ಮನಮಂಥನ
ಈಕೆಗೆ ಹಿಸ್ಟಿರಿಯಾ ಚಿಹ್ನೆಗಳಿವೆ ಎಂದು ತಿಳಿಯುವುದೇ ಇಲ್ಲ.
ಆದರೆ ತಿಳಿದವರಿಗೆ ಅವಳ ಮುಖದಲ್ಲಿರುವ ಕಾತರವು ಆಗಿಂದಾಗ್ಗೆ ಸ್ಪಷ್ಟವಾಗಿ ಕಾಣುತ್ತದೆ. ಹಿಸ್ಟಿರಿಯಾ ಪ್ರದರ್ಶನವು ಉಲ್ಬಣಗೊಳ್ಳದಂತೆ, ಆಗಿಂದಾಗ್ಗೆ, ಆಕೆಗೆ ವೈದ್ಯರು ಭರವಸೆಯನ್ನು ಕೊಡುತ್ತಲಿರಬೇಕು. ಉಪಶಮನಕ್ಕೆಂದು ಆಕೆಯು ವೈದ್ಯರ ಬಳಿಗೆ ಹೋದಾಗಲೆಲ್ಲ ಯಾವುದಾದರೂ ನಿರುಪದ್ರವಿಯಾದ ಔಷಧಿಯನ್ನು ಪಡೆದು, ಅದರಿಂದ ಗುಣವನ್ನೂ ಕಾಣುತ್ತಾಳೆ.
ಮಾತು ನಿಂತ ಮುದ್ದುಗುವರಿ
ತುಂಬಾ ಪ್ರಯಾಸಪಡುತ್ತಾ ಇದ್ದಳು. ಎರಡು ಮಾತುಗಳನ್ನಾಡುವುದಕ್ಕೆ ಆದರೂ ಆಕೆಯು ಆಡಿದ ಮಾತು ಇತರರಿಗೆ ಕೇಳಿಸುತ್ತಲೇ ಇರಲಿಲ್ಲ. ಪ್ರಯಾಸ ಪಡುವುದು ಎಂದರೆ ಅಂತಿಂತಹ ಪ್ರಯಾಸವಲ್ಲ ! ತಲೆಯನ್ನು ಹಿಂದಕ್ಕೆ ಬಾಗಿಸಿ, ಕತ್ತನ್ನು ಉದ್ದಮಾಡಿ, ಮುಖದ ಮಾಂಸಖಂಡಗಳನ್ನೆಲ್ಲ ಸೆಟೆಸುತ್ತಿದ್ದಳು ; ಧ್ವನಿಯನ್ನು ಮೂಡಿಸುವುದಕ್ಕೆ ಮಾತುಗಳನ್ನು ಬಿಡಿಸುವುದಕ್ಕೆ, ಬಾಯಿಯನ್ನು ನರಸಿಂಹ ದೇವರ ತರಹ ದೊಡ್ಡದಾಗಿ ಬಿರಿಸಿ, ಹಲ್ಲುಗಳೆಲ್ಲವೂ ಬಿರಿಬಿರಿ ಕಾಣುವಂತೆ ಮಾಡಿಕೊಂಡು, ನಾಲಿಗೆಯನ್ನು ಚಾಚಿ ಹೊರಳಿಸುತ್ತಿದ್ದಳು. ಆದರೂ ಮಾತು ಹೊರಡುತ್ತಲೇ ಇರಲಿಲ್ಲ. ನೋಡುವುದಕ್ಕೆ ಆಕೆಯ ಮುಖ ಭಯಂಕರವಾಗಿತ್ತು.
'ನಿನ್ನ ಹೆಸರೇನಮ್ಮಾ ? ನೀನೇ ಹೇಳು ; ನಿಮ್ಮಮ್ಮ ಹೇಳುವುದು ಬೇಡ' ಎಂದು ನಾನು ಕೇಳಿದಾಗ ಹೆಸರನ್ನು ಉಚ್ಚರಿಸಹೋದ ರೋಗಿಯು ಈ ತೆರನ ಪ್ರದರ್ಶನವನ್ನು ನೀಡಿದಳು.
ಭರ್ಜರಿಯಾಗಿ ಬೆಳೆದ ಹೆಣ್ಣು ; ಸುಮಾರು ೨೦-೨೨ರ ಪ್ರಾಯ, ಸ್ವಲ್ಪ ಕುಳ್ಳು ಹುಡುಗಿ, ತುಸು ಮಾಸಲು ಕಪ್ಪು ಬಣ್ಣ, ಅಮ್ಮನ ಎಡಗೈಯನ್ನು ತನ್ನೆರಡೂ ಕೈಗಳಿಂದ ಭದ್ರವಾಗಿ ಹಿಡಿದುಕೊಂಡು, ಸೆಟೆದು ಕುಳಿತಿದ್ದಳು. ದುಂಡು ಮುಖದಲ್ಲಿ ಕಾತರವು ಎದ್ದು ಕಾಣುತ್ತಿತ್ತು.
'ನನ್ನ ಮಗೂಗೆ ಗಂಟಲು ಸರಿಹೋಗುತ್ಯೇ ಡಾಕ್ಟರೇ ! ಐದು ದಿನಗಳಾಯಿತು, ಅವಳ ಗಂಟಲು ಈ ರೀತಿ ಸೇದಿಕೊಂಡು, ಎಷ್ಟೋ ಕಷ್ಟಪಡ್ತಾಳೆ, ಆದರೆ ಒಂದು ಮಾತನ್ನೂ ಆಡಲು ಸಾಧ್ಯವಾಗುಲ್ಲ. ಒಂದು ತುತ್ತು ನುಂಗುವುದಕ್ಕೆ ತುಂಬಾ ಕಷ್ಟಪಡುತ್ತಾಳೆ. ಎರಡು ಗುಟುಕು ನೀರು ಕುಡಿದರೇನೆ, ಒಂದು ತುತ್ತು ಒಳಕ್ಕೆ ಇಳಿಯುವುದು,' ಎಂದು ಹೇಳಿ ರೋಗಿಯ ತಾಯಿಯು ಗುಳುಗುಳು