ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨೪

ಮನಮಂಥನ


ಪರೀಕ್ಷೆಯಾದನಂತರ, 'ಏನೂ ಗಾಬರಿಯಿಲ್ಲವೇ, ಡಾಕ್ಟರೇ ! ಪ್ರಾಣಕ್ಕೇನೂ ಅಪಾಯವಿಲ್ಲವೇ ?' ಎಂದು ಕೇಳಿದರು. 'ಅಂತಹುದೇನೂ ಇಲ್ಲಮ್ಮಾ ! ಜೀವಕ್ಕೆ ಏನೂ ಅಪಾಯವಿಲ್ಲ' ಎಂದು ಭರವಸೆಯನ್ನು ಇತ್ತಾಗ ಅವರಿಗೂ ಸಮಾಧಾನವಾದಂತೆ ಕಂಡಿತು. ಜೊತೆಯಲ್ಲಿ ಬಂದಿದ್ದ ಗಂಡಸು ಅಷ್ಟು ಕಾತರನಾಗಿರದಿದ್ದರೂ, ತುಸು ಬೇಸರಪಟ್ಟವನಂತೆ ಕಾಣುತ್ತಿದ್ದ. ಆದುದರಿಂದ ಅವನೇ ಈಕೆಯ ಗಂಡನಿರಬೇಕು ಎಂದುಕೊಂಡೆ. ಆಮೇಲೆ ಒಬ್ಬರೇ ಬನ್ನಿ ನಿಮ್ಮ ಹತ್ತಿರ ಮಾತನಾಡಬೇಕು ಎಂದು ಗುಟ್ಟಾಗಿ ಅವನಿಗೆ ಹೇಳಿದೆ.

'ಉಕ್ಕೂ, ಕ್ಯೂ, ಕ್ರೋ,' ಹೀಗೆ ಬಿಕ್ಕುತ್ತಿದ್ದಾಕೆಯು ಮೂರು ಮಕ್ಕಳ ತಾಯಿ. ಕನಕವಲ್ಲಿಯು ಇಂಟರ್‌ಮೀಡಿಯೇಟ್ ಪರೀಕ್ಷೆಯನ್ನು ಪಾಸು ಮಾಡಿದ್ದಳು. ಆದರೆ ಹೈಸ್ಕೂಲಿನಲ್ಲಿದ್ದಾಗಲೇ ತಂದೆ ತಾಯಿಯರು ಹೇಳಿದಂತೆ ಕೇಳಿ ಪುರೋಹಿತನ ಮಗನನ್ನು ಮದುವೆಯಾಗಿದ್ದಳು. ಓದುವುದಕ್ಕೆ ಇಷ್ಟವಿದ್ದರೆ ಓದಲಿ ಎಂದು ಪುರೋಹಿತ ಗಂಡ ಒಪ್ಪಿಗೆಯನ್ನಿತ್ತಿದ್ದ. ಆದರೆ ಇಂಟರ್ ಮೀಡಿಯಟ್ ಪರೀಕ್ಷೆಗೆ ಕೂರುವ ಹೊತ್ತಿಗೆ, ಕನಕವಲ್ಲಿಯ ಮಾವನವರು ತೀರಿಕೊಂಡಿದ್ದರು. ಅವರು ಬಿಟ್ಟು ಹೋದ ಆಸ್ತಿಯೆಲ್ಲಾ ದರ್ಭೆ ಸಮಿತ್ತು. ಬೇರೆ ಮಾರ್ಗವಿಲ್ಲದೆ ಮಗ ತಂದೆಯ ಕಸುಬನ್ನು ಮುಂದುವರೆಸತೊಡಗಿದ. ಸಣ್ಣದೊಂದು ಅಂಗಡಿಯನ್ನಿಟ್ಟುಕೊಂಡು ವ್ಯಾಪಾರವನ್ನು ಮಾಡಬೇಕು ಎಂದು ಮಗನ ಆಸೆ ಇತ್ತು. ತಂದೆಯ ಮನಸ್ಸನ್ನು ಈ ರೀತಿ ಒಲಿಸಲು ಅವ ಪ್ರಯತ್ನಪಡುತ್ತಿದ್ದ. ತಿಳಿದ ಸಾಹುಕಾರರಿಗೆ ಹೇಳಿ ಅಂಗಡಿಯನ್ನು ತೆರೆಯಲು ಸೌಕರ್ಯವನ್ನು ಮಾಡಿಸಿಕೊಡುವುದಾಗಿ ತಂದೆ ಹೇಳಿದ್ದರು. ಆದರೆ ಕಾರ್ಯಗತ ಮಾಡುವ ಮೊದಲೇ ಆತ ತೀರಿಕೊಂಡಿದ್ದರು. ಕನಕವಲ್ಲಿಯ ಗಂಡನಿಗೆ ದರ್ಭೆ ಸಮಿತ್ತುಗಳು ಭದ್ರವಾದುವು. ದೊಡ್ಡ ಪಟ್ಟಣದಲ್ಲಿ ಪೌರೋಹಿತ್ಯದಿಂದ ಬಾಳುವುದು ಸ್ವಲ್ಪ ಕಷ್ಟವೆ. ಹಾಗಾಗಿ ಮೂರು ಮಕ್ಕಳಾದ ಮೇಲೆ, ಕೆಲಸಕ್ಕೆ ಸೇರಿಕೊಂಡು ನಾನೂ ಸಂಪಾದಿಸುತ್ತೇನೆ ಎಂದು ಕನಕವಲ್ಲಿಯು ಹೇಳಿದಾಗ ಗಂಡನೂ ಒಪ್ಪಿದ್ದ.

ಸಂಪಾದಿಸಲು ಶುರು ಮಾಡಿದ ಮೇಲೆ, ಕನಕವಲ್ಲಿಯ ಸಂಸಾರವು ತುಸು ಹಗುರವಾಯಿತು. ಅದರ ಜೊತೆಗೆ ಸಮಾಜದಲ್ಲಿ ಇತರ ಹೆಣ್ಣುಗಳು ಮಜವಾಗಿ ಬಾಳುವುದನ್ನು ಕಣ್ಣಾರೆ ಹತ್ತಿರದಿಂದ ಕಾಣುವಂತೆಯೂ ಆಯಿತು. ಅವರಂತೆಯೇ ತಾನೂ ಸಂಪಾದಿಸುತ್ತಿದ್ದರೂ, ಲಕ್ಷಣವಾಗಿದ್ದರೂ, ಪೌರೋಹಿತ್ಯದ ಗಡ್ಡದ ಗಂಡನೊಡನೆ ಸಂಪ್ರದಾಯಸ್ಥ ಬಾಳನ್ನು ನಡೆಸಬೇಕಾಯಿತಲ್ಲ ಎನ್ನುವ ಕೊರಗೂ ಉಂಟಾಗಿತ್ತು. ಕೆಟ್ಟದೆನಿಸಿದರೂ ಕ್ರಾಂತಿಕಾರಿಯಾದ ತೀರ್ಮಾನವನ್ನು