ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೮೩

ಹೊಡೆದುಕೊಳ್ಳುಕ್ಕೆ ಪ್ರಾರಂಭವಾಯಿತು. ಬುದ್ಧಿಯೇ ಸ್ಥಿಮಿತದಲ್ಲಿರಲಿಲ್ಲ. ಎಲ್ಲಾದರೂ ಓಡಿ ಹೋಗೋಣ ಅನ್ನಿಸಿತು. ಏಳುಕ್ಕೆ ಕಾಲೇ ಬರದು. 'ಇದು ಯಾಕೆ ಹೀಗಾಡ್ತಾ ಇದೀರೀ ಅಂದ್ರೆ' ಅಂತ ಅಳುಮುಖ ಮಾಡಿಕೊಂಡು ಕೊಠಡಿಯ ಬಾಗಿಲು ಬಿಚ್ಚಿ ನನ್ನ ಹೆಂಡತಿ ಅಮ್ಮನ್ನ ಕರೆಯುಕ್ಕೆ ಹೋದಳು. ಬೇಡ ಕಣೆ ಇಲ್ಲೇ ಇರು ಅಂತ ಹೇಳಬೇಕು ಅಂತ ಮನಸ್ಸು. ಆದರೆ ಮಾತು ಬರಲಿಲ್ಲ. ಅಮ್ಮ ಬಂದಳು, ಯಾಕೆ ಹೀಗೆ ಮಗು ಎಂದು ಚೀರಿದಳು. ಕೂಡಲೇ ನಿಮಗೆ ಫೋನ್ ಮಾಡಿದಳು. ನೀವು ಬಂದಿರಿ, ಇನ್ಸಕ್ಷನ್ ಕೊಟ್ಟಿರಿ ; ಸುತ್ತಲೂ ನಡೆಯುತ್ತಿದ್ದುದೆಲ್ಲಾ ಚೆನ್ನಾಗಿ ಗೊತ್ತಾಗುತ್ತಿತ್ತು. ಆದರೆ ಬಾಯಿ ಬಿಟ್ಟು ಸರಿಯಾಗಿ ಮಾತನಾಡಲಾಗಲಿಲ್ಲ. ಬೆಳಿಗ್ಗೆ ಎದ್ದ ಮೇಲೆ ಯಾವ ತಾಪತ್ರಯವೂ ಇಲ್ಲ,' ಎಂದು ಹಿಂದಿನ ರಾತ್ರಿಯ ರಹಸ್ಯವನ್ನು ಬಯಲು ಮಾಡಿದ, ಗುಟ್ಟಾಗಿ.......

ಅವರಿವರ ಮಾತು ಕೇಳಿ, ಗೂಳಿಯ ತರಹ ಆಗ್ತಿನಿ ಎಂದು ಎಂತೆಂತದೊ ಮಾತ್ರೆಗಳನ್ನು ಜಗಿದರೆ ಪರಿಣಾಮವು ತೀವ್ರ ಆತಂಕದಲ್ಲಿ ಮುಕ್ತಾಯವಾಗಬಹುದು.

ಉಬ್ಬಸದ ಕಾಯಿಲೆ ಇರುವವರು ಈಫಡಿನ್ ಇರುವ ಔಷಧದ ಮಾತ್ರೆಗಳನ್ನು ಕೈಗಾವಲಾಗಿ ಇಟ್ಟುಕೊಂಡಿರುತ್ತಾರೆ. ನಿಶಿರಾತ್ರಿಯಲ್ಲಿ ಉಬ್ಬಸ ಉಲ್ಬಣವಾದರೆ ಆಗ ಬಳಸಬಹುದು ಎಂದು. ಹೀಗೆ ಬಳಸಿ ಸಾಕಷ್ಟು ಸೌಖ್ಯವನ್ನು ಪಡೆಯುತ್ತಾರೆ. ಆದರೆ ಒಮ್ಮೊಮ್ಮೆ ಒಂದೆರಡು ಗುಳಿಗೆಗಳನ್ನು ಸೇವಿಸಿದ ಮೇಲೆ ಕೂಡ ಉಬ್ಬಸವು ಇಳಿಯಲಿಲ್ಲ. ಉಬ್ಬಸದ ಕಾಟವನ್ನು ತಡೆಯಲಾರದೆ, ರಾತ್ರಿಯ ವೇಳೆ ವೈದ್ಯರ ಬಳಿಗೆ ಹೋಗಲಾರದೆ, ಮೇಲಿಂದ ಮೇಲೆ ಮಾತ್ರೆಗಳನ್ನು, ಲೆಕ್ಕವಿಲ್ಲದೆ ಸೇವಿಸಿ ಬಿಡುತ್ತರೆ. ಆಗ ಉಬ್ಬಸವು ತುಸು ಕಡಿಮೆಯಾದರೂ, ಅದಕ್ಕಿಂತಲೂ ಹೆಚ್ಚಾಗಿ ತೀವ್ರ ಆತಂಕವು ಕಾಡುತ್ತದೆ. ಎದೆ ಹೊಡೆದುಕೊಳ್ಳುತ್ತದೆ. ನಿದ್ರೆ ಬರುವುದಿಲ್ಲ. ಏನಾಗಿಬಿಡುತ್ತೋ? ಏನೇನೋ ಆಗುತ್ತಿದೆಯಲ್ಲ ಎಂಬ ಭಯವಾಗುತ್ತದೆ.

ಸ್ವಲ್ಪ ಕಾಲಾನಂತರ ಆತಂಕವು ಶಮನವಾಗುತ್ತದೆ. ಔಷಧಿಗಳ ಪ್ರಭಾವವು ಕಡಿಮೆಯಾದಾಗ.

ಪರೀಕ್ಷೆಗೆ ಓದಬೇಕು ; ಹಾಗೂ ನಿದ್ರೆ ಝಕಾಯಿಸಿಕೊಂಡು ಬರುತ್ತದೆ. ಇದನ್ನ ತಪ್ಪಿಸಬೇಕು ಎಂದು ವಿದ್ಯಾರ್ಥಿಗಳು, ಕೊಳಗ ಕೊಳಗ ಕಾಫಿಯನ್ನು ಕುಡಿಯುತ್ತಾರೆ. ನಿದ್ರಾನಿವಾರಕ ಔಷಧಿಗಳನ್ನು ಪೆಪ್‌ಪಿಲ್ಸ್-ಸೇವಿಸುವುದೂ ಉಂಟು. ಸಣ್ಣ ಪ್ರಮಾಣದಲ್ಲಿ ಕಾಫಿಯಾಗಲೀ, ಆಸ್ಫೋಟಮೀನ್ ಪೆಪ್‌ಪಿಲ್ಸ್ ಆಗಲಿ, ಸ್ವಲ್ಪ ಸಹಾಯವನ್ನು ಮಾಡಬಹುದು. ಆದರೆ ನಿದ್ರೆಯು ಸಹಜ ಪ್ರವೃತ್ತಿ.