ಇಂತಹ ಮನಃಸ್ಥಿತಿ ಇದ್ದಾಗ ಮನೆಯಲ್ಲೂ ಒಂದು ಆಘಾತವು ಕಾದಿತ್ತು. ಮನೆಯಾಕೆಯು ಎಂದಿನಿಂದಲೂ ಹಟವಾಣಿ ಮತ್ತು ಕಟುವಾಣಿ. ಆದರೆ ದೊಡ್ಡ ಅಧಿಕಾರದಲ್ಲಿ ಗಂಡ ಇದ್ದಾಗ ತಾನು ಮೆರೆಯಲು ಹಿತವಾಗಿತ್ತು ; ಅನುಕೂಲವೂ ಆಗಿತ್ತು. ಮನೆಯ ಮೂಲೆಯಲ್ಲಿ ಗಂಡ ಕುಳಿತಾಗ, ಆಳುಕಾಳುಗಳ ಸಂಖ್ಯೆ ಕಡಿಮೆಯಾಯಿತು. ಆಕೆಗೂ ಋಷಿಪಂಚಮಿಯ ವಯಸ್ಸು, ಮನಸ್ಸು ಎರ್ರಂಬಿರ್ರಿ ಆಗತೊಡಗಿತ್ತು. ಸಂಸ್ಕೃತಿಯ ಯಾವ ಸೋಂಕೂ ಇಲ್ಲದ, ಕೆಟ್ಟು ಬದುಕಿದವರ ಮನೆಯ ಹೆಣ್ಣು ಹುಟ್ಟಿದಂದಿನಿಂದಲೂ ಬುದ್ಧಿಯು ಅಸಾಧ್ಯ ಮಂದ, ಮೆರೆಯಲು ಗಂಡನ ಮನೆಯಲ್ಲಿ ಅವಕಾಶವು ದೊರೆತಾಗ, ಅರ್ಧರಾತ್ರಿಯಲ್ಲಿ ಅಂಗಳದಲ್ಲಿ ಕೊಡೆ ಹಿಡಿಸಲು ತೊಡಗಿದಳು. ಮನೆಗೆ ಬಂದ ಗಂಡನ ಸ್ನೇಹಿತರು, ಈಕೆಯ ನಡೆ ನುಡಿಗಳನ್ನು ಕಂಡು ತಡೆಯಲಾರದೆ ನಕ್ಕರೆ, ನಾನು ಆಡಿದ್ದನ್ನು ಕೇಳಿ, ಮಾಡಿದ್ದನ್ನು ನೋಡಿ, ಮೆಹನತ್ತಿನ ಮೆಚ್ಚಿಗೆಯನ್ನು ನಗೆಯ ಮೂಲಕ ಸೂಚಿಸುತ್ತಿದ್ದಾರೆ ಎಂದಂದುಕೊಳ್ಳುವ, ಮಂಕುಬುಡ್ಡಿ ಆಕೆ. ಆದರೂ ಗಂಡನ ಅಧಿಕಾರದ ದೆಸೆಯಿಂದ ಇದೆಲ್ಲವೂ ಮರೆಮಾಚಿತ್ತು.
ಗಂಡನು ರಿಟೈರ್ ಆಗುವ ವೇಳೆಗೆ ಹಿರಿಯ ಮಗನಿಗೆ ಮದುವೆಯಾಗಿತ್ತು. ಓದಿದ ಸೊಸೆ ಮನೆಗೆ ಬಂದಳು. ಮನೆಯಾಕೆಯ ಮೊಂಡುತನದ ಮದವೆಲ್ಲಾ ಸೊಸೆಯ ಮೇಲೆ ಎರಗಿತು. ಮುಖವನ್ನು ಸಿಂಡರಿಸಿಕೊಳ್ಳದೆ ಸೊಸೆಯೊಡನೆ ಮಾತಾಡುತ್ತಿರಲಿಲ್ಲ. ಪಾತ್ರೆ ತೊಳೆಯುವ ಕೂಲಿ ಹೆಣ್ಣಿಗೆ ಕೂಡ ಹೆಚ್ಚು ಮರ್ಯಾದೆ ಸಿಗುತ್ತಿತ್ತು ; ಆದರೆ ಸೊಸೆಗೆ ಸಿಗುತ್ತಿರಲಿಲ್ಲ. ಕೆಲಕಾಲ ಸೊಸೆಯು ಈ ಗೋಳನ್ನು ಅನುಭವಿಸಿದಳು. ನಂತರ 'ನನಗ್ಯಾಕೆ ಈ ಪೀಡೆ?” ಎಂದನಿಸಿತು. ಇದ್ದ ಸಂಗತಿಯನ್ನು ಗಂಡನಿಗೆ ಹೇಳಿದಳು. ಅಮ್ಮನಿಗೆ ಅವನು ಹಲವಾರು ತೆರನ ಜಾಣತನದ ಸಲಹೆಗಳನ್ನಿತ್ತ. ಮೊಂಡುತನದ ಹೆಣ್ಣಿಗೆ ಇದನ್ನು ತಿಳಿಯಲು ಸಾಧ್ಯವೇ ? ತಿಳಿದುಕೊಂಡಮೇಲಲ್ಲವೇ ನಡತೆಯನ್ನು ಮುಂದೆ ತಿದ್ದಿಕೊಳ್ಳಲು ಸಾಧ್ಯ. ಎರಡೂ ಇಲ್ಲ, ಮಗನಿಗೂ ಬೇಸರ ಬಂತು. ಬೇರೆ ಸಂಸಾರವನ್ನು ಹೂಡುವುದು ಲೇಸು ಎಂದು ಮಗ ಸೊಸೆ ನಿರ್ಧರಿಸಿದರು. ಭಟ್ಟರ ಬಳಿಗೆ ಮಗ ಒಂದು ಸಂಜೆ ಬಂದ. 'ಅಪ್ಪಾ ! ಅಮ್ಮನೊಂದಿಗೆ ಒಗ್ಗಿಕೊಂಡುಹೋಗಲು ನಾನೂ ಮತ್ತು ನನ್ನ ಹೆಂಡತಿಯೂ ಶತಪ್ರಯತ್ನ ಮಾಡಿದೆವು, ಸಾರ್ಥಕವಾಗಲಿಲ್ಲ. ಈಚೀಚೆಗನಕ ಅಮ್ಮನ ಹಲ್ಕ ನಡವಳಿಕೆಯು ಮಿತಿಮೀರುತ್ತಿದೆ, ಹಿರಿಯರೆದುರಿಗೆ ದನಿ ಎತ್ತಬಾರದು ಎಂದು ನಾವಿಬ್ಬರೂ ಈ ತನಕ ಎಲ್ಲವನ್ನೂ ಸಹಿಸಿಕೊಂಡೆವು. ಈ ಜನ್ಮದಲ್ಲಿ ಅಮ್ಮನಿಗೆ ಬುದ್ಧಿ ಬರುವುದಿಲ್ಲ ಎಂಬುದು ನಿಮಗೂ ತಿಳಿದಿದೆ.