ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೬

ಮನಮಂಥನ

ಕಾರಣ, ಮಾತಿಗೆ ಆರಂಭಿಸಿದ್ದ. ಆಗಲೇ ಅವನ ಇತರ ನರಳುವಿಕೆಯು ನನಗೆ ತಿಳಿದಿದ್ದು, ನನ್ನ ಕುತೂಹಲವೂ ಕೆರಳಿತು. ಕಾರಣ ಒಳಕ್ಕೆ ಕರೆದುಕೊಂಡು ಹೋಗಿ ವಿವರವಾಗಿ ವಿಚಾರಿಸಿದೆ.

ಹೆಣ್ಣು ಕೊಡಲು ಬಂದ ಮೂರು ನಾಲ್ಕು ಮಂದಿ, ಇವನನ್ನು ನೋಡಿದ ಮೇಲೆ, ಸದಾಕಾಲವೂ ಉಬ್ಬಸದಿಂದ ನರಳುವವ ಎಂದು ತಿಳಿದ ಮೇಲೆ ಮಾತನ್ನು ಮುಂದುವರಿಸದೆ, ಹಿಂತಿರುಗಿದ್ದರು. ಅಲ್ಲದೆ ಇವನ ತಮ್ಮ ೨೮ರ ಪ್ರಾಯದವ ಸೈಂಧವನಂತೆ ಬೆಳೆದು ರಾಕ್ಷಸನಂತೆ ಊಟ ಮಾಡುತ್ತಿದ್ದ. ಆದರೆ ಹದಿನೈದು ಹದಿನಾರು ವರ್ಷಗಳಿಂದ ಅವನಿಗೆ ಬುದ್ಧಿ ವಿಕಲ್ಪವಾಗಿ, ಬೆಪ್ಪ ಬಡಿದವನಂತೆ ಕೂತಲ್ಲೇ ಕುಳಿತಿರುತ್ತಿದ್ದ. ಮಸಲಾ ಎದ್ದರೆ ಮನೆಯಲ್ಲೇ ಅಡ್ಡಾಡುವುದು. ಮಾನಮರ್ಯಾದೆಯ ಮೇಲೆ ಗಮನವೇ ಇರಲಿಲ್ಲ. ಈ ಕಾರಣದಿಂದಾಗಿ ಮನೆಗೆ ಹೋಗಿಬರುವವರು ಇರಲಿಲ್ಲ. ನೆಂಟರೊಂದಿಗೆ ಸಂಪರ್ಕವೂ ಕಡಿಮೆಯಾಗಿತ್ತು. ಇಂತಹ ಮನೆಯ ಮಗನಿಗೆ ಹೆಣ್ಣು ಕೊಡಲು ಯಾರೂ, ಕಡು ಬಡವರೂ ಕೂಡ, ಒಪ್ಪದೆ ಇದ್ದುದು ನ್ಯಾಯವೇ !

ಕಲ್ಲಪ್ಪನಿಗೆ ೩೬ರ ಪ್ರಾಯ. ಸಂಪಾದಿಸುತ್ತಲೂ ಇದ್ದ. ಉಬ್ಬಸದ ಅನಾರೋಗ್ಯವಿತ್ತಾದರೂ ದೇಹದ ಅಗತ್ಯಗಳ ಒತ್ತಡವು ಮಿಡಿಯುತ್ತಿದ್ದಿರಲೇ ಬೇಕು. ಅವುಗಳನ್ನು ಸಂತೃಪ್ತಿಪಡಿಸಲಾಗದುದರಿಂದ ಅವನ ಮನಸ್ಸು ಕಾಲಾ ನಂತರ, " ಪ್ಯಾರನಾಯ್ಡ್' ಅವಸ್ಥೆಯನ್ನು ಹೊಂದಿರಬೇಕು. ಯಾವುದೋ ಕರ್ಣ ಪಿಶಾಚಿಗಳು “ನೀನು ಷಂಡ, ನೀನು ಷಂಡ' ಎಂದು ನಿರಂತರವಾಗಿ ನುಡಿಯಲಾರಂಭಿಸಿದ್ದುವು.

ಪ್ಯಾರನಾಯ್ಡ್ ಅವಸ್ಥೆಗೆ ಒಳಗಾದವರು ತಮ್ಮ ಮನಸ್ಸಿನ ಒಂದು ಭಾಗವು ಈ ರೀತಿ ಹತೋಟಿ ತಪ್ಪಿ ಕಾಡುವುದನ್ನು ಅನುಭವಿಸುತ್ತಾರೆ. ಮನಸ್ಸಿನ ಇಂತಹ ಭಾಗವನ್ನು 'ಪಿಶಾಚಿ' ಎಂದು ಕಲ್ಲಪ್ಪ ಕರೆದುದು ಸಮಂಜಸವಾಗಿತ್ತು.

ಕಲ್ಲಪ್ಪನ ಕಿವಿಯಲ್ಲಿದ್ದ ಪಿಶಾಚಿಗಳು ಅವನನ್ನು Persecute ಮಾಡುತ್ತಿದ್ದುವು. ಪ್ಯಾರನಾಯ್ಡ್ ಅವಸ್ಥೆಯನ್ನು ಮನಸ್ಸು ಹೂಡಿದಾಗ, ಕಿವಿಯಲ್ಲಿ ಎಂತದೋ ಮಾತುಗಳು ಸ್ಪಷ್ಟವಾಗಿ ಕೇಳಿಸಬಹುದು. ಅಂತಹ ಮಾತುಗಳನ್ನು ಯಾರೂ ಆಡುತ್ತಿಲ್ಲ ಎನ್ನುವುದು ನಮಗೆ ತಿಳಿದಂತೆ ಕಲ್ಲಪ್ಪನಿಗೂ ಗೊತ್ತು. ಆದುದರಿಂದಲೇ ಅವನದನ್ನು 'ಪಿಶಾಚಿ'-ಯಾರಿಗೂ ಕಾಣಿಸದೆ ಇರುವ ಪಿಶಾಚಿ, ಎಂದು ಹೇಳಿದ್ದು. ಅದನ್ನು 'ಭ್ರಮೆ'-Delusion-ಎಂದು ನಾವು ಹೆಸರಿಸಬಹುದು. ಆದರೆ ಕಲ್ಲಪ್ಪನಿಗೆ ಆ ಭ್ರಮೆಯು 'ಸತ್ಯ'ವಾಗಿಯೇ ಇರುತ್ತದೆ. ಅವನ ಕಿವಿಯಲ್ಲಿ ಆ ಮಾತುಗಳು