ಪುಟ:ಭಾರತ ದರ್ಶನ.djvu/೪೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೭೫

ಹಿರಿಮೆಯಲ್ಲಿ ಹೆಮ್ಮೆಗೊಂಡು, ಇತರ ಜನಾಂಗಗಳನ್ನು ರಾಷ್ಟ್ರಗಳನ್ನು ತೆರೆದ ಮನಸ್ಸು ಮತ್ತು ಮಮತೆಯಿಂದ ಕಂಡು, ವಿಶಾಲ ಮನಮೋಹಕ ಪ್ರಪಂಚದ ನಾಗರಿಕರಾಗಿ, ತಮ್ಮ ಪೂರ್ವಿಕರು ಯಾವ ಪ್ರಾಚೀನ ಸತ್ವಾನ್ವೇಷಣೆಯಲ್ಲಿನ ಅದ್ಭುತ ಸಾಧನೆಯಿಂದ ಅಗ್ರಸ್ಥಾನ ಪಡೆದರೂ ಆ ಅನ್ವೇಷಣೆಯಲ್ಲಿ ಇತರರೊಂದಿಗೆ ಭುಜಕ್ಕೆ ಭುಜಕೊಟ್ಟು ಮತ್ತೊಮ್ಮೆ ಮುಂದುವರಿಯುತ್ತಾರೆ.

೧೧. ಭಾರತದ ವಿಭಜನೆಯೇ ? ಶಕ್ತಿಯುತ ರಾಷ್ಟ್ರೀಯ ಸರಕಾರವೇ ಅಥವ ಸಂಯೋಜಿತ
ರಾಷ್ಟ್ರೀಯ ಸರಕಾರಗಳ ಸಡಿಲು ಕೇಂದ್ರವೆ?

ನಮ್ಮ ಆಸೆಗಳಿಗೂ ಭೀತಿಗಳಿಗೂ ಒಂದು ಸರಿಯಾದ ಸಮತೋಲನ ಕಂಡು ಹಿಡಿಯುವುದೂ, ನಮ್ಮ ಆಸೆಗಳು ನಮ್ಮ ಮನಸ್ಸಿನ ಭಾವನೆಗಳ ಮೇಲೆ ಪರಿಣಾಮ ಮಾಡದಂತೆ ತಡೆಯುವುದೂ ಅತಿಕಷ್ಟ. ನಮ್ಮ ಆಸೆಗಳು ತಮ್ಮನ್ನು ಪುಷ್ಟಿಕರಿಸುವ ಕಾರಣಗಳನ್ನೇ ಹುಡುಕುತ್ತವೆ ಮತ್ತು ತಮಗೆ ಸರಿಹೊಂದದ ವಾಸ್ತವಿಕ ವಿಷಯಗಳನ್ನೂ, ಪ್ರಮಾಣಗಳನ್ನೂ ಉಪೇಕ್ಷೆ ಮಾಡಲು ಯತ್ನಿಸುತ್ತವೆ. ನ್ಯಾಯವಾದ ತೀರ್ಮಾನಕ್ಕೆ ಬಂದು ಕಾರ್ಯಾಚರಣೆಯ ನಿಜವಾದ ತಳಹದಿ ಕಂಡುಕೊಳ್ಳೋಣವೆಂದು ಆ ಸಮತೋಲನ ಪಡೆಯಲು ಪ್ರಯತ್ನ ಪಡುತ್ತಿದ್ದೇನೆ; ಆದರೆ ಆ ಸಾಧನೆಯಿಂದ ಎಷ್ಟು ದೂರವಿದ್ದೇನೆಂದು ನನಗೆ ಗೊತ್ತಿದೆ; ಮತ್ತು ನನ್ನ ವ್ಯಕ್ತಿತ್ವ ರೂಪಿಸಿ ತಮ್ಮ ಅಗೋಚರ ಬಂಧನಗಳಿಂದ ನನ್ನನ್ನು ಬಿಗಿದಿರುವ ನನ್ನ ಭಾವನೆಗಳ ಮತ್ತು ಅನುಕಂಪಗಳ ಹೊರೆಯಿಂದ ನಾನು ತಪ್ಪಿಸಿಕೊಳ್ಳಲಾರೆನೆಂದು ಅರಿತಿದ್ದೇನೆ. ಅದೇ ರೀತಿ ಇತರರೂ ಬೇರೆ ದಾರಿಯಲ್ಲಿ ತಪ್ಪು ಮಾಡಬಹುದು. ಭಾರತದ ವಿಷಯ ಮತ್ತು ಪ್ರಪಂಚದಲ್ಲಿ ಭಾರತದ ಸ್ಥಾನದ ವಿಷಯವಾಗಿ ಭಾರತೀಯನ ದೃಷ್ಟಿ ಮತ್ತು ಆಂಗ್ಲೀಯನ ದೃಷ್ಟಿ ಉತ್ತರ ದಕ್ಷಿಣಧೃವಗಳಿದ್ದಂತೆ ತೀರ ಭಿನ್ನ, ಇಬ್ಬರ ಭಿನ್ನ ವ್ಯಕ್ತಿತ್ವದ ಮತ್ತು ಭಿನ್ನ ರಾಷ್ಟ್ರೀಯತೆಯ ಹಿನ್ನೆಲೆಯೇ ಅದಕ್ಕೆ ಕಾರಣ. ವ್ಯಕ್ತಿಯೂ, ರಾಷ್ಟ್ರೀಯ ಸಂಗಡಗಳೂ ತಮ್ಮ ತಮ್ಮ ಕಾರ್ಯಾಚರಣೆಗಳಿಂದ ತಮ್ಮ ಭವಿಷ್ಯ ರೂಪಿಸು ಇವೆ. ಹಿಂದಿನ ಕಾರ್ಯಾಚರಣೆ ಇಂದಿನದಕ್ಕೆ ದಾರಿ, ಇಂದಿನ ಕಾರ್ಯಾಚರಣೆ ನಾಳೆಗೆ ಮೂಲ. ಭಾರತ ದಲ್ಲಿ ಇದನ್ನೇ ನಾವು ಕರ್ಮವೆನ್ನುತ್ತವೆ; ಕಾರ್ಯಕಾರಣ ವಿಧಿ ಅದು ; ನಮ್ಮ ಹಿಂದಿನ ಕಾರ್ಯಾಚರಣೆಯು ನನಗೆ ರೂಪಿಸುವ ಭವಿಷ್ಯ ಅದು. ಅದೇನು ವ್ಯತ್ಯಾಸವಾಗದ ಭವಿಷ್ಯವಲ್ಲ. ಇನ್ನೂ ಅನೇಕ ಅಂಶಗಳು ಅದರಮೇಲೆ ಪರಿಣಾಮಮಾಡುತ್ತವೆ. ವ್ಯಕ್ತಿಯ ಮನೋನಿಶ್ಚಯ ಸಹ ಅದರಮೇಲೆ ಪ್ರಭಾವ ಸ್ವಲ್ಪ ಬೀರುತ್ತದೆ. ಪೂರ್ವಕರ್ಮದ ಪರಿಣಾಮವನ್ನು ಈ ರೀತಿ ವ್ಯತ್ಯಾಸಗೊಳಿಸುವ ಸ್ವಾತಂತ್ರ್ಯವು ನಮಗೆ ಇರದಿದ್ದರೆ ನಾವೆಲ್ಲರೂ ಅನಿವಾರ್ಯ ಅದೃಷ್ಟದ ಕಪಿಮುಷ್ಟಿಯ ಹಿಡಿತದಲ್ಲಿನ ಕೀಲು ಗೊಂಬೆಗಳಾಗುತ್ತಿದ್ದೆವು. ಆದರೂ ವ್ಯಕ್ತಿ ಮತ್ತು ರಾಷ್ಟ್ರ ನಿರೂಪಣೆಯಲ್ಲಿ ಪೂರ್ವ ಕರ್ಮವು ಒಂದು ಪ್ರಬಲವಾದ ಶಕ್ತಿ. ನಮ್ಮ ರಾಷ್ಟ್ರೀಯ ಭಾವನೆಯೇ ಹಿಂದಿನ ಎಲ್ಲ ಒಳ್ಳೆಯ ಮತ್ತು ಕೆಟ್ಟ ಸ್ಮರಣೆಗಳೊಂದಿಗೆ ಆ ಪೂರ್ವ ಕರ್ಮದ ನೆರಳು.

