ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೨೯

ಅಂತ ಅಳುಕ್ಕೆ ಶುರು ಮಾಡಿದಳು. ತಾಯಿಯ ಕಡೆಗೆ ನೋಡುತ್ತಾ ಕೈ ಬಾಯಿ ಸನ್ನೆ ಮಾಡಿದಳೇ ವಿನಹಾ ರೋಗಿಯು 'ಅಳಬೇಡ ಅಮ್ಮಾ' ಅನ್ನಲಿಲ್ಲ.

“ನಿನ್ನ ಹೆಸರು ಹೇಳುಕ್ಕೆ ಆಗುಲ್ಲವೇನೇ ಗುಂಡೂ ! ಎಷ್ಟು ಹೊತ್ತು ಅಂತ ಡಾಕ್ಟರು ಕಾದಿರುವುದಕ್ಕೆ ಆಗುತ್ತೆ ? ನಿಂಗಾಗೋದನ್ನು ಬೇಗ ಹೇಳಿದರೆ, ವಾಸಿ ಮಾಡುವುದಕ್ಕೆ ಆಗುತ್ತೆ. ಐದು ದಿನಗಳಿಂದ ನಮ್ಮ ಪ್ರಾಣಾ ತೆಗೀತಾ ಇದೀಯಲ್ಲೇ ?' ಎಂದು ಗುಂಡಮ್ಮನ ತಂದೆ, ಕೋಪ ಮಿಶ್ರಿತ ಬೇಸರದ ದನಿಯಲ್ಲಿ ಗುಡುಗಿದರು.

'ಆಗೋ ಹಾಗಿದ್ದರೆ, ಮರಿ ಮಾತಾಡ್ತಿರಲಿಲ್ಲವೇ ? ಅಲವತ್ತುಕೊಂಡರೆ, ಪಾಪ, ಅದೇನು ಮಾಡುತ್ತೆ. ಅದೇ ಕಾಯಿಲೆ ಅದಕ್ಕೆ' ಎಂದು ತಾಯಿ ಗಂಡನ ಮೇಲೆ ತಿರುಗಿಬಿದ್ದಳು.

ಈ ಮರಿ, ಈ ಗುಂಡಮ್ಮ, ಐದು ದಿನಗಳಿಂದಲೂ ಹೀಗೆ ನರಳುತ್ತಿದ್ದಳು. ತುಟಿಗಳನ್ನು ಬಿರಿಬಿರಿ ಬಿರಿಸುತ್ತಾಳೆ ; ಹಲ್ಲುಗಳೆಲ್ಲವೂ ಬಿಗಿಯಾಗಿ ಗದಿ ಹಾಕಿ ಕೊಂಡಿರುವುದು ಕಾಣಿಸುತ್ತೆ, ಕತ್ತಿನ ಮಾಂಸಖಂಡಗಳೆಲ್ಲವೂ ಬಿಗಿಯಾಗಿ ಸೆಟೆದಿರುತ್ತವೆ. ಮುಖದ ಅದರಲ್ಲೂ ಬಾಯಿನ ಮಾಂಸಖಂಡಗಳೆಲ್ಲವೂ ಬಿಗಿದು ಕೊಂಡಿವೆ. ಯಾವ ಯಾವ ಮಾಂಸಖಂಡಗಳನ್ನು ಮಾತನಾಡಲು ಬಳಸುತ್ತೇವೆ, ಎಂದು ಗುಂಡಮ್ಮ ತಿಳಿದುಕೊಂಡಿದ್ದಾಳೋ ಅವೆಲ್ಲವೂ ಸೆಟೆದಿವೆ. ಬಾಯಿನಲ್ಲಿರುವ ನಾಲಿಗೆ, ಶ್ವಾಸನಾಳಗಳು, ಇವನ್ನು ಪ್ರದರ್ಶಿಸುವಂತಿಲ್ಲ. ಇವುಗಳಿಂದಲೇ ಮಾತಿನ ಉಚ್ಚಾರಣೆಯಾಗುವುದು. ಆದರೆ ಗುಂಡಮ್ಮನಿಗೆ ಇದು ಗೊತ್ತಿಲ್ಲ.

ಹಿಸ್ಟಿರಿಯಾದ ಒಂದು ಪ್ರದರ್ಶನ ಇದು, ಎಂದು ಸುಲಭವಾಗಿ ತಿಳಿಯಿತು. ಮಾನಸಿಕ ಕಾರಣಗಳಿಂದ ನಿರ್ಧ್ವನಿಯಾಗುವುದು ಹಿಸ್ಟಿರಿಯಾದ ಒಂದು ರೂಪ. ಮನಸ್ಸಿನಲ್ಲಿ ಹುದುಗಿಕೊಂಡು ಕಾಡುತ್ತಿರುವ ತಾಪತ್ರಯಗಳು ಇಚ್ಚಾಚಾಲಿತ ನರಗಳ ಮೂಲಕ ಗುಂಡಮ್ಮನ ಗಂಟಲಿನಲ್ಲಿ ಶನಿ ವಕ್ರಿಸಿದಂತೆ ವಹಿಸಿತ್ತು. ಗಂಟಲಿಗೆ, ಅದರ ಸಂಬಂಧಪಟ್ಟ ಭಾಗಗಳಿಗೆ ಚಿಕಿತ್ಸೆಯನ್ನು ಮಾಡಿದಂತೆ ನಟಿಸಿದರೆ, ರೋಗಿಯ ಮನಸ್ಸಿಗೂ ಒಂದು ರೀತಿಯ ಸಮಾಧಾನವಾಗುತ್ತದೆ. ರೋಗಿಯ ಸಂಬಂಧಿಗಳಿಗನಕ ತುಂಬಾ ಸಮಾಧಾನವಾಗುತ್ತದೆ.

ಆದುದರಿಂದ ಗಂಟಲನ್ನು ಪರೀಕ್ಷಿಸಲು, ಗದಿ ಹಾಕಿಕೊಂಡಿರುವ ಹಲ್ಲುಗಳ ಮಧ್ಯೆ, ಟಂಗ್‌ ಡಿಪ್ರೆಸರ್‌ ಅನ್ನು ಬಲವಂತದಿಂದ ತೂರಿಸಿ, ನಾಲಿಗೆಯನ್ನು ಅದುಮಲು ಪ್ರಯತ್ನಿಸಿದೆ. ಒಂದೆರಡು ಕ್ಷಣ ರಾಕ್ಷಸ ಶಕ್ತಿಯನ್ನು ಬಳಸಿ ಒತ್ತಿದ ಮೇಲೆ, ಬಾಯಿ ತೆರೆಯಿತು, ಗಂಟಲು ಕಾಣಿಸಿತು. ಆದರೆ ಅರೆಕ್ಷಣದಲ್ಲಿ ಟಪ್