ಮನಮಂಥನ ಹಾಕಿದರೆ ದೇವರು ಆತಂಕವನ್ನು ಪಡಬೇಕು; ವ್ಯಕ್ತಿಯ ಹೊಣೆಯೇನೂ ಉಳಿದಿರುವುದಿಲ್ಲ. ಆಗ, ಆತಂಕದ ಸೋಂಕೂ ಇರಲು ಸಾಧ್ಯವಿಲ್ಲ, ಅಂತಹವರಲ್ಲಿ. ಅಥವಾ, ಇತರ ವಿಚಾರಪರರು ಮೌಡ್ಯವೆಂದು ಹೀಯಾಳಿಸುವ, ಮೂಢನಂಬಿಕೆ ಎಂದು ಅವಹೇಳನ ಮಾಡುವ, ವ್ರತ, ಪೂಜೆ, ಇತ್ಯಾದಿ ಕರ್ಮಗಳಲ್ಲಿ ಮಗ್ನರಾದರೂ, ಆತಂಕವು ಕಡಿಮೆಯಾಗುತ್ತದೆ. ಮುಪ್ಪಿನಲ್ಲಿ ಭ್ರಮನಿರಸನವು ಆಗುತ್ತದೆ. ಒಬ್ಬಂಟಿಯಾದೆವು ಎನ್ನುವ ಗಂಭೀರ ಭಾವನೆಯು ಉಂಟಾಗುತ್ತದೆ. ಶಿಥಿಲವಾಗುತ್ತಿರುವ ದೇಹವು ಕಾಡಲಾರಂಭಿಸುತ್ತದೆ, ಹಲವಾರು ವಿಧಾನಗಳಲ್ಲಿ; ನಾನಾ ರೋಗದ ರೂಪದಲ್ಲಿ. ಆಗ ಆಧ್ಯಾತ್ಮಿಕ ಅಭ್ಯಾಸವು, ಸಂಭವಿಸಿದುದನ್ನೆಲ್ಲ ಸಮಾಧಾನದಿಂದ ಅನುಭವಿಸುವಂತೆ ಭದ್ರವಾದ ಊರೆಗೋಲಾಗುತ್ತದೆ. ಆತಂಕಕ್ಕಾಗಲೀ, ಭವಿಷ್ಯ ಭಯಕ್ಕಾಗಲೀ ಅಂತಹವರು ಬಲಿಯಾಗುವುದಿಲ್ಲ.
ಹೀಗಾದರೆ ಮತ್ತೊಂದು ಅನಿರೀಕ್ಷಿತ ಫಲವೂ ದೊರಕುತ್ತದೆ. ಬಾಳಿಗೊಂದು ಅರ್ಥವನ್ನೂ ನೀಡುತ್ತದೆ. ಸ್ಪರ್ಧಾ ಜೀವನದಿಂದ ದೂರವಾದಾಗ, ಆ ಕಾರಣದಿಂದಲೇ ಎಂದರೂ ತಪ್ಪಲ್ಲ, ಸಮಾಜದ ಬಹುಮಂದಿಯಿಂದ ವಿಶ್ವಾಸವೂ ಗೌರವವೂ ದೊರಕುತ್ತದೆ. ಸಂಪಾದನೆ ಇರದಿದ್ದರೂ ಮನೆಯ ಕಿರಿಯರಿಂದ ಆದರವೂ ಮರ್ಯಾದೆಯೂ ಲಭಿಸುತ್ತದೆ. ಎಲ್ಲರಿಗೂ ಆಪ್ಯಾಯಮಾನವಾದ ಮನ್ನಣೆಯೂ ಸುತ್ತಮುತ್ತಲಿನ ಜನರಿಂದ ಸಿಗುತ್ತದೆ. ಬಾಳು ನಿರರ್ಥಕವಾಯಿತು ಎನ್ನುವ ಮುಪ್ಪಿಗರ ಮನಸ್ಸಿನ ಬೇಸರವು ಮಾಯವಾಗಿ, ಬಾಳು ಸಾರ್ಥಕವಾಯಿತು; ಬಂದು ಕೇಳಿದವರಿಗೆ ಅನುಭವದಿಂದ ಕಲಿತುದುದನ್ನು ಸರಳವಾಗಿ ಕಲಿಸುವುದು; ಆ ಮೂಲಕ ಕಿರಿಯರ ಬಾಳನ್ನು ಹಸನಾಗಿಸುವುದು ಬಾಳಿಗೆ ಅರ್ಥ ಮೂಡಿಸುವ ಹಿರಿಯ ಕೆಲಸ ಎನಿಸುತ್ತದೆ.
ಮುಪ್ಪು ಎಂದಾಗ ಜಾತಕದ ರೀತಿಯಾಗಿ ಲೆಕ್ಕಮಾಡಿದ ಅರವತ್ತು ವರ್ಷ ವಯಸ್ಸು ಎಂದೇನೂ ಅಲ್ಲ, ಉಷ್ಣವಲಯದಲ್ಲಿ ಸರಾಸರಿ ಅರವತ್ತಕ್ಕೆ ಹಾಗಾಗುತ್ತದೆ. ಆದರೆ ಎಷ್ಟೋ ಜನರು ಪಂಚಾಂಗದ ಪ್ರಕಾರ ನಲವತ್ತೇ ವಯಸ್ಸಾಗಿದ್ದರೂ ಮುಪ್ಪಿಗರಂತೆ ಅರುಳು ಮರುಳು ಆಗಿರುತ್ತಾರೆ. ತದ್ವಿರುದ್ಧ ಕೆಲವು ಜನ ಎಪ್ಪತ್ತು, ಎಂಭತ್ತು ವಯಸ್ಸಾಗಿದ್ದರೂ, ನಲವತ್ತರ ಮಾನಸಿಕ ಚಾಕಚಕ್ಯತೆಯನ್ನು ಉಳಿಸಿಕೊಂಡಿರುತ್ತಾರೆ. ದೇಹವು ಅನುಸರಿಸುವ ಕಾಲಮಾನಕ್ಕೂ, ಮನಸ್ಸು ನಡೆದುಕೊಳ್ಳುವ ಕಾಲಗತಿಗೂ, ಯಾವ ನೇರ ಸಂಬಂಧವೂ ಇರುವುದಿಲ್ಲ. ಇರಬೇಕಾಗಿಯೂ ಇಲ್ಲ. ಮೂವತ್ತರ ಯುವಕ ಶೃಂಗಾರ ಶತಕವನ್ನು ದೂರ ಎಸೆದು, ವೈರಾಗ್ಯ ಶತಕವನ್ನು ಜಪಿಸತೊಡಗಬಹುದು. ಎಪ್ಪತ್ತರ ಮುದುಕ ಬಿಳಿ