ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೨

ಮನಮಂಥನ

ಆತಂಕ ! ರೋಗಿ ಹೇಗಿದ್ದಾನೋ ? ಏನಾದನೋ ? ಅಂತ. ಕಾರಣ, ಮೇಲೆ ಬಿದ್ದುಕೊಂಡು ಅವನೇ ಸಾಹುಕಾರರ ಮನೆಗೆ ಹೋದ. ಅಲ್ಲಿ ವೈದ್ಯ ಕಂಡುದೇನು? ಹೊರ ಹಜಾರದಲ್ಲಿಯೇ ಧಾಂಡಿಗ ಮಗು ಕುಳಿತು ಇಡಲಿಗುಡ್ಡಗಳನ್ನೂ ಕಾಫಿ ಚೊಂಬನ್ನೂ ಖಾಲಿ ಮಾಡುತ್ತಿದ್ದ. 'ಚೆನ್ನಾಗಿ ನಿದ್ರೆ ಬಂತು ಡಾಕ್ಟರೇ ! ಈಗ ಚೆನ್ನಾಗಿದ್ದೀನಿ. ಅಸಾಧ್ಯ ಹಸಿವು ಅಷ್ಟೇ' ಎಂದ.

'ನಿನ್ನೆ ನಿಶಿರಾತ್ರಿಯಲ್ಲಿ ಹಾಗೆ ಯಾಕೆ ಆಡಿದೆ ? ಏನಾದರೂ ಕೆಟ್ಟ ಕನಸು ಬಿದ್ದು ಹಾಗಾಗಿತ್ತೇ ? ಅಥವಾ ಎಲ್ಲಾದರೂ ಊಟಗೀಟ ; ತೀರ್ಥಪ್ರಸಾದ ಅತಿ ಯಾಯಿತೋ ?' ಎಂದು ವೈದ್ಯರು ಕೇಳಿದರು. ಅವರ ಆತಂಕ ಈಗ ಕಡಮೆ ಯಾಗಿತ್ತಲ್ಲಾ ! ಈಗ ಕುಹಕವಾಡಬಹುದಾಗಿತ್ತು. ರೇಗಿಸಿ ಕೆಣಕಲೂ ಅನುಕೂಲವಿತ್ತು. ರಾತ್ರಿಯ ನಿದ್ರೆಗೆಡಿಸಿದವನ ಮೇಲೆ ಹೀಗಾದರೂ ಸೇಡು ತೀರಿಸಿಕೊಳ್ಳಬೇಡವೇ ?

ಧಾಂಡಿಗ ಮಗು ಡಾಕ್ಟರನ್ನು ಒಂದು ತರಹ ನೋಡಿದ. ಬನ್ನಿ ನನ್ನ ಕೊಠಡಿಗೆ, ಪರೀಕ್ಷೆ ಮಾಡೀರಂತೆ, ಎಂದು ಹೇಳಿ, ತಿಂಡಿ ತಿನ್ನುವುದನ್ನು ಅರ್ಧದಲ್ಲಿ ನಿಲ್ಲಿಸಿ ಎದ್ದ. 'ಅಮ್ಮಾ, ತಿರುಗಿ ಬಂದು ತಿಂದು ಮುಗಿಸ್ತೀನಿ, ತಟ್ಟೆ ಮುಚ್ಚಿಡಮ್ಮಾ, ಎಂದು ತಾಯಿಗೆ ಹೇಳಿ ಕೊಠಡಿಗೆ ಹೋದ. ಹಿಂಬಾಲಿಸಿದ ಡಾಕ್ಟರು ಕೋಣೆಯನ್ನು ಸೇರಿದಮೇಲೆ ಬಾಗಿಲು ಮುಚ್ಚಿ ಅಗುಳಿಯನ್ನು ಹಾಕಿದ.

'ಯಾರ ಹತ್ತಿರವೂ ಹೇಳಬೇಡಿ, ಡಾಕ್ಟರೇ ! ಕಲ್ಕತ್ತಾದಿಂದ ಸ್ನೇಹಿತ ನೊಬ್ಬನು ನಿನ್ನೆ ಸಂಜೆ ಭೇಟಿಯಾಗಿದ್ದ. ಬೆಳ್ಳಿಯ ವರಕು ಹಾಕಿದಂತಿದ್ದ ತಂಬಾಕಿನ ಮಾತ್ರೆಗಳನ್ನು ಪುಟ್ಟ ಶೀಷೆಯಲ್ಲಿಟ್ಟುಕೊಂಡಿದ್ದ. ಅದನ್ನು ನನಗೆ ಕೊಟ್ಟು ನಾಳೆ ನಾಡಿದ್ದರಲ್ಲಿ ಭೀಮಸಿಂಗ್ ಬರಾನೆ, ನಿನ್ನ ಬಳಿಗೆ, ಅವನಿಗೆ ಇದನ್ನು ಕೊಡು' ಎಂದ, ಆಗಲಿ ಅಂತ ಇಸಕೊಂಡೆ. 'ಕಲ್ಕತ್ತಾದಿಂದ ಇದನ್ನು ಭೀಮಸಿಂಗ್ ಏಕೆ ತರಿಸಿಕೊಳ್ಳುತ್ತಾನೆ ? ತಂಬಾಕು ಇಲ್ಲಿ ಸಿಗುಲ್ಲವೇ ?' ಎಂದು ಕೇಳಿದೆ. 'ಇದು ಪರಮಾಯಿಷಿ ತಂಬಾಕು ಕಣೋ, ಒಂದನ್ನು ಎಲಡಿಕೆ ಜತೆಗೆ ಹಾಕಿಕೊಂಡರೆ ಆಮೇಲೆ ನೋಡು ಅದರ ಮಜ! ನಾಲ್ವರು ಹೆಂಡಿರಿದ್ದರೆ ಸಂಸಾರ ಚೆನ್ನು ಅನ್ನಿಸುತ್ತೆ' ಎಂದ. ಒಂದು ಮಾತ್ರೆ ಕಡಿಮೆಯಾದರೆ ಭೀಮಸಿಂಗ್ ಬೈಯಲ್ಲ ಅಂತಂದುಕೊಂಡೆ. ಊಟವಾದ ಮೇಲೆ ಅಡಿಕೆ ಜತೆಗೆ ಇದನ್ನೂ ಬಾಯಿಗೆ ಹಾಕಿಕೊಂಡೆ ಎಂತದೋ ವಾಸನೆ ಇತ್ತು ಕೆಟ್ಟುದೇನೂ ಅಲ್ಲ, ವಗಚು ವರಚಾಗಿತ್ತು. ಒಂದು ತರಹ ರುಚಿಯಾಗಿಯೇ ಇತ್ತು ತಿಂದೆ, ನೋಡಿ, ಡಾಕ್ಟರೇ ! ಎರಡು ವಿಳ್ಳೇದೆಲೆ ಜಗಿದೆ. ಅಷ್ಟರಲ್ಲಿ ಮೈ ಬೆವರುಕ್ಕೆ ಶುರುವಾಯಿತು. ಎದೆ