ಮನಮಂಥನ
ಹಾಕು ಅಂತ.' ಎಂದು ಗಂಭೀರವಾಗಿ ಹೇಳಿದ. ತಾನು ಹೇಳಿದ್ದು ದಿಟ, ಅದನ್ನು ಎಲ್ಲರೂ ನಂಬುತ್ತಾರೆ ಎಂದು ಆಗ ಪುಟ್ಟಣ್ಣನಿಗೆ ಖಂಡಿತವಾಗಿತ್ತು.
ಅಪ್ಪನ ಅರಳು-ಮರಳು ವಿಪರೀತಕ್ಕಿಟ್ಟುಕೊಂಡಿದೆ. ಇವರ ಹತ್ತಿರ ಚರ್ಚೆ ಮಾಡುವುದು ಪ್ರಯೋಜನವಲ್ಲ. ಇವರಿಗೆ ಬಡಿದಿರುವ ಭ್ರಮೆಗೆ ನಾವೂ ಹೂ ಗುಡುವುದು ಒಳ್ಳೆಯದು, ಎಂದು ಮಕ್ಕಳು ಮತ್ತು ಮನೆಯ ದೊಡ್ಡವರು ತೀರ್ಮಾನಿಸಿ, ಹಾಗೆಯೇ ನಡದುಕೊಳ್ಳಲಾರಂಭಿಸಿದರು.
ಅಪ್ಪಯ್ಯಾ ! ನೀ ಹೇಳಿದ್ದನ್ನು ಶಾನುಭೋಗರಿಗೆ ಹೇಳಿದೆ. ಅವರಾಗಲೇ ಎಂಟು ಲಕ್ಷ ಕೊಟ್ಟಾಯಿತಂತೆ. ಕಮೀಷನರಿಗೆ ನಿನ್ನೆ ಒಂದು ಲಕ್ಷ ಟೆಲಿಗ್ರಾಫ್ ಮೂಲಕ ಕಳಿಸಿದಂತೆ. ಇನ್ನು ಮೇಲೆ ಪೋಲೀಸಿನವರನ್ನು ಇಲ್ಲಿಗೆ ಕಳಿಸುವುದಿಲ್ಲ ಎಂದು ತಾರು ಮೂಲಕ ಉತ್ತರವೂ ಬಂದಿದೆಯಂತೆ' ಎಂದು ದೊಡ್ಡ ಮಗ, ನಿರ್ವಿಕಾರವಾಗಿ ಹೇಳಿದಾಗ, 'ನಂಗೊತ್ತಿತ್ತು ಮಗಾ ! ಲಂಚಕ್ಕೇ ಅವರು ಬರೋದು ಅಂತ' ಎಂದು ಪುಟ್ಟಣ್ಣನೂ ಹೇಳಿದ.
ಇದೇ ಅಭ್ಯಾಸವು ಮುಂದುವರೆಯಿತು. ಪೋಲೀಸರು ಹೊಂಚು ಹಾಕುತ್ತಿದ್ದಾರೆ ಎಂದು ಪುಟ್ಟಣ್ಣ ಹೇಳಿದರೆ, ಶಾನುಭೋಗರ ಕೈಲಿ ಈಗಲೇ ಲಂಚ ಕೊಡಿಸುತ್ತೇನೆ ಎಂದು ಮಗ ಸಮಾಧಾನ ಮಾಡುತಿದ್ದ. ಒಂದು ವಾರದಲ್ಲಿ ಶಾನುಭೋಗರು ಕೊಟ್ಟ ಲಂಚವು ಮೂವತ್ತು ಲಕ್ಷವನ್ನೂ ಮೀರಿತ್ತು.
ಇದೊಂದು ಸಂಶಯವನ್ನು ಬಿಟ್ಟರೆ, ಮಿಕ್ಕ ಎಲ್ಲಾ ಅರುಳು ಮರುಳಿನ ಮುದುಕರಂತೆಯೇ ಪುಟ್ಟಣ್ಣ ಇರುತ್ತಿದ್ದ. ಊಟ ಉಪಚಾರದಲ್ಲಿ ಮೋಸವನ್ನು ಮಾಡಿಕೊಳ್ಳುತ್ತಿರಲಿಲ್ಲ. ಮಾನ ಮರ್ಯಾದೆಯಿಂದ ನಡೆದುಕೊಳ್ಳುತ್ತಿದ್ದ. ಆದರೆ ಮರೆವು ಹೆಚ್ಚಾದುದರಿಂದ ಹೇಳಿದ್ದನ್ನೇ ಹೇಳುವುದು ; ಎಂದಿನ ಕಾಲದ ಮಾತುಗಳನ್ನೇ ಆಡುವುದು. ಇವೆಲ್ಲವೂ ಅತಿಯಾದುವು.
ಮುಪ್ಪು ಬಂದಾಗ, ಕೂದಲು ನರೆತು ಬಿದ್ದು ಹೋಗುವಂತೆ, ಚರ್ಮವು ಸುಕ್ಕುಗಟ್ಟಿ ಕಾಂತಿಹೀನವಾಗುವಂತೆ, ಕಿವಿಯು ಮಂದವಾಗುವಂತೆ, ದೃಷ್ಟಿಯು ಅಸ್ಪಷ್ಟವಾಗುವಂತೆ, ಮೆದುಳಿನ ಕೆಲವು ಭಾಗಗಳೂ ಶಿಥಿಲವಾಗತೊಡಗುತ್ತವೆ. ಆಗ ಹಿಂದಿನ ಚಾಕಚಕ್ಯತೆಯನ್ನು ಮನಸ್ಸು ಅನಿವಾರ್ಯವಾಗಿ ಕಳೆದುಕೊಳ್ಳುತ್ತದೆ. ಹಳೆಯ ಸ್ಮರಣೆಯು ಹಸಿರಾಗಿ ಉಳಿದರೂ, ಹೊಸಹೊಸದಾದ ನೆನಪುಗಳು ಮರೆಯಲ್ಪಡುತ್ತವೆ.
ಮುಪ್ಪು ಬಂದಾಗ ಎಂದರೆ, ಪಂಚಾಂಗದ ಪ್ರಕಾರ ಇಂತಿಷ್ಟು ವಯಸ್ಸು ಎಂದೇನಲ್ಲ. ಮುಪ್ಪಿಗೂ ವಯಸ್ಸಿಗೂ ನಿಕಟವಾದ ನೇರ ಸಂಬಂಧವು ಇಲ್ಲ.