ಪುಟ:ಭಾರತ ದರ್ಶನ.djvu/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ನೋಡಿದರೆ ಸಮಾಜರಚನೆ ಅಷ್ಟು ಕಠಿಣವಿರಲಿಲ್ಲ. ಕ್ರಮೇಣ ಪರಿವರ್ತನೆ ಆಗುತ್ತಲೇ ಇತ್ತು. ಸ್ವಲ್ಪ ಹೆಚ್ಚು ಕಡಮೆ ಸ್ವತಂತ್ರವಿದ್ದ ಜಾತಿಗಳ ಯೋಜನೆ, ಒಟ್ಟು ಕುಟುಂಬ ಜೀವನ, ಸ್ವಯ ಮಾಡಳಿತದ ಗ್ರಾಮಜೀವನ ಈ ಜನಾಂಗ ಜೀವನದ ಆಧಾರಸ್ತಂಭಗಳಾದವು. ಅನೇಕ ನ್ಯೂನತೆ ಗಳಿದ್ದರೂ ಮಾನವ ಸ್ವಭಾವ ಮತ್ತು ಸಮಾಜಕ್ಕೆ ಅವಶ್ಯವಿದ್ದ ಕೆಲವು ಮುಖ್ಯ ಅಂಶಗಳನ್ನು ಅವು ತೃಪ್ತಿಗೊಳಿಸಿದ್ದರಿಂದ ಅಷ್ಟು ದೀರ್ಘಕಾಲ ಅವು ಬಾಳಿದವು. ಪ್ರತಿಯೊಂದು ಜಾತಿಪಂಥಕ್ಕೂ ಭದ್ರತೆ ಮತ್ತು ಸುರಕ್ಷತೆ ಇತ್ತು; ಪ್ರತಿಯೊಂದು ಪಂಥಕ್ಕೂ ಸ್ವತಂತ್ರ ಭಾವನೆ ಇತ್ತು. ಸಮಾಜದ ಸಾಮಾನ್ಯ ಅಧಿಕಾರ ಸಂಬಂಧವನ್ನು ಪ್ರತಿಬಿಂಬಿಸುತ್ತ ಇದ್ದುದರಿಂದ ಜಾತಿ ಪದ್ಧತಿ ಉಳಿಯಿತು. ಸಮಾಜದ ರೂಢಮೂಲ ಭಾವನೆಯ ಬೆಂಬಲ ಮಾತ್ರವಲ್ಲದೆ ಕಾರ್ಯ ಪಟುತ್ವ, ಬುದ್ಧಿಶಕ್ತಿ, ಕಾರ್ಯ ದಕ್ಷತೆ ಮತ್ತು ಆತ್ಮತ್ಯಾಗಕ್ಕೆ ಸಿದ್ಧತೆ ಮತ್ತು ಅವಕಾಶ ಸದಾ ಇರುತ್ತಿದ್ದುದರಿಂದ ಜಾತಿಗಳ ಹಕ್ಕು ಬಾಧ್ಯತೆಗಳಿಗೂ ಬೆಂಬಲ ದೊರೆಯಿತು. ಪರಸ್ಪರ ಹಕ್ಕುಗಳಿಗಾಗಿ ಹೋರಾಟ ನಡೆಸಿ ಈ ಭಾವನೆ ಬೆಳೆಸಲಿಲ್ಲ; ಆದರೆ ಪ್ರತಿ ವ್ಯಕ್ತಿಯೂ ಇತರರಿಗಾಗಿ ಮಾಡಬೇಕಾದ ಕರ್ತವ್ಯ ಮತ್ತು ಸಮ ರ್ಪಕ ರೀತಿಯಲ್ಲಿ ನಿರ್ವಹಣೆ, ಪ್ರತಿ ಜಾತಿಪಂಥದಲ್ಲಿ ಮತ್ತು ಜಾತಿ ಜಾತಿಗಳಲ್ಲಿ ಸಂಪೂರ್ಣ ಸಹಕಾರ, ಒಟ್ಟಿನಲ್ಲಿ ಹೋರಾಟಕ್ಕಿಂತ ಶಾಂತಿ ಸ್ಥಾಪನೆಗೆ ಹೆಚ್ಚಿನ ಪ್ರಾಶಸ್ತ್ರ ಇವುಗಳ ಆಧಾರದ ಮೇಲೆ ಬೆಳೆಯಿತು. ಸಮಾಜರಚನೆ ಇಷ್ಟು ಬಿಗಿ ಇದ್ದರೂ ಭಾವನಾ ಸ್ವಾತಂತ್ರ್ಯಕ್ಕೆ ಯಾವ ನಿರ್ಬಂಧವೂ ಇರಲಿಲ್ಲ. ಯಾವ ಆದರ್ಶವನ್ನು ಭಾರತೀಯ ನಾಗರಿಕತೆ ತನ್ನ ಗುರಿಯಾಗಿ ಇಟ್ಟು ಕೊಂಡಿತ್ತೊ ಅದನ್ನು ಬಹುಮಟ್ಟಿಗೆ ಸಾಧಿಸಿತು; ಆದರೆ ಆ ಸಾಧನೆಯಲ್ಲೇ ಜೀವನ ಮಾಸತೊಡಗಿತು. ಏಕೆಂದರೆ ಪರಿವರ್ತ ನೆಗೆ ಅವಕಾಶವಿಲ್ಲದ ಕಠಿನ ವಾತಾವರಣದಲ್ಲಿ ಕಾರ್ಯೋನ್ಮುಖ ಜೀವನ ಬಹುಕಾಲ ಸಾಧ್ಯವಿಲ್ಲ. ಭಾರತಕ್ಕೆ ಯಾವುದು ಕೊರತೆ ಆಯಿತೊ ಅದು ಆಧುನಿಕ ಪಾಶ್ಚಾತ್ಯದ ಆಸ್ತಿಯಾಯಿತು; ಆಸ್ತಿ ಯಾದುದು ಮಾತ್ರವಲ್ಲದೆ ಮಿತಿಮೀರಿ ಬೆಳೆಯಿತು. ಕಾರ್ಯೋನ್ಮುಖ ದೃಷ್ಟಿ ಇತ್ತು; ಶಾಶ್ವತ ಸರ್ವ ಸಮ್ಮತ ಅಂತಿಮ ಮೂಲತತ್ವಗಳಿಗೆ ಲೆಕ್ಕಿಸದೆ ಜೀವನ ಪರಿವರ್ತನೆಯಲ್ಲಿ ವಿಶೇಷ ಆಸಕ್ತಿ ತೋರಿಸಿತು. ಕರ್ತವ್ಯ ಮತ್ತು ಆಭಾರಗಳಿಗೆ ಯಾವ ಮ ನ ಣೆ ಕೊಡದೆ ಹಕ್ಕು ಬಾ ಧೃ ತೆ ಗಳಿ ಗೆ ಪ್ರಾಮುಖ್ಯತೆ ಕೊಟ್ಟರು. ಕಾರ್ಯತತ್ಪರತೆ, ಆಕ್ರಮಣಶೀಲತೆ, ಆರ್ಜನ ದೃಷ್ಟಿ, ಅಧಿಕಾರ ಮತ್ತು ದರ್ಪದ ಆಸೆ, ನಾಳಿನ ಪರಿಣಾಮ ಏನೆ ಇರಲಿ ಇಂದಿನ ಸುಖ ಮುಖ್ಯ ಎಂಬ ಭಾವನೆ ಅದರ ಮುಖ್ಯ ಗುಣಗಳಾದವು. ಕಾರ್ಯೋನ್ಮುಖ ದೃಷ್ಟಿಯಿಂದ ಜೀವನ ಪ್ರಗತಿಪರವೂ ಪೂರ್ಣ ಸುಖ ಮಯವೂ ಇತ್ತು; ಆದರೆ ಅದರ ಉಷ್ಣಾಂಶ ದಿನದಿನಕ್ಕೂ ಏರುತ್ತಲೇ ಇದ್ದುದರಿಂದ ಅದು ಜ್ವರ ಪೀಡಿತವಿತ್ತು, ತನ್ನ ನಿಶ್ಚಲ ಜೀವನದಿಂದ ಭಾರತೀಯ ನಾಗರಿಕತೆ ಸಂಕುಚಿತಗೊಂಡು, ಆತ್ಮಗತವಾಗಿ, ಆತ್ಮ ಪ್ರಶಂಸೆಯಲ್ಲಿ ಮಗ್ನವಾದರೆ ಆಧುನಿಕ ಪಾಶ್ಚಾತ್ಯ ಸಂಸ್ಕೃತಿ ಅನೇಕ ಮಹತ್ಕಾರ ಸಾಧಿಸಿದ್ದರೂ ಮಾನವ ಜೀವನದ ಮೂಲಪ್ರಶ್ನೆಗಳ ಪರಿಹಾರದಲ್ಲಿ ಯಾವ ಕೃತಕೃತ್ಯತೆಯನ್ನೂ ಪಡೆದಿಲ್ಲ. ಘರ್ಷಣೆ ಅದರಲ್ಲಿ ಸದಾ ಅಂತರ್ಗತವಿದೆ. ಆಗಾಗ ಪ್ರಳಯಾಂತಕ ಆತ್ಮನಾಶಕ ಕೃತ್ಯಗಳಲ್ಲಿ ತೊಡಗುತ್ತಲೇ ಇದೆ. ಅದಕ್ಕೊಂದು ಭದ್ರತೆ, ಜೀವನಕ್ಕೊಂದು ಅರ್ಥಕೊಡುವ ಒಂದು ಉನ್ನತ ಆದರ್ಶ ಮತ್ತು ಕೆಲವು ಮೂಲ ತತ್ವಗಳು ಇಲ್ಲವೆಂದು ಸ್ಪಷ್ಟ ತೋರುತ್ತದೆ. ಈ ಅಭಾವ ಏನು ಎಂದು ಮಾತ್ರ ನಾನು ಹೇಳಲಾರೆ. ಆದರೂ ಆ ನಾಗರಿಕತೆಯಲ್ಲಿ ಕಾರ್ಯೋನ್ಮುಖತೆ, ಜೀವನಶಕ್ತಿ ಮತ್ತು ಉತ್ಸುಕತೆ ಪೂರ್ಣ ಇರುವುದರಿಂದ ಅದರ ಭವಿಷ್ಯ ಉಜ್ವಲವಿದೆ. ಆಧುನಿಕ ಪಾಶ್ಚಾತ್ಯದಿಂದ ಭಾರತ ಮತ್ತು ಚೀನ ಎರಡೂ ಕಲಿಯಬೇಕಾದ್ದು ಬಹಳ ಇದೆ. ಏಕೆಂದರೆ ಪಾಶ್ಚಾತ್ಯವು ಇಂದಿನ ಯುಗಧರ್ಮವನ್ನು ಪ್ರತಿಬಿಂಬಿಸುತ್ತದೆ. ಆದರೆ ಪಾಶ್ಚಾತ್ಯಕ್ಕೆ ಸಹ ಅನೇಕ ವಿಷಯಗಳನ್ನು ಕಲಿಯಬೇಕಾದ ಆವಶ್ಯಕತೆ ಇದೆ. ಜೀವನದ ಗಾಢ ರಹಸ್ಯಗಳು ಕೆಲವನ್ನು