ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨೦

ಮನಮಂಥನ

ಅಂತ ಬಾಯಿಯು ಮುಚ್ಚಿಕೊಂಡಿತು. ಟಂಗ್ ಡಿಪ್ರೆಸರನ್ನು ಬಲವಾಗಿ ಕಚ್ಚಿಕೊಂಡು ಮುಚ್ಚಿಕೊಂಡಿತು. ಟಂಗ್ ಡಿಪ್ರೆಸರನ್ನು ಹೊರಕ್ಕೆ ಕೀಳಲು ಶತ ಪ್ರಯತ್ನವನ್ನು ಮಾಡಬೇಕಾಯಿತು.

ಪಶುವೈದ್ಯರಂತೆ ನಡೆಸಿದ ಈ ರಾಕ್ಷಸ ಪ್ರಯೋಗವನ್ನು ಕಣ್ಣಾರೆ ಕಂಡ ತಾಯಿಯು, ಆ ತನಕ ತಾನೂ ಬಾಯಿ ಬಾಯಿ ಬಿಡುತ್ತಿದ್ದಳು. ಮಗಳ ಬಾಯಿ ನಿಂದ ಟಂಗ್ ಡಿಪ್ರೆಸ‌ ಹೊರಕ್ಕೆ ಬಂದಮೇಲೆ,

'ಅಯ್ಯೋ ಮರಿ ! ತುಂಬಾ ನೋವಾಯಿತೇನೇ ? ನರಗಿರ ಏನಾದರೂ ಹೊರಳೇನೆ ?' ಎಂದು ಬಲು ಮುದ್ದಿನ ದನಿಯಲ್ಲಿ ಕೇಳಿದಳು. 'ಹೂ' 'ಹೂ' ಅನ್ನುವಂತೆ ತಲೆಯನ್ನು ಮೇಲಕ್ಕೂ ಕೆಳಕ್ಕೂ ಆಡಿಸಿದಳು. ಧ್ವನಿ ಮಾತ್ರ ಹೊರಡಲೇ ಇಲ್ಲ.

'ಮುಂದಿನ ವಾರ ಹೆಣ್ಣು ನೋಡುಕ್ಕೆ ಅಂತ ಬತ್ತಾರೆ. ಏನಾದರೂ ಮಾಡಿ ಬೇಗ ವಾಸಿಮಾಡಿ, ನಾಲೈದು ವರ್ಷಗಳಿಂದ ಅದೆಷ್ಟು ಒದ್ದಾಡ್ತಾ ಇದೀನಿ, ಅಂತ ; ಇವಳ ಮದುವೆ ಮಾಡಿ, ಸೆರೆ ಬಿಡಿಸೋಣ ಅಂತ ; ಆ ಕಷ್ಟ ಪರಮಾತ್ಮನಿಗೇ ಗೊತ್ತು ! ಈ ಸರ್ತಿ ಬರುವವರು ಪ್ರಾಯಶಃ ಒಪ್ಪಬಹುದು ಅಂತ ಕಾಣಿಸುತ್ತೆ. ಇಂತಹ ಹೊತ್ತಿಗೆ ಇವಳಿಗೆ ಈ ಬೇನೆ ಬಡಿಯಬೇಕೇ ? ಮದುವೆಯಾದ ಮೇಲೆ, ಗಂಡನ ಮನೆಗೆ ಹೋದಾಗ ಬಡಿದಿದ್ದರೆ ಯಾರು ಬೇಡ ಅಂತಿದ್ದರು ?' ಎಂದು ತಂದೆ ಗೊಣಗಿದರು.

'ಕತ್ತಿನಲ್ಲಿ ಈ ನರ ಇದೆ ನೋಡು, ಗುಂಡಮ್ಮ ; ಇದು ಹೊರಳಿದೆ. ಈಗ ಅದನ್ನು ಸರಿಯಾದ ಸ್ಥಾನಕ್ಕೆ ನೀವಿ ಇದ್ದೀನಿ. ಆಮೇಲೆ ಸುಲಭವಾಗಿ ಮಾತನಾಡಬಹುದು' ಎಂದು ಅವಳ ಕತ್ತಿನ ಒಂದು ಪಾರ್ಶ್ವವನ್ನು ನೋವಾಗುವಂತೆ ಬಿಗಿಯಾಗಿ ಹಿಡಿದು 'ಎಲ್ಲಿ ಈಗ ನಾಲಿಗೆಯನ್ನು ಹೊರಕ್ಕೆ ಆದಷ್ಟು ಚಾಚು' ಎಂದೆ. ನಾಲಿಗೆಯು ಬಾಯಿಯಿಂದ ಹೊರಕ್ಕೆ ಸ್ವಲ್ಪ ಬಂತು. 'ಓಹೋ ಪರವಾಗಿಲ್ಲ' ಎನಿಸಿತು. ಕತ್ತಿನಲ್ಲಿ ಆದ ನೋವಿನಿಂದ, ಬೇನೆಯು ಹತೋಟಿಗೆ ಬಂದು, ನಾಲಿಗೆಯನ್ನು ಚಾಚುವಂತಾದುದು ; ರೋಗವು ಅತಿ ಉಲ್ಬಣ ಸ್ಥಿತಿಗೆ ಬಂದಿಲ್ಲ ಎನ್ನುವುದರ ಕುರುಹಾಗಿತ್ತು. ಆದುದರಿಂದ ಪರವಾಗಿಲ್ಲ ಎನ್ನಿಸಿತು.

'ಗುಂಡಮ್ಮ, ಕತ್ತಿನ ನರ ಸರಿಹೋಗಿದೆ. ಆದರೆ ತಿರುಗಿ ಹೊರಳಬಹುದು. ಅದಾಗದಂತೆ, ನಾಲಿಗೆಯನ್ನು ಸ್ವಲ್ಪ ಎಳೆಯಬೇಕು. ಸ್ವಲ್ಪ ನೋವಾಗುತ್ತೆ ಆದರೆ ಹೆದರಬೇಡ. ಈ ಘೋರ ಕಾಯಿಲೆಯನ್ನು ಅನುಭವಿಸಿದ್ದ. ಈ ಯಾತನೆಯ ಮುಂದೆ ಅವೇನೂ ಲೆಕ್ಕಕ್ಕೆ ಬರುವುದಿಲ್ಲ ಎಂದು ಒಮ್ಮೆ ಹೆದರಿಸಿ, ಅದೇ