೧೧೭
ಎಂದು ಅವನನ್ನೇ ಕೇಳತೊಡಗುತ್ತಿದ್ದ. ಪುಟ್ಟಣ್ಣಜ್ಜನಿಗೆ ಅರಳು-ಮರಳು ಎಂದು ಮೊಮ್ಮಕ್ಕಳು ಅಂದುಕೊಂಡರೂ, ಹೊರಗೆ ತೋರ್ಪಡಿಸುತ್ತಿರಲಿಲ್ಲ. ಹಿರಿಯರಲ್ಲಿ ಗೌರವವನ್ನು ತೋರಿಸುವುದು ಮನೆಮಂದಿ ಮಕ್ಕಳಲ್ಲೆಲ್ಲಾ ರೂಢಿಯಾಗಿತ್ತು.
ಮರೆವು ಅಧಿಕವಾಗತೊಡಗಿತು. ೬೮-೬೯ರ ವಯಸ್ಸಿನ ಹೊತ್ತಿಗೆ, ಪುಟ್ಟಣ್ಣನಲ್ಲಿ ಗಮನೀಯವಾದ ವ್ಯತ್ಯಾಸಗಳು ಕಂಡುಬಂದುವು. ಜಮೀನಿನತ್ತ ಹೋಗಿ ಬರುವುದು ಕಡಿಮೆಯಾಯಿತು. ಮನೆಯ ಅಂಗಳದಲ್ಲಿ ಕಂಬಕ್ಕೆ ಒರಗಿಕೊಂಡು ಕಾಲ ಕಳೆಯುವುದು ಹೆಚ್ಚಾಯಿತು. ಬಾಯಿ ತುಂಬ ಮಾತನಾಡುತ್ತಿದ್ದವನು, ಈಗ ಮಿತಭಾಷಿಯಾಗತೊಡಗಿದ್ದ. ಧ್ವನಿಯೂ ಕಡಿಮೆಯಾಗಹತ್ತಿತ್ತು. ಹಳೆಯ ದೋಸ್ತಿಗಳು ಬಂದರೂ, ಮೊದಲಿನಂತೆ ಮಾತಾಡುತ್ತಿರಲಿಲ್ಲ.
ಬರಬರುತ್ತಾ ಕೊಠಡಿಯಿಂದ ಹೊರಬರುವುದನ್ನು ಪುಟ್ಟಣ್ಣ ಕಡಿಮೆ ಮಾಡಿದ. ಆ ಸುಮಾರಿಗೆ ಸಂಶಯದ ಈ ಪಿಶಾಚಿಯು ಕಾಡತೊಡಗಿತ್ತು. 'ಪೋಲೀಸಿನವರು ನನ್ನನ್ನು ಹಿಡಿದುಕೊಂಡು ಹೋಗಲು ಮಸಲತ್ತು ಮಾಡುತ್ತಿದ್ದಾರೆ. ಹಗಲೂ ರಾತ್ರಿ ಸಮಯ ಕಾಯುತ್ತಿದ್ದಾರೆ' ಎನ್ನುವ ಸಂಶಯ ! ಯಾವ ಮಾಯದಲ್ಲಿ ಅದು ಬಡಿಯಿತೋ ಯಾರಿಗೂ ತಿಳಿಯದು. ಆದರೆ ಈ ಸಂಶಯದ ಪಿಶಾಚಿಯ ಕಾಟವು ದಿನದಿನಕ್ಕೂ ಹೆಚ್ಚುತ್ತ ಹೋಯಿತು.
ಕೊಠಡಿಯಲ್ಲಿ ಕುಳಿತು, ಕಿಟಕಿಯ ಬಾಗಿಲುಗಳನ್ನು ಭದ್ರವಾಗಿ ಹಾಕಿ, ಕಿಟಕಿಯ ಕಂಡಿಯಿಂದ ಎದುರು ಕಾಣುತ್ತಿದ್ದ ರಸ್ತೆಯನ್ನು ದುರುಗುಟ್ಟಿಕೊಂಡು ತಾಸು ತಾಸು ಕೂರುತ್ತಿದ್ದ. ದೂರದಲ್ಲಿ ಎಲ್ಲಿಂದಲಾದರೂ ಬರುತ್ತಿದ್ದಾರೆಯೇ ಎಂದು ತಿಳಿದುಕೊಳ್ಳಲು.
'ನಿನ್ನ ಹಿಡಿದುಕೊಳ್ಳೋಕ್ಕೆ ಪೋಲೀಸಿನವರು ಯಾಕೆ ಬಾರೆ, ಅಪ್ಪಯ್ಯ ! ಅಂತಹುದೇನನ್ನು ಮಾಡಿದ್ದಿ. ಸುಮ್ಮಸುಮ್ಮನೆ ಯಾಕೆ ಹೆದರಿಕೋತಿ' ಎಂದು ಹಿರಿಯ ಮಗ ಒಮ್ಮೆ ಕೇಳಿದಾಗ,
'ನಿನಗೊತ್ತಿಲ್ಲ. ಮಗಾ ! ಲಂಚದ ಆಸೆಗೋಸ್ಕರ ಅವರು ಬತ್ತಾರೆ. ಹೋದ ಸಲ ಅವರು ಬಂದಿದ್ದಾಗ, ನಮ್ಮ ಶಾನುಭೋಗರ ಕೈಲಿ ಗುಟ್ಟಾಗಿ ಅವರಿಗೆ ಐವತ್ತು ಸಾವಿರ ಕೊಡಿಸಿದೆ. ಆಗ ಅವರು ಹೊರಟುಹೊದರು. ತಿರುಗಿ ಬರುಕ್ಕೆ ಶುರುಮಾಡಿದ್ದಾರೆ. ಈಗ ಒಂದು ವಾರದಿಂದ ನಮ್ಮ ಮನೆ ಸುತ್ತಲೂ ಗಸ್ತು ಹೊಡೀತಿದ್ದಾರೆ. ನೀ ಹೋಗಿ ಶ್ಯಾನುಭೋಗರಿಗೆ ಹೇಳು-ನಾ ಹೇಳೀದೆ ಅಂತ ಹೇಳು. ಒಂದೋ ಎರಡೋ ಲಕ್ಷ ಕೊಟ್ಟು ಅವರನ್ನು ಸಾಗ