ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೨

ಮನಮಂಥನ

ಹೆಗ್ಗತ್ತಿನ ಮೇಲಿರುವ ಬಿಳಿಯ ಮಚ್ಚೆಯನ್ನು ಪತ್ತೆ ಹಚ್ಚುವುದಕ್ಕೆ ಯಾವ ಗಂಡೂ ಯತ್ನಿಸುವುದಿಲ್ಲ. ಹುಡುಗಿಯನ್ನು ನೋಡಿ ಹಸಿದ ಯುವಕರು ಮದುವೆಯಾಗುವುದು. ಕೈತುಂಬಾ ತೂಕ, ಕಣ್ತುಂಬ ಬಣ್ಣ, ಬಾಯ್ತುಂಬ ಒಲವಿನ ಮಾತು, ಇವು ವಿಫುಲವಾಗಿ ದೊರಕಿತು. ಯೆಂಟ ಆನಂತರ ಕಂಡ ಬಿಳಿಯ ಮಚ್ಚೆಯನ್ನು ಸೌಂದರ್ಯದ ಕೇಂದ್ರ ಎಂದು ಆರಾಧಿಸುತ್ತಿದ್ದ. ಅಮ್ಮ ಹೂಡಿದ ಭ್ರಮಾಜನಿತ ಅಸ್ತ್ರ ನಿಶ್ಯಸ್ತವಾಯಿತು.

ಯೆಂಟನ ಹೆಂಡತಿ ಜಾಣೆ, ಡಾಕ್ಟರು ಹೇಳಿದುದನ್ನು ಸರಿಯಾಗಿ ಅರ್ಥಮಾಡಿ ಕೊಂಡಳು. ಗಂಡನ ಕಿವಿ ಕಚ್ಚಿ ಅವನಿಗೂ ತಿಳಿಸಿದಳು. ಅತ್ತೆಮ್ಮನಿಗೆ ಅರುಳು ಮರುಳು, ಜತೆಗೆ ಬ್ಲಡ್‌ ಪ್ರೆಷರಿನ ಕೆಟ್ಟ ಬೇನೆ. ಅವರ ಹತ್ತಿರ ನೀವು ಬಾಯಿ ತುಂಬಾ ಮಾತನಾಡಿ; ಸಣ್ಣ ಪುಟ್ಟ ಸೇವೆಯನ್ನು ಮಾಡಿದರೆ ಅವರಿಗೆ ಎಷ್ಟೋ ನೆಮ್ಮದಿಯಾಗುತ್ತದೆ. ನಾನು ಎಷ್ಟು ಮಾಡಿದರೂ ಹೇಗೆ ಮಾಡಿದರೂ ಆಕೆಗೆ ಹಿತವಾಗುವುದಿಲ್ಲ. ನನ್ನ ಮೇಲಿನ ಆಕ್ಷೇಪಣೆಗಳನ್ನು ಅತ್ತೆಮ್ಮನ ಎದುರಿಗೆ ಬೇಕಾದಷ್ಟು ಹೇಳಿ-ಆಗ ಆಕೆಗೆ ಹಾಯ್ ಎನಿಸುತ್ತೆ. ನನ್ನ ಮಟ್ಟಿಗೆ ಹೇಳುವುದಾದರೆ, ಅವರೇನೇ ಇನ್ನು ಮುಂದೆ ಅನ್ನಲಿ, ಕೋಲೆ ಬಸವನ ತರಹಾ ತಲೆಯಾಡಿಸುತ್ತ, ತೆಪ್ಪಿಗಿದ್ದುಬಿಡುತ್ತೇನೆ. ಮಾತಿಗೆ ಮಾತು ಬೆಳಸುವುದಕ್ಕೆ ಹೋಗುವುದಿಲ್ಲ' ಎಂದು.

ಅಮ್ಮನ ಹತ್ತಿರ ಮುದ್ದುಗರೆಯುವುದಕ್ಕೆ ಬೆಳೆದ ಮಗ ಶುರುಮಾಡಿದ. ಒಂದು ಸಂಜೆ ಮನೆಗೆ ಬಂದಾಗ, ದೇವರ ಪ್ರಸಾದವನ್ನು ತಂದಿದ್ದ. “ಅಮ್ಮಾ, ಇವತ್ತು ಲಾಟರಿಯಲ್ಲಿ ಸಾವಿರ ರೂಪಾಯಿ ಬಂತು. ದೇವರ ಸೇವೆ ಮಾಡಿಸಿಕೊಂಡು ಬಂದೆ, ಪ್ರಸಾದಾನ ತಂದಿದ್ದೀನಿ, ನಿನಗೆ ಹೇಗೆ ಬೇಕೋ ಹಾಗೆ ಈ ಹಣವನ್ನು ಖರ್ಚು ಮಾಡಿಕೊ' ಎಂದು ಹೇಳಿ ಅಷ್ಟೂ ನೋಟುಗಳ ಕಂತೆಯನ್ನು ಅಮ್ಮನ ಕೈಲಿಟ್ಟ, 'ನನಗ್ಯಾಕೋ ಮರಿ, ಇಷ್ಟು ದುಡ್ಡನ್ನು ನಾನೇನು ಮಾಡಲಿ' ಎಂದಳು ಅಮ್ಮ.

ಆ ಮಾತು ಈ ಮಾತು ಆಡುತ್ತಾ ; 'ಅಂದ ಹಾಗೆ ಅಮ್ಮಾ ! ನಿನ್ನ ಸೊಸೆಯ ಹೆಗ್ಗತ್ತಿನ ಮೇಲಿರುವ ಬಿಳಿ ಮಚ್ಚೆಯ ಪ್ರಭಾವದಿಂದ ಲಕ್ಷ್ಮಿ ಒಲಿಯುತ್ತಾಳೆ ಅಂತ ಜನ ಅಂತಾರಲ್ಲಮ್ಮ ನನಗನಕ ಇಂತಹ ಮೂಢ ಹೇಳಿಕೆಗಳಲ್ಲಿ ಸುತರಾಂ ನಂಬಿಕೆ ಇಲ್ಲ. ಆದರೂ ಲಾಟರಿಯಲ್ಲಿ ದುಡ್ಡು ಬಂತು ಅಂದರೆ ಯಾಕೋ ಅನುಮಾನ ಬರುತ್ತೆ. ಇದೂ ದಿಟವಿರಬಹುದೇನಮ್ಮ' ಎಂದು ಮಗ ಕೇಳಿದ.

ಆ ತನಕ ಅದರ ಸುದ್ದಿಯನ್ನು ಮಗನೆದುರಿಗೆ ನೇರವಾಗಿ ಆಕೆ ಎತ್ತಿದ್ದಿಲ್ಲ.