೧೦೯
ಸಮಯ. ಇಬ್ಬರೂ ಬ್ರಹ್ಮಯ್ಯನ ಕೊಠಡಿಗೆ ಹೋದೆವು. ಗೆಳೆಯ ಬಾಗಿಲನ್ನು ತಟ್ಟಿದಾಗ ಬ್ರಹ್ಮಯ್ಯ ಬಾಗಿಲು ತೆಗೆದ. ಗೆಳೆಯನನ್ನು ಕಂಡು ಒಳಕ್ಕೆ ಬನ್ನಿ ಎಂದು ಆದರದಿಂದ ಕರೆದ, ಕೊಠಡಿಯೊಳಕ್ಕೆ ಹೋದ ಕೂಡಲೇ, ಹಾಸಿದ್ದ ಮಂದಲಿಗೆಯ ಮೇಲೆ ನಮ್ಮಿಬ್ಬರನ್ನೂ ಕೂರಿಸಿ, ಬಾಗಿಲನ್ನು ಭದ್ರವಾಗಿ ಮುಚ್ಚಿ ಅಗಳಿ ಹಾಕಿದ. ನಂತರ ಎದುರಿನಲ್ಲಿ ಸುತ್ತಿಟ್ಟಿದ್ದ ಹಾಸಿಗೆಯನ್ನು ಒರಗಿಕೊಂಡು ತಾನೂ ಕುಳಿತ. “ಏನು ಬಂದಿದ್ದು ಎಂದೂ ಇಲ್ಲದೆ ಇವತ್ತು' ಎಂದು ಗೆಳೆಯನನ್ನು ಕೇಳಿದ. 'ಇವತ್ತು ಸ್ವಲ್ಪ ವಿರಾಮವಿತ್ತು, ನಿನ್ನ ನೋಡಿ ತುಂಬಾ ದಿನಗಳಾಗಿತ್ತು ನೋಡಿಕೊಂಡು ಹೋಗೋಣ ಅಂತ ಬಂದೆ. ನಿನಗೇನಯ್ಯಾ ಯಾವಾಗಲೂ ಆರಾಮವಾಗಿ ವಿರಾಮವಾಗಿ ರಾಜನಂತೆ ಇರುತ್ತಿ. ನಮ್ಮ ಹಾಗೆ ಹೆಂಡತಿ, ಮಕ್ಕಳು, ಮನೆಮಠ ಎಂದು ತಾಪತ್ರಯಗಳೇನಾದರು ನಿನಗಿವೆಯೇ ?' ಎಂದು ನನ್ನ ಗೆಳೆಯ, ನಂತರ ನನ್ನ ಪರಿಚಯವನ್ನು ಬ್ರಹ್ಮಯ್ಯನಿಗೆ ಮಾಡಿಕೊಟ್ಟ ಮೊದಲೇ ಮಾಡಿಕೊಡಬೇಕಾಗಿತ್ತು, ಬ್ರಹ್ಮಯ್ಯ, ಮನ್ನಿಸು ಎಂದು ಕ್ಷಮಾಪಣೆಯನ್ನು ಕೇಳಿಕೊಂಡ. 'ತುಂಬಾ ಸಂತೋಷವಾಯಿತು. ನಿಮ್ಮ ಪರಿಚಯವಾದದ್ದು' ಎನ್ನುತ್ತಾ ನನ್ನ ಕಡೆಗೆ ತಿರುಗಿದ. 'ನಿಮ್ಮಂತಹ ವಿದ್ವಾಂಸರ ಪರಿಚಯವಾದುದು ನನ್ನ ಪುಣ್ಯ' ಎಂದು ಹೇಳಿದೆ.
'ಈಗ ಯಾವುದನ್ನು ಬರೆಯುತ್ತಿದ್ದಿ ? ಏನನ್ನು ಓದುತ್ತಿದ್ದಿ ?' ಎಂದು ಗೆಳೆಯ ಕೇಳಿದ.
'ಯದುಕುಲದರಸರ ನಾಟಕವೊಂದನ್ನು ಗುರ್ತು ಹಾಕುತ್ತಿದ್ದೀನಿ. ರಾಜವೈಭವ ಅಂದರೆ ಆ ಅರಸನದಯ್ಯ ! ಎಂದು ಹೇಳುತ್ತಾ ಅರಮನೆಯ ಅಂದಿನ ವೈಭವವನ್ನು ಬಣ್ಣಿಸತೊಡಗಿದ. ಹಾಗೆ ಮಾಡುವಾಗ ಮಾನವಸಹಜವಾದ ಸುಗುಣ ಮತ್ತು ದುರ್ಗುಣಗಳನ್ನು ವರ್ಣಿಸಬೇಕು. ಸುಗುಣಗಳನ್ನು ಕೇಳಿದವರ ಎದೆ ಮುಟ್ಟುವಂತೆ ವರ್ಣಿಸಿದ. ಆದರೆ ದುರ್ಗುಣಗಳನ್ನು ಬಣ್ಣಿಸುವಾಗ ಮೂದಲಿಕೆಯ ಧ್ವನಿಯಾಗಲೀ, ಅವಹೇಳನದ ಸೋಂಕಾಗಲಿ ಸ್ವಲ್ಪವೂ ಇರಲಿಲ್ಲ. ಎಂತಹ ಭಾಷೆ ! ಕಡಲೆ ಹುರಿದ ಹಾಗೆ ಚಟಪಟ ಅಂತ ಅಚ್ಚ ಕನ್ನಡದಲ್ಲಿ ಮಾತನಾಡಿದ. ಕನ್ನಡ ಭಾಷೆಯಲ್ಲಿ ಇಷ್ಟು ಸೊಬಗಿರುತ್ತದೆ ಎಂದು ಆಗ ತಾನೇ ನನಗೆ ಹೊಳೆಯಿತು. ಒಂದೆರಡು ದಶಕಗಳು ನಿರಂತರವಾಗಿ ಅಭ್ಯಾಸವನ್ನು ಮಾಡಿದ ಫಲ. ಅಥವಾ ಪೂರ್ವಜನ್ಮದ ಸ್ಮರಣೆಯೋ? ಯಾವುದೋ ಜನ್ಮದಲ್ಲಿ ಆ ಕಾಲದರಸದೊಡನೆ ಇವನೂ ಆಪ್ತಸಂಗಡಿಗನಾಗಿದ್ದನೋ ? ಎಂಬ ಅನುಮಾನವೂ ನನಗೆ ಬಂತು.