ಪುಟ:ಭಾರತ ದರ್ಶನ.djvu/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೪೯

ರಚನೆ ಕುಸಿದು ಬಿದ್ದರೆ ಸಂರಕ್ಷಣಾ ಶಕ್ತಿಯೇ ನಾಶವಾಗುತ್ತದೆ ; ಶತ್ರುವನ್ನು ಎದುರಿಸುವುದಂತೂ ಅಸಾಧ್ಯವೇ ಆಗುತ್ತದೆ. ಭಾರತದ ರಕ್ಷಣೆಗೆ ಮತ್ತು ಜಪಾನೀ ಆಕ್ರಮಣಕಾರರನ್ನು ಎದುರಿಸುವದಕ್ಕೆ ಇಂಡಿಯ ಸರಕಾರ ತನ್ನ ಜವಾಬ್ದಾರಿ ನಿರ್ವಹಿಸಿದ ಬಗೆಯೇ ಈ ರೀತಿ ಇತ್ತು. ಈ ಮುಖ್ಯ ಯುದ್ಧ ಕ್ಷೇತ್ರದಲ್ಲಿ ಸರಕಾರದ ನೀತಿಯ ಸಂಕೇತವಾಗಿ ಕಾಣುತ್ತಿದ್ದುದು ದಗ್ಫಭೂಮಿ ನೀತಿಯಲ್ಲ; ಆದರೆ ಲಕ್ಷಗಟ್ಟಲೆ ಹಸಿವಿನಿಂದ ಸತ್ತು ಕರಿಕುಗಟ್ಟುವ ಹೆಣಗಳು.

ಭಾರತದ ನಾನಾ ಕಡೆಗಳಿಂದ ಬಂದ ಅನಧಿಕಾರಿ ಸಂಸ್ಥೆಗಳು ಮತ್ತು ಇಂಗ್ಲೆಂಡಿನ ನುರಿತ ಸಾರ್ವಜನಿಕ ಸೇವಕರಾದ ಕ್ವೇಕರ್‌ಗಳು ಪರಿಹಾರ ಒದಗಿಸುವುದರಲ್ಲಿ ಉತ್ತಮ ಸೇವೆ ಸಲ್ಲಿಸಿದರು. ಕೊನೆಗೆ ಕೇಂದ್ರ ಮತ್ತು ಪ್ರಾಂತ ಸರಕಾರಗಳು ಸಹ ಎಚ್ಚೆತ್ತು ಭೀಕರ ವಿಷಮ ಪರಿಸ್ಥಿತಿಯನ್ನರಿತು ಪರಿಹಾರ ಕಾರ್ಯದಲ್ಲಿ ಸೈನ್ಯ ಸಹ ಉಪಯೋಗಿಸಿದರು. ಕ್ಷಾಮ ಹರಡದಂತೆ ಮತ್ತು ಅದರ ಪರಿಣಾಮ ಉಲ್ಬಣಿಸದಂತೆ ಸ್ವಲ್ಪ ಪರಿಹಾರವನ್ನೆನೊ ತೆಗೆದುಕೊಳ್ಳಲಾಯಿತು. ಆದರೆ ಆ ಪರಿಹಾರವೆಲ್ಲ ತಾತ್ಕಾಲಿಕ; ಕ್ಷಾಮಾಂತರದ ಪರಿಣಾಮಗಳು ಇನ್ನು ಹೋಗಿಲ್ಲ. ಆರ್ಥಿಕ ಪ್ರಮಾಣದಲ್ಲಿ ಪುನಃ ಯಾವಾಗ ಕ್ಷಾಮ ಒದಗುತ್ತದೆಯೋ ಯಾರೂ ಹೇಳುವಂತೆ ಇಲ್ಲ. ಬಂಗಾಲ ನೆಲ ಹತ್ತಿದೆ. ಅದರ ಆರ್ಥಿಕ ಮತ್ತು ಸಾಮಾಜಿಕ ರಚನೆ ಪುಡಿಪುಡಿಯಾಗಿದೆ; ಅಳಿದು ಉಳಿದವರು ಬಲಹೀನರಾಗಿದ್ದಾರೆ.

