ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೨

ಮನಮಂಥನ

ಪಂಡಿತರು ಮಾಡಲು ಅಸಾಧ್ಯ. ಅಷ್ಟು ಮಾತ್ರ ನನಗೆ ಚೆನ್ನಾಗಿ ಗೊತ್ತು' ಎಂದೆ. ಹಾಗಂದು ಜಾರಿಕೊಂಡೆ.

ಎರಡು ಮೂರು ವರ್ಷಗಳಾಗಿರಬೇಕು ! ಪತ್ರಿಕೆಗಳಲ್ಲಿ ಕೆಟ್ಟ ಸುದ್ದಿಯೊಂದು ಪ್ರಕಟವಾಗಿತ್ತು. ಬೆಳಗಾಗುತ್ತಲೇ ಅದನ್ನು ಓದಿದೆ. 'ಬಾಡಿಗೆಗೆ ಕೊಟ್ಟಿದ್ದ ಕೊಠಡಿಯೊಂದರಿಂದ ದುರ್ನಾತ ಬರುತ್ತಿದ್ದ ಕಾರಣ ಪೋಲೀಸಿನವರ ಸಹಾಯದಿಂದ, ಮನೆಯ ಮಾಲೀಕರು, ಬಾಗಿಲನ್ನು ಒಡೆಸಿದರು. ಆಗ ನೋಡಿದರೆ, ಬಾಡಿಗೆಗೆ ಪಡೆದಿದ್ದ ವ್ಯಕ್ತಿ ಅಲ್ಲಿ ಸತ್ತು ಬಿದ್ದಿರುವುದನ್ನು ಕಂಡರು. ಶವದ ಸ್ಥಿತಿಯನ್ನು ನೋಡಿದಾಗ ಸತ್ತು ಎರಡು ಮೂರು ದಿನಗಳಾದರೂ ಆಗಿರಬೇಕು ಎಂದು ವೈದ್ಯರಂದರು,' ಎನ್ನುವ ಸುದ್ದಿ.

ಓದಿದ ಕೂಡಲೇ ಬ್ರಹ್ಮಯ್ಯನವರ ನೆನಪಾಯಿತು. ಇದು ಅವರೇ ಏನೋ ಎಂದನ್ನಿಸಿತು. ಅಲ್ಲಿಗೆ ಧಾವಿಸಿದೆ. ಅವರಿದ್ದ ಕೊಠಡಿಯ ಬಳಿಯಲ್ಲೇ ಜನಸಂದಣಿಯು ಸೇರಿತ್ತು. ನನ್ನ ಸಂಶಯವು ದಿಟವಾಗಿತ್ತು. ಅಂತಹ ಉದ್ದಾಮ ಪಂಡಿತನಿಗೆ ಇಂತಹ ದುರ್ಮರಣ! ಹೀಗೇಕೆ? ಎಂದು ಯೋಚಿಸುತ್ತಾ ಖಿನ್ನನಾಗಿ ಮನೆಗೆ ಹಿಂತಿರುಗಿದೆ.

ಬ್ರಹ್ಮಯ್ಯನಿಗೆ ಪ್ಯಾರನಾಯ್ಡ್ ಪ್ರತಿಕ್ರಿಯೆಯ ಕಾಟವಿತ್ತು. ಆಳರಸರ ಪೋಲೀಸಿನವರು ಹಿಡಿದು ಕಾಡುತ್ತಾರೆ ಎಂಬ ಬೇರೂರಿದ ಭ್ರಮೆಯು ಅವನ ಪಾಲಿಗೆ ಸತ್ಯವೇ ಆಗಿತ್ತು, ಕಾಡುತ್ತಿತ್ತು. ನನ್ನ ವಿದ್ಯಾ ಪ್ರೌಢಿಮೆಗೆ ತಕ್ಕ ಸನ್ಮಾನವು ದೊರೆಯಲಿಲ್ಲ, ಸಮಾಜದಿಂದ, ಎಂಬ ಕ್ರೋಧವು ಉಕ್ಕುತ್ತಲಿತ್ತು.

ನನಗೆ ಅನ್ಯಾಯವಾಯಿತು ಎನ್ನುವ ಕ್ರೋಧವು, ಇನ್ನು ಯಾವ ರೀತಿಯಿಂದಲೂ ಶಮನವನ್ನು ಪಡೆಯಲಾರದೆ, ಮನಸ್ಸನ್ನು ಹರಿದು ಛಿದ್ರಿಸಿತ್ತು. ಅಂದರೆ ಸ್ಕಿಜೋಫೊನಿಯಾ ಆಗುವ ಪರಿಸ್ಥಿತಿಯು ಇತ್ತು. ಯಾರಿಗೂ ನಾನು ಬೇಡ, ಆದುದರಿಂದ ಯಾರೂ ನನಗೆ ಬೇಡ ಎನ್ನುವ ಅಹಂಕಾರವು ಉಲ್ಬಣಿಸುತ್ತಿತ್ತು. ಲೋಕವು ನನ್ನನ್ನು ಮರೆತಿದೆ. ನಾನೂ ಲೋಕವನ್ನು ಮರೆಯುತ್ತೇನೆ, ಎನ್ನುವ ಮಮಕಾರದ ಸೇಡು ಹೆಚ್ಚಿತ್ತು.

ಸೊಗಸು ಕಾವ್ಯಗಳನ್ನು ಬರೆಯುವಾಗ, ಊಹಾಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸುವಾಗ Persecution ಭ್ರಮೆಯು, ನಕ್ಷತ್ರಿಕನಂತೆ ಕಾಡುತ್ತಿರಲಿಲ್ಲ. ಮಿಕ್ಕಂತೆ ಆ ಭ್ರಮೆಯು ಘೋರವಾಗಿ, ನಿರಂತರವಾಗಿ ಕಾಡುತ್ತಿತ್ತು. ಬ್ರಹ್ಮಯ್ಯನ ಮನಸ್ಸಿನಲ್ಲಿ ಉದ್ಭವಿಸಿದ ಭ್ರಮಾ ನಕ್ಷತ್ರಿಕನು ಹಗಲಿರುಳೂ ಕುಕ್ಕುತ್ತಲೇ ಇದ್ದ, ಬೆದರಿಸುತ್ತಲೇ ಇದ್ದ. ಮೊದಲೇ ಮನಃದದ ಸ್ವಭಾವವಿತ್ತು ಅದರ ಮೇಲೆ ಈ ನಕ್ಷತ್ರಿಕನ