನಮಗೆ ಅಸಾಧ್ಯ. ಪ್ರಮುಖ ವ್ಯಕ್ತಿಗಳನ್ನೆಲ್ಲ ಬಂಧಿಸಿದ್ದರಿಂದ ಯಾರಿಗೂ ಏನುಮಾಡುವುದೆಂಬುದೇ ತಿಳಿಯದಾಯಿತು, ಜನರೇ ಸ್ವಯಂ ಸ್ಪೂರ್ತಿಯಿಂದ ವಿರೋಧ ಪ್ರದರ್ಶನ ಆರಂಭಿಸಿದರು. ಕಣ್ಣೀರು ಬಾಂಬುಗಳನ್ನೂ ಉಪಯೋಗಿಸಿ, ಗುಂಡಿನ ಮಳೆಗರೆದು ಆ ಪ್ರದರ್ಶನ ಅಡಗಿಸಲು ಯತ್ನ ಮಾಡಿದರು. ಸಾರ್ವಜನಿಕ ವಿರೋಧ ಪ್ರದರ್ಶನಕ್ಕೆ ಜನರಿಗಿದ್ದ ಎಲ್ಲ ಮಾರ್ಗಗಳನ್ನೂ ಮುಚ್ಚಿದರು. ಜನತೆಯು ಈ ಬಂಧನದ ನೋವನ್ನು ಸಹಿಸಲಾರದೆ ಎಲ್ಲ ಕಟ್ಟುಗಳನ್ನೂ ಕಿತ್ತೊಗೆದು ನಗರಗಳಲ್ಲಿ, ಪಟ್ಟಣಗಳಲ್ಲಿ ಹಳ್ಳಿಗಳಲ್ಲಿ ಪೋಲೀಸ್ ಮತ್ತು ಸೈನ್ಯಪಡೆಗಳನ್ನು ಎದುರಿಸಲು ನಿಶ್ಚಯಿಸತು. ಬ್ರಿಟಿಷರ ಅಧಿಕಾರ ಮತ್ತು ಶಕ್ತಿಯ ಎಲ್ಲ ಮೂಲಗಳ ಕೇಂದ್ರಗಳ ಮೇಲೂ ಧಾಳಿ ಇಟ್ಟರು. ಪೊಲೀಸ್ ಠಾಣೆಗಳು, ಅಂಚೆ ಕಚೇರಿಗಳು, ರೈಲ್ವೆ ನಿಲ್ದಾಣಗಳು ಅವರ ಕೋಪಾಗ್ನಿಗೆ ಆಹುತಿಯಾದವು. ಟೆಲಿಗ್ರಾಫ್ ಮತ್ತು ಟೆಲಿಫೋನ್ ತಂತಿಗಳನ್ನು ಕತ್ತರಿಸಿದರು. ನಾಯಕತ್ವವಿಲ್ಲದೆ, ನಿಶ್ಯಸ್ತರಾಗಿ ರೊಚ್ಚಿಗೆದ್ದ ಈ ಜನತೆ ಸರಕಾರೀ ವರದಿಯಂತೆಯೇ ಪೊಲೀಸ್ ಮತ್ತು ಸೈನ್ಯ ಪಡೆಗಳನ್ನು ಎದುರಿಸಿ ೫೩೮ ಬಾರಿ ಗುಂಡಿನೇಟನ್ನು ಎದುರಿಸಬೇಕಾಯಿತು; ಕೆಳಮಟ್ಟ ಹಾರಿ ವಿಮಾನಗಳಿಂದ ಸಹ ಗುಂಡಿನ ಸುರಿಮಳೆ ಕರೆದರು. ಒಂದೆರಡು ತಿಂಗಳು, ಕೆಲವು ಕಾಲ ದೇಶದ ನಾನಾ ಭಾಗಗಳಲ್ಲಿ ಈ ಗಲಭೆ ನಡೆದು ಅನಂತರ ಕಡಮೆಯಾಗಿ ಎಲ್ಲೋ ಕೆಲವೆಡೆ ಮಾತ್ರಆಗಾಗ ಮರುಕಳಿಸುತ್ತಿದ್ದುವು. “ಸರಕಾರದ ಸರ್ವಶಕ್ತಿ ವಿನಿಯೋಗಿಸಿ ಈ ಗಲಭೆ ಅಡಗಿಸಿದ್ದೇವೆ" ಎಂದು ಚರ್ಚಿಲ್ ಕಾಮನ್ಸ್ ಸಭೆಯಲ್ಲಿ ಜಂಭಕೊಚ್ಚಿದ. "ಭಾರತೀಯ ಪೊಲೀಸ್ ದಳದ ರಾಜಭಕ್ತಿ ಮತ್ತು ಕಾರ್ಯನಿಷ್ಠೆಗಳನ್ನೂ ಮತ್ತು ಭಾರತೀಯ ಅಧಿಕಾರಿವರ್ಗದ ನಡತೆಯನ್ನೂ ಎಷ್ಟು ಮೆಚ್ಚಿದರೂ