ಕಲ್ಕತ್ತ ನಗರದ ಬೀದಿಗಳಲ್ಲಿ ಹೆಣಗಳು ಕೊಳೆತು ಈ ಭೀಕರ ನಾಟ್ಯ ನಡೆಯುತ್ತಿರುವಾಗ ನಗರದ ಹತ್ತು ಸಾವಿರ ಶ್ರೀಮಂತರ ಸಮಾಜ ಜೀವನ ಮಾತ್ರ ಅದೇ ವೈಭವದಿಂದ ಮುಂದುವರಿದಿತ್ತು. ಅದೇ ನೃತ್ಯ, ಭೋಜನ, ಒಡವೆ ವಸ್ತುಗಳ ಪ್ರದರ್ಶನ ಮತ್ತು ಸುಖಲೋಲುಪತೆ ಎಂದಿನಂತೆ ನಡೆದಿದ್ದವು. ಆಹಾರ ಹಂಚಿಕೆ ಬಂದುದು ಇದಾದ ಅನೇಕ ದಿನಗಳ ಮೇಲೆ, ಎಂದಿನಂತೆ ನಡೆದ ಕಲ್ಕತ್ತೆಯಲ್ಲಿ ಕುದುರೆ ಜೂಜುಗಳಲ್ಲಿ ಶ್ರೀಮಂತರು ತಮ್ಮ ಠೀವಿಯನ್ನೂ ಪ್ರದರ್ಶಿಸಿದರು. ಆಹಾರ ಸಾಗಿಸಲು ರೈಲು ಗಾಡಿಗಳಿಲ್ಲದಿದ್ದರೂ, ಜೂಜಿನ ಕುದುರೆಗಳು ದೇಶದ ದೂರದೂರದ ಭಾಗಗಳಿಂದ ಬರಲು ವಿಶೇಷ ರೈಲುಗಳ ಸೌಕರ್ಯವಿತ್ತು. ಈ ರಸಮಯ ಜೀವನದಲ್ಲಿ ಆಂಗ್ಲರೂ ಭಾರತೀಯರೂ ಇಬ್ಬರೂ ಸಮಭಾಗಿಗಳಾದರು. ಏಕೆಂದರೆ ಯುದ್ಧದಿಂದ ಇಬ್ಬರ ವ್ಯಾಪಾರವೂ ಲಾಭದಾಯಕವಿತ್ತು; ಹಣಕ್ಕೆ ಯಾವ ಕೊರತೆಯೂ ಇರಲಿಲ್ಲ. ಯಾವ ಆಹಾರದ ಅಭಾವದಿಂದ ನಿತ್ಯವೂ ಸಹಸ್ರಗಟ್ಟಲೆ ಜನರು ಸಾಯುತ್ತಿದ್ದರೊ ಆ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಯೇ ಅನೇಕ ಸಂದರ್ಭದಲ್ಲಿ ಆ ಹಣ ಬಂದಿತ್ತು.

