ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೦

ಮನಮಂಥನ


ಹೆಗ್ಗತ್ತನ್ನು ಡಾಕ್ಟರು ನೋಡಲೇ ಇಲ್ಲ. ಗಲ್ಲ ಹಿಡಿದು ಸೊಸೆಯ ತಲೆಯನ್ನೆತ್ತಿ, 'ತಾಯಿ! ನಿಮ್ಮತ್ತೆ ಹೀಗೆ ಲೊಟಕುತ್ತಾರೆ ಎಂದು ಕೊರಗಬೇಡ. ಕಳೆದ ಹದಿನೈದು ಹದಿನಾರು ವರ್ಷಗಳಿಂದ ಆಕೆಯು ಬ್ಲಡ್‌ ಪ್ರೆಷರಿನ ಒತ್ತಡದಿಂದ ನರಳುತ್ತಿದ್ದಾರೆ. ಉಪ್ಪು ಇರದೆ ಇರುವ ಕಠಿಣ ಪಥ್ಯವನ್ನು ವರ್ಷಾನುಗಟ್ಟಲೆಯಿಂದ ನಡೆಸುತ್ತಿದ್ದಾರೆ. ಮೊದಲಿನಿಂದಲೂ ಚಟ್ಟಣಿಪುಡಿ ಮತ್ತು ಉಪ್ಪಿನಕಾಯಿ ಎಂದರೆ ಆಕೆಗೆ ಪಂಚಪ್ರಾಣ. ಅಂತಹವರು ಇಂತಹ ಪಥ್ಯವಿರಬೇಕಾದರೆ ಎಷ್ಟು ಬೇಜಾರಾಗುತ್ತೆ. ನೀನೇ ಊಹಿಸಮ್ಮ. ವಯಸ್ಸೂ ಐವತ್ತೈದಾಯಿತು. ಹೆಂಗಸರ ದೇಹದಲ್ಲಿ ಆಗ ಬದಲಾವಣೆಗಳಾಗುವ ಹಾಗೆಯೇ ಮನಸೂ ಸ್ತಿಮಿತದಲ್ಲಿರುವುದಿಲ್ಲ. ಇವೆಲ್ಲ ಕಾರಣಗಳಿಂದ ಮನಸ್ಸಿನಲ್ಲಿ ಒಂದಲ್ಲ ಒಂದು ಭ್ರಮೆ ಮೂಡುತ್ತದೆ. ನಿಮ್ಮತ್ತೆಗೆ ಈ ಭ್ರಮೆ ಈಗ ಹಿಡಿದಿದೆ. ಕೆಲವು ದಿನಗಳಲ್ಲಿ ಇದು ಮಾಯವಾಗುತ್ತೆ. ಇದನ್ನು ಓದಿದ ಹುಡುಗಿ ನೀನು, ತಿಳಿದುಕೊಂಡರೆ ನಂತರ ಅತ್ತೆಯು ಮಾತಾಡಿದರೆ ಜುಗುಪ್ಸೆಯಾಗುವುದಿಲ್ಲ. ಬದಲು ಕನಿಕರ ಉಂಟಾಗುತ್ತದೆ' ಎಂದು ಕೇಳಿದರು.

ನಂತರ ಅತ್ತೆಯ ಕಡೆಗೆ ತಿರುಗಿ 'ಲಕ್ಕವ್ವಾ ! ಹೆಗ್ಗತ್ತಿನ ಮೇಲೆ ಸೊಸೆಗೆ ಬಿಳಿ ಮಚ್ಚೆ ಇದ್ದರೆ ಮಗನಿಗೆ ಕೊಳ್ಳೆ ಹಣ ದೊರಕುತ್ತೆ ಅಂತ ಶಾಸ್ತ್ರಾ ಕೇಳಿಲ್ಲವಾ? ಇಂತಹ ಹಣ ತರುವ ಹೆಣ್ಣನ್ನ ಹೆಂಗಾರ ನೀ ಹುಡುಕಿ ತಂದೆ ? ನಮ್ಮ ಯೆಂಟನ ಪುಣ್ಯ ಅಂತೀನಿ. ಅಷ್ಟು ವರ್ಷ ಮದುವೆಗೆ ಅವ ಕಾದಿದ್ದೂ, ಸಾರ್ಥಕವಾಯಿತು. ಇಂತ ಪುಣ್ಯವಂತ ಹೆಣ್ಣು ಸಿಕ್ತು' ಎಂದರು.

ಲಕ್ಕವ್ವನ ಆರನೆಯ ಬಸಿರಿನಲ್ಲಿ ಬ್ಲಡ್‌ಪ್ರೆಷರ್ ಹೆಚ್ಚಾಗಿತ್ತು. ಏಳನೇ ತಿಂಗಳ ವೇಳೆಗೆ ಇನ್ನೂರು ಮೂವತ್ತಕ್ಕೆ ಏರಿತ್ತು. ಹೆರಿಗೆಯ ಆಸ್ಪತ್ರೆಯ ಡಾಕ್ಟರು 'ಗರ್ಭ ಮುಂದುವರೆಯುವುದಕ್ಕೆ ಬಿಡಬಾರದು. ಪ್ರಾಣಕ್ಕೆ ಸಂಚು ತರುವ ಇತರ ಯಾವುದಾದರೂ ರೋಗವು ತೊಡರಿಕೊಳ್ಳಬಹುದು-ಆದ್ದರಿಂದ ಗರ್ಭಪಾತವನ್ನು ಅತ್ಯಗತ್ಯವಾಗಿ ತತ್‌ಕ್ಷಣ ಮಾಡಬೇಕು' ಎಂದು ಹೇಳಿದ್ದರು. ಲಕ್ಕವ್ವನ ಗಂಡ ಒಪ್ಪಿದ್ದ. ಚಿಕಿತ್ಸೆ ಅದರಂತೆಯೇ ನಡೆಯಿತು. ದೊಡ್ಡಜೀವ ಉಳಿದುಕೊಂಡಿತು. ಆದರೆ ಆಗ ಏರಿದ್ದ ರಕ್ತದ ಒತ್ತಡವು, ಗರ್ಭವು ಇಳಿದ ಮೇಲೂ, ಮೊದಲಿದ್ದಂತೆಯೇ ಉಳಿದುಕೊಂಡಿತು. ಇಳಿಯಲೇ ಇಲ್ಲ. ಅಂದಿನಿಂದಲೂ ಪಥ್ಯ ಔಷಧಿಗಳ ಬಾಳು.

ಇದ್ದ ಒಬ್ಬನೇ ಮಗನಿಗೆ ಬೇಗ ಮದುವೆಯನ್ನು ಮಾಡಬೇಕು. ಅವನ ಮಗುವನ್ನು ಎತ್ತಿ ಮುದ್ದಾಡಿ ನಂತರ ಕಣ್ಣು ಮುಚ್ಚಬೇಕು ಎಂಬ ಹಿರಿಯಾಸೆ ಲಕ್ಕವ್ವನಿಗೆ. ಆದರೆ ವೆಂಕಟರಮಣನಿಗೆ ಕಂಕಣ ಕೂಡಿಬರಲಿಲ್ಲ. ನಾಲೈದುನೂರು