ಪ್ರಾಯಶಃ ಈ ಪೂರ್ವಾರ್ಜಿತ ಕರ್ಮವು ವ್ಯಕ್ತಿಗಿಂತ ಹೆಚ್ಚಾಗಿ ರಾಷ್ಟ್ರೀಯ ಪಂಗಡಗಳ ಮೇಲೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುವಂತೆ ತೋರುತ್ತದೆ. ಏಕೆಂದರೆ ವ್ಯಕ್ತಿಗಿಂತ ಹೆಚ್ಚಾಗಿ ಬಹು ಸಂಖ್ಯಾತ ಜನರ ಸಮುದಾಯಗಳು ಯಾವುದೋ ಅಗೋಚರ ಪೌರುಷ ಶಕ್ತಿಗಳ ಸೆಳೆತಕ್ಕೆ ಸಿಕ್ಕಿ ಮುನ್ನುಗ್ಗುತ್ತಿವೆ ; ಅವರನ್ನು ಆ ಮಾರ್ಗದಿಂದ ಕದಲಿಸುವುದು ಇನ್ನೂ ಬಹು ಕಷ್ಟ, ವ್ಯಕ್ತಿಯ ಮೇಲೆ ನೈತಿಕ ಭಾವನೆಗಳ ಪ್ರಭಾವ ಬೀಳಬಹುದು; ಆದರೆ ಜನಸಮುದಾಯ ದೊಡ್ಡದಾದಷ್ಟೂ ನೈತಿಕ ಪ್ರಭಾವ ಅದರ ಮೇಲೆ ಕಡಮೆಯಾಗುತ್ತ ಹೋಗುತ್ತದೆ. ಅದರಲ್ಲೂ ಇಂದಿನ ಆಧುನಿಕ ಪ್ರಪಂಚದಲ್ಲಿ ದುಷ್ಟ ಪ್ರಚಾರದಿಂದ ಜನಸಮುದಾಯ ಕೆರಳಿಸುವುದು ಬಹು ಸುಲಭ. ಆದರೂ ಬಹು ವಿರಳವಾದರೂ ಒಂದೊಂದು ವೇಳೆ, ಜನಸಮುದಾಯವೇ ಒಂದು ಉನ್ನತ ನೈತಿಕ ಮಟ್ಟಕ್ಕೆ ಏರಿ ವ್ಯಕ್ತಿಯೇ ತನ್ನ ಸಂಕುಚಿತ ಸ್ವಾರ್ಥ ಬುದ್ಧಿ ಬಿಡುವಂತೆ ಪ್ರೇರಿಸುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗಿಂತ ಸಮುದಾಯವೇ ಕೆಳಮಟ್ಟದಲ್ಲಿ ಇರುತ್ತದೆ.