ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ಯಾರನಾಯ್ಡ್ ಅವಸ್ಥೆಗಳು

೧೧೯

ಅರವತ್ತರ ಸುಮಾರಿಗೆ ಅರುಳು ಮರುಳು ಬಡಿಯಬಹುದು. ೮೦ ರ ಮುದುಕನಿಗೆ ಮನಸ್ಸು ಚುರುಕಾಗಿಯೇ ಇರಬಹುದು. ಅಲ್ಲದೆ ದೇಹದ ವಿವಿಧ ಭಾಗಗಳೂ ಬೇರೆ ಬೇರೆ ಪ್ರಮಾಣದಲ್ಲಿ ಮುಪ್ಪಾಗುತ್ತವೆ. ಮೆದುಳಿನ ವಿವಿಧ ಭಾಗಗಳು ಕೂಡ ಬೇರೆ ಬೇರೆ ಪ್ರಮಾಣದಲ್ಲಿ ಮುಪ್ಪಾಗುತ್ತವೆ.

ಯೋಚನೆಗೆ ಮೀಸಲಾದ, ಸ್ಮರಣೆಗೆ ಸಂಬಂಧಪಟ್ಟ, ಮೆದುಳಿನ ಭಾಗಗಳು ಪುಟ್ಟಣ್ಣನಲ್ಲಿ ಮುಪ್ಪಿನಿಂದ ತುಂಬಾ ಶಿಥಿಲವಾಗಿದ್ದುವು. ಹೀಗೆ ಶಿಥಿಲವಾಗಲು ರಕ್ತದ ಒತ್ತಡವು ಮೆದುಳಿನಲ್ಲಿ ಅತಿಯಾಗಿ, ರಕ್ತನಾಳಗಳು ಸೆಳೆದುಕೊಂಡು, ರಕ್ತ ಸಂಚಾರಕ್ಕೆ ಅಡಚಣೆಯಾಗುವುದು ಒಂದು ಕಾರಣ. ಮೆದುಳಿಗೆ ತಾಕುವ ಇತರ ಕಾಯಿಲೆಗಳೂ ಕಾರಣಗಳಾಗಬಹುದು. ಮೆದುಳಿನಲ್ಲಿ ಬೆಳೆಯುವ ಕೆಲವು ಗಡ್ಡೆಗಳೂ, ಮೊದಮೊದಲ ಹಂತದಲ್ಲಿ ಈ ತೆರನ ನಡವಳಿಕೆಗೆ ಕಾರಣವಾಗ ಬಹುದು.

ಪುಟ್ಟಣ್ಣನ ಮೆದುಳಿನಲ್ಲಿ ಸಾಮಾನ್ಯವಾದ ಮುಪ್ಪಿನಿಂದಾದ ಶಿಥಿಲತೆಯು ಉಂಟಾಗಿತ್ತು. ಆಗ ಮಹಾ ಭ್ರಮೆಯೊಂದು, ಸಂಶಯದ ಪಿಶಾಚಿಯಾಗಿ ಅವತರಿಸಿ ಕಾಡತೊಡಗಿತ್ತು. ಹೊಟ್ಟೆಗೆ ಸಾಕಷ್ಟು ಇರದ ಶ್ಯಾನುಭೋಗನು ಮೂವತ್ತು ಲಕ್ಷ ರೂಪಾಯಿಗಳನ್ನು ಲಂಚವಾಗಿ ಕೊಟ್ಟ ಎನ್ನುವುದನ್ನೂ ನಂಬುವಷ್ಟು ಮೆದುಳಿನ ಒಂದು ಭಾಗವು ಶಿಥಿಲವಾಗಿತ್ತು. ಆದುದರಿಂದ ವಿವೇಚನಾ ಶಕ್ತಿಯು ಸಾಕಷ್ಟು ನಾಶವಾಗಿತ್ತು.

ಪುಟ್ಟಣ್ಣನ ಸಂಶಯ ಪಿಶಾಚಿಯು ಒಂದು ಭ್ರಮೆಯೇ ! ಬ್ರಹ್ಮಯ್ಯನ ನಕ್ಷತ್ರಿಕನೂ, ಕಲ್ಲಪ್ಪನ ಕರ್ಣಪಿಶಾಚಿಗಳೂ, ಯಾವ ರೀತಿಯಲ್ಲಿ ನರಳಿಸಿದವೋ ಅದೇ ರೀತಿಯಲ್ಲಿ ಪುಟ್ಟಣ್ಣನ ಸಂಶಯ ಪಿಶಾಚಿಯೂ ಕಾಡುತ್ತಿತ್ತು. ಆದರೆ ಮೊದಲೆರಡರಲ್ಲಿ ಮಾನಸಿಕ ಅವ್ಯವಸ್ಥೆಯಿಂದ ಹಾಗಾಗಿತ್ತು. ಪುಟ್ಟಣ್ಣನಲ್ಲಿ ಮೆದುಳಿನ ಶಿಥಿಲತೆಯಿಂದ ಆಗಿತ್ತು. ಒಂದೇ ತೆರನ ಅಂತಿಮ ಪರಿಣಾಮವು ವಿಭಿನ್ನವಾದ, ವಿಧವಿಧವಾದ ಕಾರಣಗಳಿಂದ ಉಂಟಾಗುವುದು ಸಾಮಾನ್ಯ.

ಪ್ಯಾರನಾಯ್ಡ್ ಭ್ರಮೆಗಳು

ಪ್ಯಾರನಾಯ್ಡ್ ಅವಸ್ಥೆಯನ್ನು ಅನುಭವಿಸುತ್ತಿರುವವರಿಗೆ, 'ಇದು ಕೇವಲ ಭ್ರಮೆಯಯ್ಯಾ ! ವಾಸ್ತವಿಕವಾಗಿ ಸುಳ್ಳು' ಎಂದು ಹೇಳಿದ ಮಾತ್ರಕ್ಕೆ ಅವರ ನರಳುವಿಕೆಯು ತಪ್ಪುವುದಿಲ್ಲ. ಭ್ರಮೆಗಳು ಹೇಗೆ ಹುಟ್ಟಿದುವು, ಯಾಕೆ ಹುಟ್ಟಿದುವು, ಎಂಬುದನ್ನು ತಿಳಿದುಕೊಂಡರೆ ನಂತರ ಅವುಗಳ ಉಚ್ಚಾಟನೆಯನ್ನು ಮಾಡಲು