ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೬
ಮನಮಂಥನ

ಬಾಗಿಲು ಜಡಿದು ಕುಳಿತರು. ಸಂಸಾರದ ಅನುಭವವು ಸಾಕಷ್ಟು ಇತ್ತು. ವಯಸ್ಸೂ ಆಗಿ ಬುದ್ಧಿಯೂ ಅಲ್ಪಸ್ವಲ್ಪ ಬಂದಿತ್ತು. ಇವೆಲ್ಲವೂ ಸಾಮಾನ್ಯ ಘಟನೆಗಳು. ಎಷ್ಟೋ ಮನೆಗಳಲ್ಲಿ ಪರಿಸ್ಥಿತಿಯು ಇನ್ನೂ ಕುಲಗೆಟ್ಟು ಹೋಗಿರುತ್ತದೆ. ಅದಕ್ಕಿಂತ ಇದೇ ಮೇಲು ಎನ್ನುವುದೂ ತಿಳಿದಿತ್ತು. ಆದರೂ ಏಕೋ ಏನೋ ಯಾವುದೋ ಒಂದು ಗಂಟಲಿನಲ್ಲಿ ಸಿಕ್ಕಿಕೊಂಡು ಒತ್ತತೊಡಗಿತು. ಕಣ್ಣುಗಳು ಮಂಜಾದುವು. ಇದ್ದೊಬ್ಬ ಮಗನಿಗೆ ಆಸರೆ ಕೊಡಲು ಮನೆಯಿಲ್ಲವಾಯಿತೇ ಎಂದು ಕೊರಗಿದರು ಮುದುಕ ಭಟ್ಟರು.

ಕೆಲಸದ ಸಲುವಾದ ಆತಂಕವು ಭಟ್ಟರನ್ನು ಮೊದಲೇ ಮುತ್ತಿತ್ತು. ಆಸೆ, ಅವಮಾನದ ಭಯ, ಸ್ವಾಭಿಮಾನಕ್ಕೆ ಧಕ್ಕೆ, ಇವೆಲ್ಲವೂ ಅವರ ಮನಸ್ಸನ್ನು ಜಗ್ಗಾಡುತ್ತಿದ್ದುವು. ಸಂಸಾರದಲ್ಲಿ ಈ ತೆರನ ಆಘಾತವಾದಾಗ ಆತಂಕವು ತಳಮಳದ ಹಂತಕ್ಕೇರಿತು. ಮುಪ್ಪಿನ ವಯಸ್ಸಾದುದರಿಂದ ಮೆದುಳಿನ ಚಟುವಟಿಕೆಗಳೂ ಮಂದವಾಗಹತ್ತಿದ್ದುವು. ಅಂದರೆ ವಿವೇಚನಾ ಶಕ್ತಿಯೂ ದುರ್ಬಲಗೊಂಡಿತ್ತು. ಆದುದರಿಂದ ಯೋಚಿಸಿ ತಳಮಳವನ್ನು ತಡೆಗಟ್ಟಲು ಸಾಧ್ಯವಿರಲಿಲ್ಲ. ಹೀಗಾಗಿ ಆಡಲೂ ಆರ, ಅನುಭವಿಸಲೂ ಆರ, ಸರಿಪಡಿಸಲು ವಿಚಾರಶಕ್ತಿಯೂ ಕ್ಷಯಿಸುತ್ತಿತ್ತು. ಆ ವಯಸ್ಸಿಗೆ ಸ್ವಲ್ಪಹೆಚ್ಚಾದ ಬ್ಲಡ್‌ಪ್ರೆಷರ್ ಇತ್ತು. ಮನಸ್ಸಿನ ತಳಮಳದಿಂದ ಅದೂ ಹೆಚ್ಚಿತು. ಮೆಲ್ಲ ಮೆಲ್ಲಗೆ Senile cerebral degeneration ಪ್ರಾರಂಭವಾಯಿತು. ಫಲಿತಾಂಶ : ಕೆಲವು ತಿಂಗಳುಗಳಲ್ಲಿ ಅವರ ವರ್ತನೆಯು ವಿಚಿತ್ರವಾಗತೊಡಗಿತು.

ಅಸಂಬದ್ಧವಾಗಿ ಮಾತನಾಡುವುದು, ವಿನಾಕಾರಣ ರೇಗುವುದು, ಸುಮ್ಮಸುಮ್ಮನೆ ನಗುವುದು, ಇತ್ಯಾದಿಗಳಿಗೆ ಶುರುವಾಯಿತು. ಕಡೆಗೊಮ್ಮೆ ಕಾಫಿ ತಂದು ಕೊಟ್ಟ ಹೆಂಡತಿಯನ್ನು ಹೊಡೆಯಹೋದರು. ದೂರದ ನೆಂಟನು ಬಂದಾಗ ಅವನನ್ನು ಬಡಿಯ ಹೋದರು. ಕಡೆಗೆ ಮಾನಸಿಕ ಆಸ್ಪತ್ರೆಗೆ ಸೇರಿಸದೆ ಗತ್ಯಂತರವಿಲ್ಲದ ಹಾಗಾಯಿತು. ಅಲ್ಲಿ ಕೆಲವು ವಾರಗಳಿದ್ದರು. ದಯಾಮಯ ದೇವರು ಆಮೇಲೆ ಅವರ ಕಣ್ಣು ಮುಚ್ಚಿಸಿದ.

ಅರವತ್ತರ ಸುಮಾರಿನ ಮುಪ್ಪ ಅಡರಿದಾಗ, ಬಾಳಿನಿಂದ ಪಡೆದ ಅನುಭವವು ಸಾಕಷ್ಟು ಇರುತ್ತದೆ. ಇದರ ಫಲವಾಗಿ ಯುವಕರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಗಳನ್ನು ಮಾಡಬಲ್ಲ, ಯುವಕರ ದೇಹದಾರ್ಡ್ಯವಿರದಿದ್ದರೂನೂ, ಈ ಕಾರಣದಿಂದ ಅವ ಕಾರ್ಯಕ್ಷೇತ್ರದಿಂದ ನಿಷ್ಕಮಿಸಲು ಬಡ ಪೆಟ್ಟಗೆ ಒಪ್ಪುವುದಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳುವ ಪ್ರವೃತ್ತಿಯು