ಪುಟ:ಭಾರತ ದರ್ಶನ.djvu/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೫೫

ಯುದ್ಧದಿಂದ ಕೈಗಾರಿಕೋದ್ಯಮದ ಮತ್ತು ವಸ್ತು ನಿರ್ಮಾಣ ಶಕ್ತಿಯ ಪ್ರಗತಿಯಾಯಿತು. ಆದರೂ ಇದರಿಂದ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಪ್ರೋತ್ಸಾಹ ದೊರೆಯಿತೊ ಅಥವ ಹಳೆಯ ಕೈಗಾರಿಕೆಗಳನ್ನೇ ಅಭಿವೃದ್ಧಿಗೊಳಿಸಿ ಮಾರ್ಪಡಿಸಿದರೆ ಹೇಳಲು ಸಾಧ್ಯವಿಲ್ಲ. ಯುದ್ಧಕಾಲದ ಕೈಗಾರಿಕಾ ಚಟುವಟಿಕೆಯ ಅಂಕಿ ಅಂಶವು ಒಂದೇ ರೀತಿ ಇರುವುದನ್ನು ನೋಡಿದರೆ ದೇಶದ ಕೈಗಾರಿಕೋದ್ಯಮದಲ್ಲಿ ಯಾವ ಹೆಚ್ಚಿನ ಪ್ರಗತಿಯೂ ಆಗಿಲ್ಲವೆಂದು ಸ್ಪಷ್ಟವಾಗುತ್ತದೆ. ಇನ್ನೂ ಕೆಲವು ಅರ್ಥಶಾಸ್ತ್ರ ನಿಪುಣರು ಯುದ್ಧ ಮತ್ತು ಯುದ್ಧ ಕಾಲದ ಬ್ರಿಟಿಷರ ನೀತಿಯಿಂದ ಭಾರತದ ಕೈಗಾರಿಕೋದ್ಯಮವು ಬೆಳೆಯುವುದರ ಬದಲು ನಿಜವಾಗಿ ಮೊಟಕಾಗಿದೆ ಎಂದು ಹೇಳುತ್ತಾರೆ. ಪ್ರಮುಖ ಅರ್ಥಶಾಸ್ತ್ರ ನಿಪುಣರಲ್ಲಿ ಒಬ್ಬರೂ, ತಾತಾ ಕಂಪೆನಿಯ ಡೈರೆಕ್ಟರುಗಳಲ್ಲಿ ಒಬ್ಬರೂ ಆದ ಡಾಕ್ಟರ್ ಜಾನ್, ಮಥಾಯ್ “ಯುದ್ಧದಿಂದ ಭಾರತದ ಕೈಗಾರಿಕಾ ಪ್ರಗತಿಗೆ ಬಹಳ ಪ್ರೋತ್ಸಾಹ ದೊರೆತಿದೆ ಎಂಬ ಸಾಮಾನ್ಯ ಭಾವನೆಗೆ ಯಾವ ಆಧಾರವೂ ಇಲ್ಲ. ಮೊದಲೇ ಇದ್ದ ಕೆಲವು ಕೈಗಾರಿಕೆಗಳು ಯುದ್ಧದ ಆವಶ್ಯಕತೆ ಪೂರೈಸಲು ತಮ್ಮ ವಸ್ತು ನಿರ್ಮಾಣ ಶಕ್ತಿ ಹೆಚ್ಚಿಸಿಕೊಂಡಿರುವುದು ನಿಜ. ಆದರೆ ದೇಶದ ಹಿತದೃಷ್ಟಿಯಿಂದ ಯುದ್ಧಕ್ಕೆ ಮುಂಚೆಯೇ ಯೋಚಿಸಿದ್ದ ಕೆಲವು ಅತ್ಯವಶ್ಯಕ ಕೈಗಾರಿಕೆಗಳನ್ನೂ ಯುದ್ಧ ನೆಪದಿಂದ ಕೈಬಿಡಲಾಗಿದೆ. ಎಲ್ಲ ದೃಷ್ಟಿಯಿಂದ ಸೂಕ್ಷ್ಮವಾಗಿ ಹೋಲಿಸಿ ನೋಡಿದರೆ ಕೆನಡ ಮತ್ತು ಆಸ್ಟ್ರೇಲಿಯಾ ದೇಶಗಳಂತೆ ಭಾರತದಲ್ಲೂ ಕೈಗಾರಿಕಾ ಪ್ರಗತಿ ಆಗಬೇಕಾಗಿತ್ತು, ಆದರೆ ಅದಕ್ಕೆ ಬದಲು ಯುದ್ಧದಿಂದ ಪ್ರಗತಿಗೆ ತೊಂದರೆಯೇ ಹೆಚ್ಚಾಗಿದೆ. ಮೂಲವಸ್ತು ನಿರ್ಮಾಣಕ್ಕೆ ಅವಶ್ಯವಾದ ಪ್ರಕೃತಿ ಸಂಪತ್ತು ಎಲ್ಲವೂ ಭಾರತದಲ್ಲಿ ಇದೆ” ಎಂದು ಹೇಳಿದ್ದಾರೆ. ಕೈಗಾರಿಕೋದ್ಯಮದ ಅಂಕಿ ಅಂಶಗಳ ಸಾಕ್ಷದಿಂದ ಈ ಅಭಿಪ್ರಾಯಕ್ಕೆ ಸಮರ್ಥನೆ ದೊರೆಯುತ್ತದೆ. ಯುದ್ದ ಪೂರ್ವದ ವೇಗದಿಂದ ಕೈಗಾರಿಕಾ ಪ್ರಗತಿ ಆಗಿದ್ದರೂ ಹೊಸ ಕೈಗಾರಿಕೆಗಳು ಬೆಳೆಯುತ್ತಿದ್ದವು; ಒಟ್ಟಿನಲ್ಲಿ ಹೆಚ್ಚು ವಸ್ತು ನಿರ್ಮಾಣವೂ ಆಗುತ್ತಿತ್ತು.*

ಆದರೆ ಯುದ್ಧದಿಂದ ಒಂದು ಅಂಶ ಮಾತ್ರ ಯಾವ ಅನುಮಾನಕ್ಕೂ ಆಸ್ಪದವಿಲ್ಲದಂತೆ ಸ್ಪಷ್ಟವಾಯಿತು. ಅವಕಾಶ ಮಾತ್ರ ದೊರೆತರೆ ತನ್ನ ಅಪಾರ ಪ್ರಕೃತಿ ಸಂಪತ್ತು ಉಪಯೋಗಿಸಿ ಅನತಿ ಕಾಲದಲ್ಲಿ ಅಧಿಕ ವಸ್ತು ನಿರ್ಮಾಣಮಾಡುವ ಶಕ್ತಿ ದೇಶಕ್ಕೆ ಇದೆ ಎಂದು. ಕಳೆದ ಐದು ವರ್ಷಗಳಲ್ಲಿ ಎಷ್ಟೇ ಅಡಚಣೆ ತಂದು ಒಡ್ಡಿದರೂ ಒಂದು ಆರ್ಥಿಕ ವ್ಯಕ್ತಿಯಾಗಿ ದೊಡ್ಡ ಬಂಡವಾಳ ಶೇಖರಿಸಿದೆ. ಈ ಬಂಡವಾಳ ಸ್ಟರ್ಲಿಂಗ್ ರೂಪದಲ್ಲಿರುವುದರಿಂದ ಭಾರತಕ್ಕೆ ದೊರಕುವಂತೆ ಇಲ್ಲ; ಮುಂದೆ ದೊರಕದಂತೆ ಅಡ್ಡಿ ಮಾಡುವುದಾಗಿಯೂ ಹೇಳುತ್ತಿದಾರೆ. ಬ್ರಿಟಿಷ್ ಸರಕಾರ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗಾಗಿ ಇಂಡಿಯಾ ಸರಕಾರ ವೆಚ್ಚ ಮಾಡಿದ ಹಣವೇ ಈ ಬಂಡವಾಳ, ಅದು ಭಾರತದ ಅಸಂಖ್ಯಾತ ಜನ
——————
