ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೪

ಮನಮಂಥನ

ಬಿದ್ದದ್ದು, ಎಲ್ಲರೂ ಕೂಡಿ, ಎತ್ತಿಕೊಂಡು ಬಂದು ಮಂಚದ ಮೇಲೆ ಮಲಗಿಸಿದೆವು.' ಎಂದ ನನ್ನ ಕರೆದಿದ್ದ ತಮ್ಮ ಹೇಳಿದ.

ರೋಗಿಯ ಕೈಕಾಲುಗಳೆಲ್ಲವೂ ಸೆಟೆದುಕೊಂಡು ಅಸ್ತಾವಸ್ಥೆಯಾಗಿ ಬಿದ್ದಿದ್ದುವು. ದಿಟವಾಗಿ ಜ್ಞಾನವು ತಪ್ಪಿದ್ದರೆ, ಮಾಂಸಖಂಡವು ಸೆಟೆದುಕೊಂಡಿರುವುದು ವಿರಳ. ನಾಡಿಯು ಸರಿಯಾಗಿ ಬಡಿಯುತ್ತಿತ್ತು. ಕಣ್ಣುಗಳು ಮುಚ್ಚಿಕೊಂಡಿದ್ದುವು. ಆದರೆ ರೆಪ್ಪೆಗಳು ಥರಥರಿಸುತ್ತಿದ್ದುವು. ಕಟವಾಯಿನಿಂದ ಹರಿದು ಬಂದಿದ್ದ ಕಾಫಿಯು ಗಲ್ಲದ ಮೇಲೆ ಹೆಪ್ಪುಗಟ್ಟಿದಂತಿತ್ತು. ಅದನ್ನು ಗಂಡ ಒರೆಸುವುದಕ್ಕೆ ಮುಂಚೆಯೇ ನಾನು ಬಂದಿದ್ದಿರಬೇಕು.

ಹಿಸ್ಟಿರಿಯಾ ಪ್ರದರ್ಶನವಿದು ಎಂಬುದು ಸ್ಪಷ್ಟವಾಗಿತ್ತು. 'ಏನಾಗುತ್ತಾ ಇದೆಯಮ್ಮಾ ತಲೆ ತಿರುಗ್ತಾ ಇದೆಯೇ ?' ಎಂದು ಕೇಳುತ್ತಾ, ಮುಚ್ಚಿಕೊಂಡಿದ್ದ ಕಣ್ಣು ರೆಪ್ಪೆಗಳನ್ನು ಬಿಡಿಸತೊಡಗಿದೆ. ಭದ್ರವಾಗಿ ರೆಪ್ಪೆಗಳನ್ನು ಆಕೆ ಮುಚ್ಚಿ ಕೊಂಡಿದ್ದಳು. ಬಲಪ್ರಯೋಗವನ್ನು ಮಾಡಿ, ನೋವಾದರೂ ಚಿಂತೆಯಿಲ್ಲ ಎಂದು ಜುಲುಮಿನಿಂದ ರೆಪ್ಪೆಗಳನ್ನು ಬಿಡಿಸಿದೆ. ಮೇಲು ರೆಪ್ಪೆಯನ್ನು ಎತ್ತಿದೆ. ಆಗ ಆಕೆಯ ಕಣ್ಣುಗಳ ಕಪ್ಪು ಗುಡ್ಡೆಗಳು ನನ್ನನ್ನು ನೋಡಲೇಬೇಕಾಯಿತು. ನೋಡಿದಳು. ಡಾಕ್ಟರು ಎಂಬುದನ್ನು ಗುರುತಿಸಿದಳು. ಆಕೆಯ ರೆಪ್ಪೆಗಳಿಂದ ಬೆರಳುಗಳನ್ನು ತೆಗೆದೆ. ಕಣ್ಣು ಕಣ್ಣು ಬಿಟ್ಟು ಪಿಳ ಪಿಳ ನೋಡಿದಳು. ಎದ್ದು ಕುಳಿತು ಸೆರಗನ್ನು ಸರಿಮಾಡಿಕೊಂಡಳು.

'ಏನಾಯ್ತು ? ನನಗೆ. ತಲೆಯೆಲ್ಲಾ ಯಾಕೆ ಒದ್ದೆಯಾಗಿದೆ ?' ಎಂದು ಕೇಳಿದಳು.

'ಅಂಗಳದಲ್ಲಿ ಮಾತನಾಡುತ್ತಾ ಇದ್ದುದು ಜ್ಞಾಪಕವಿಲ್ಲವೇ, ಅಕ್ಕ ! ಜ್ಞಾನ ತಪ್ಪಿ ಹಠಾತ್ತನೆ ಬಿದ್ದು ಬಿಟ್ಟೆ. ನೆತ್ತಿಗೆ ತಣ್ಣೀರು ತಟ್ಟಿ ಇಲ್ಲಿಗೆ ಎತ್ತಿಕೊಂಡು ಬಂದು ಮಲಗಿಸಿದೆವು' ಎಂದು ತಮ್ಮ ಆತುರ ಆತುರವಾಗಿ ಹೇಳಿದ.

'ಈಗ ಸರಿಯಾಗಿದ್ದಾರಲ್ಲಾ ! ಇನ್ನೇನೂ ಗಾಬರಿ ಇಲ್ಲವಲ್ಲ. ಒಂದೊಂದು ಸರ್ತಿ ಪಿತ್ತ ಹೆಚ್ಚಾದರೆ, ಹೀಗೆ ಜ್ಞಾನ ತಪ್ಪಿದಂತಾಗುತ್ತೆ. ಬಿಸಿಬಿಸಿ ಕಾಫಿಯನ್ನು ಕುಡಿಸಿರಿ. ಊಟವಾಗಿದೆ ತಾನೆ ? ನಾನೂ ಮನೆಗೆ ಹಿಂತಿರುಗಿ ಊಟವನ್ನು ಮುಗಿಸುತ್ತೇನೆ' ಎಂದು ಹೇಳಿ ಹೊರಕ್ಕೆ ಬಂದೆ.

ಕಾಫಿಯನ್ನು ಆಕೆ ಕುಡಿದಳು. ಬಾಗಿಲು ತನಕ ಆಕೆಯೂ, ಗಂಡ, ಮಕ್ಕಳೂ ಬಂದು ನನ್ನನ್ನೂ ಆಕೆಯ ತಮ್ಮನನ್ನೂ ಬೀಳ್ಕೊಟ್ಟರು. ನಮ್ಮ ಮನೆಯಲ್ಲಿ ಬಿಟ್ಟಿದ್ದ ಸೈಕಲ್ಲನ್ನು ಅವ ಹಿಂತಿರುಗಿ ತೆಗೆದುಕೊಂಡು ಹೋಗಬೇಕಾಗಿದ್ದುದರಿಂದ,