ಅನೇಕ ವೇಳೆ, ಭಾರತವು ಮಹಾ ಧನಿಕರ ಮತ್ತು ಕಡುಬಡವರ, ಆಧುನಿಕತೆಯ ಮತ್ತು ಪ್ರಾಚೀನತೆಯ, ರಾಜರುಗಳ ಮತ್ತು ಪ್ರಜೆಗಳ, ಬ್ರಿಟಿಷರ ಮತ್ತು ಭಾರತೀಯರ ವಿರೋಧಾಭಾಸವೆಂದು ಹೇಳಿದಾರೆ. ಆದರೆ ೧೯೪೩ನೆಯ ಕೊನೆಯ ಅರ್ಧಭಾಗದಲ್ಲಿ ಒದಗಿದ ಈ ಭೀಕರ ಕ್ಷಾಮ ಸಮಯದಲ್ಲಿ ಈ ವಿರೋಧಾಭಾಸವು ಕಲ್ಕತ್ತ ನಗರದಲ್ಲಿ ಎದ್ದು ಕಂಡಂತೆ ಬೇರಾವ ಸಮಯದಲ್ಲೂ ಕಂಡಿರಲಿಲ್ಲ. ಸಾಮಾನ್ಯವಾಗಿ ಒಂದರ ಪರಿಚಯ ಇನ್ನೊಂದಕ್ಕೆ ಇಲ್ಲದೆ ದೂರದೂರ ಇರುತ್ತಿದ್ದ ಈ ಎರಡು ಪ್ರಪಂಚಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷ ಒಟ್ಟುಗೂಡಿ ಅಕ್ಕ ಪಕ್ಕ ನಿಲ್ಲಬೇಕಾಯಿತು. ಎರಡಕ್ಕೂ ಇದ್ದ ವಿಲಕ್ಷಣ ವ್ಯತ್ಯಾಸವು ಎದೆ ಬಿರಿಯುತ್ತಿತ್ತು. ಆದರೆ ಆಗಲೂ ಅನೇಕರು ಈ ಭೀಕರ ವಿಲಕ್ಷಣಸ್ಥಿತಿ ಸ್ವಲ್ಪವೂ ಅರಿತುಕೊಳ್ಳದೆ ಎಂದಿನಂತೆ ತಮ್ಮ ಹಳೆಯ ದಾರಿಯಲ್ಲಿಯೇ ಮುಂದುವರಿಯುತ್ತಿದ್ದುದು ಇನ್ನೂ ವಿಸ್ಮಯ ಉಂಟುಮಾಡುತ್ತಿತ್ತು. ಅವರ ಮನೋಭಾವನೆ ಏನಿತ್ತೋ ದೇವರೇ ಬಲ್ಲ; ಅವರ ಕಾರ್ಯನೀತಿಯೇ ಅವರ ಒರೆಗಲ್ಲು. ಆಂಗ್ಲರು ತಮ್ಮದೇ ಒಂದು ಜಾತಿ ಮಾಡಿಕೊಂಡು ಪ್ರತ್ಯೇಕ ಜೀವನ ನಡೆಸುತ್ತ ಇದ್ದುದರಿಂದ ಅವರಲ್ಲಿ ಕೆಲವರು ಸಂಕೋಚಪಟ್ಟುಕೊಂಡರೂ ಅನೇಕರಿಗೆ ತಮ್ಮ ಸಾಂಪ್ರದಾಯಿಕ ಜೀವನ ಮಾರ್ಪಡಿಸಿಕೊಳ್ಳಲು ಅವಶ್ಯಕತೆ ಕಾಣಲಿಲ್ಲ. ಆದರೆ ಅದೇ ದಾರಿಯಲ್ಲಿ ನಡೆಯುತ್ತಿದ್ದ ಭಾರತೀಯರು ಮಾತ್ರ ತಮಗೂ ತಮ್ಮ ಜನರಿಗೂ ಮಧ್ಯೆ ಇದ್ದ ಅಪಾರ ಅಂತರವನ್ನು ವ್ಯಕ್ತಗೊಳಿಸಿದರು. ಮಾನವೀಯತೆ ಅಥವ ಮಾನ ಮರ್ಯಾದೆ ಯಾವುದೂ ಅವರ ಮನಸ್ಸಿನ ಮೇಲೆ ಪರಿಣಾಮ ಮಾಡಲಿಲ್ಲ.

ಎಲ್ಲ ವಿಷಮ ಪರಿಸ್ಥಿತಿಗಳಂತೆ ಈ ಕ್ಷಾಮ ಸಹ ಭಾರತೀಯರ ಸದ್ಗುಣ ಮತ್ತು ದುರ್ಗುಣಗಳೆರಡನ್ನೂ

34