* ಶ್ರೀ ಜೆ. ಆರ್. ಡಿ ತಾತಾ ೧೯೪೫ನೇ ಮೇ ೩೦ನೇ ದಿನ ಲಂಡನ್ ನಗರದಲ್ಲಿ ಯುದ್ಧದಿಂದ ಭಾರತದ ಕೈಗಾರಿಕೆಗಳು ಬೆಳೆಯುವುದಕ್ಕೂ ಕೈಗಾರಿಕೋತ್ಪತ್ತಿ ಹೆಚ್ಚುವುದಕ್ಕೂ ಅವಕಾಶವಾಗಿದೆ ಎಂಬ ವಾದ ನಿರಾಕರಿಸಿದರು. "ಎಲ್ಲೋ ಒಂದೆರಡು ಕಡೆ ಸ್ವಲ್ಪ ಪ್ರಗತಿಯಾಗಿರಬಹುದು. ಆದರೆ ಒಟ್ಟಿನಲ್ಲಿ ಯುದ್ಧ ಶಸ್ತ್ರಾಸ್ತ್ರ ಮತ್ತು ಇತರ ವಿಶೇಷ ಕೈಗಾರಿಕೆಗಳನ್ನು ಬಿಟ್ಟರೆ ಬೇರೆ ಯಾವ ಕೈಗಾರಿಕಾ ಪ್ರಗತಿಯೂ ಆಗಿಲ್ಲ. ಯುದ್ಧವಿಲ್ಲದಿದ್ದರೆ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿತ್ತು. ಇಟ್ಟಿಗೆ, ಉಕ್ಕು ಮತ್ತು ಯಂತ್ರ ಸಾಮಗ್ರಿ ದೊರೆಯದ ನಾನೇ ಅನೇಕ ಕೈಗಾರಿಕೆಗಳ ಸ್ಥಾಪನೆ ನಿಲ್ಲಿಸಿದ್ದೇನೆ. ಯುದ್ಧ ಕಾಲದಲ್ಲಿ ಭಾರತದಲ್ಲಿ ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿಯಾಗಿದೆ ಎಂದು ಹೇಳುವವರಿಗೆ ಭಾರತದ ನಿಜವಾದ ಪರಿಸ್ಥಿತಿ ತಿಳಿಯದು.” ಎಂದು ಹೇಳಿದ್ದಾರೆ, ಪುನಃ “ಈ ಗುಳ್ಳೆ ನಾನು ಒಡೆಯಬೇಕು. ಯುದ್ಧದಿಂದ ಭಾರತದ ಸಂಪತ್ತು ಹೆಚ್ಚಿದ; ಭಾರತ ಹೆಚ್ಚು ಲಾಭ ಸಂಪಾದಿಸಿದ ಎಂದು ಹೇಳುವುದು ಶುದ್ಧ ಅವಿವೇಕ, ಒಂದಲ್ಲ ಒಂದು ಕಾರಣದಿಂದ ಭಾರತದಲ್ಲಿ ಯಾವ ಮುಖ್ಯಪ್ರಗತಿಯೂ ಆಗಿಲ್ಲ, ಅದಕ್ಕೆ ಪ್ರತಿಯಾಗಿ ವಿಶೇಷ ಹಾನಿಯಾಗಿದೆ. ಯುದ್ಧ ದೆಸೆಯಿಂದ ಮತ್ತು ಯುದ್ಧಕ್ಕಾಗಿ ಭಾರತ ತೆತ್ತ ನೆರವಿನಿಂದ ಬಂಗಾಲದಲ್ಲಿ ಕೋಟಿಗಟ್ಟಲೆ ಜನ ಕ್ಷಾಮದಿಂದ ಸತ್ತರು. ಈಗ ಬಟ್ಟಿಯ ಕ್ಷಾಮವೂ ಒದಗಿದೆ. ಯಾವ ಆರ್ಥಿಕ ಪ್ರಗತಿಯೂ ಆಗಿಲ್ಲ ಎಂದು ಇದರಿಂದಲೇ ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ.