ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ
೯೩

ಬಲು ಗೌರವ ಮತ್ತು ಆದರ ಕೂಡ. ಕೆಲಸದಿಂದ ಒಂದು ದಿವಸ ನಿವೃತ್ತಿ ಆಯಿತು. ಇಪ್ಪತ್ತಾರಕ್ಕೆ ಕೆಲಸಕ್ಕೆ ಸೇರಿದಾಗ, ದ್ವಿಜ ಎನ್ನುವುದು ಸಾರ್ಥಕವಾಗಲಿ ಎಂದು ಇಪ್ಪತ್ತೊಂದು ನನ್ನ ವಯಸ್ಸು ಅಂತ ದಾಖಲೆ ಹಾಕಿಸಿದ್ದರು. ಆದರೂ ವಿಶ್ರಾಂತಿ ವೇತನವನ್ನು ಎಂದಾದರೂ ಪಡೆಯಲೇ ಬೇಕಲ್ಲ ! ನಿವೃತ್ತರಾಗುವ ವಯಸ್ಸಿನಲ್ಲಿ ದೇಹಶಕ್ತಿಯು ಇಳಿಮುಖವಾಗಿದ್ದರೂ ಆಳಿದಿರಲಿಲ್ಲ. ದೀರ್ಘ ಕಾಲದ ಅನುಭವದಿಂದಾಗಿ ನ್ಯಾಯಶಾಸ್ತ್ರದ ತಿರುಳು ಕರಗತವಾಗಿತ್ತು. ಸಮಾಜದಲ್ಲಿ ಪ್ರಸಿದ್ಧಿಯೂ ಇತ್ತು. ಚಿಕ್ಕ ಪುಟ್ಟ ಲಾಯರುಗಳು ನನ್ನನ್ನು ಬಳಸಿಕೊಳ್ಳಲೇಬೇಕು, ಜಟಿಲ ಮೊಕದ್ದಮೆಗಳು ದೊರೆತಾಗ ; ಎಂದವರು ನಂಬಿದ್ದರು. ಆದಕಾರಣ ನಿವೃತ್ತರಾದಮೇಲೆ ಖಾಸಗಿ ಪ್ರಾಕ್ಟಿಸಿಗೆಂದು ಲಕ್ಷಣವಾದ ಸುಸಜ್ಜಿತವಾದ 'ಚೇಂಬರ್' ಅನ್ನು ಗೊತ್ತು ಮಾಡಿಕೊಂಡರು. ಬಾರ್ ಅಸೋಸಿಯೇಷನ್ನಿಗೆ ತಪ್ಪದೆ ಹೋಗಿ ಇತರ ಲಾಯರುಗಳ ಪರಿಚಯವನ್ನು ಮಾಡಿಕೊಳ್ಳಲಾರಂಭಿಸಿದರು.

'ಪ್ರಾಕ್ಟಿಸ್ ಶುರು ಮಾಡಿದರೆ ಸಾಕು, ಕಕ್ಷಿಗಾರರು ಬೊಂತೆ ಬೊಂತೆಯಾಗಿ ಬಂದುಬಿಡುತ್ತಾರೆ; ಎಂದು ನಿರೀಕ್ಷಿಸಿದ್ದ ಭಟ್ಟರಿಗೆ ಕೆಲವು ತಿಂಗಳುಗಳಲ್ಲಿಯೇ ಭ್ರಮನಿರಸನವಾಯಿತು. ಮೊದಲ ಎರಡು ಮೂರು ತಿಂಗಳು ಚೆಂಬರ್ಸಿನ ತುಂಬಾ ಜನರಿರುತ್ತಿದ್ದರು. ಆದರೆ ಅವರಲ್ಲಿ ಸ್ನೇಹಿತರೇ ಹೆಚ್ಚು, ಕಕ್ಷಿಗಾರರು ಕಡಿಮೆ. ಒಂದು ವರ್ಷ ಮುಗಿಯುವುದರೊಳಗೆ ಪುಟ್ಟ ಎರಡು ಮೊಕದ್ದಮೆಗಳು ಮಾತ್ರ ಇದ್ದುವು. ಅವುಗಳ ಸಲುವಾಗಿ ಕೋರ್ಟಿಗೆ ಹೋಗಿ, ಒಮ್ಮೆ ತನಗೆ ಕಿರಿಯರಾಗಿದ್ದವರೆದುರು ನಿಂತು ವಕಾಲತ್ತು ನಡೆಸುವುದು ಭಟ್ಟರಿಗೆ ಪ್ರಿಯವೇನೂ ಆಗಿರಲಿಲ್ಲ. ದೊಡ್ಡ ದೊಡ್ಡ ಮೊಕದ್ದಮೆಯವರು ಇವರ ಬಳಿಗೆ ಬರಲೇ ಇಲ್ಲ. ಕೈತೋರಿಸಿ ಅವಲಕ್ಷಣ ಎನಿಸಿಕೊಂಡೆನಲ್ಲಾ ! ತೆಪ್ಪಗೆ ಮನೆಯಲ್ಲೇ ಕೂತಿದ್ದಿದ್ದರೆ ಮರ್ಯಾದೆಯಾದರೂ ಉಳಿಯುತ್ತಿತ್ತು ಎಂದವರಿಗೆ ಅನಿಸತೊಡಗಿತ್ತು. ಬೇಸರ ಮೂಡಿತ್ತು. ಪ್ರಾಕ್ಟಿಸ್ ನಿಲ್ಲಿಸಿಬಿಡೋಣ, ಎಂದೊಮ್ಮೆ ಅಂದುಕೊಳ್ಳುವರು. ಇನ್ನೆರಡು ವರ್ಷ ಹೀಗೆಯೇ ಮುಂದುವರಿದರೆ ಭವಿಷ್ಯವು ಉಜ್ವಲವಾಗಬಹುದು ಎಂದು ಇನ್ನೊಮ್ಮೆ ಅಂದುಕೊಳ್ಳುವರು. ಈಗಾಗಲೇ ಮರವು ಜಾಸ್ತಿಯಾಗುತ್ತಾ ಇದೆ. ಕಕ್ಷಿಗಾರರಿಗೂ ಇದರ ಸುಳಿವು ತಿಳಿದಿದೆಯೇನೋ ಎಂದು ಒಮ್ಮೆ ಬೆದರುವರು. ಇದ್ದಕ್ಕಿದ್ದ ಹಾಗೆ ಚೇಂಬರ್ಸ್ ಮುಚ್ಚಿಬಿಟ್ಟರೆ, ಸರಿಸಾಟಿಯವರೆದುರಿಗೆ ಜಾರಿ ಮಂಡಿ ತರಚಿ ಕೊಂಡಂತೆ ಆಗುವುದಿಲ್ಲವೇ ಎಂದು ಒಮ್ಮೆ ಜುಗುಪ್ಸೆಗೊಳ್ಳುವರು. ಸರಿಯಾಗಿ ಯೋಚಿಸಿ ದೃಢ ತೀರ್ಮಾನವನ್ನು ನಿರ್ಧರಿಸಲು, ಮುಪ್ಪಿನ ದೆಸೆಯಿಂದಲೇ ಸಾಧ್ಯವಿರಲಿಲ್ಲ. ಇದೇ ದೊಡ್ಡ ಆತಂಕವಾಗಿತ್ತು.