ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೩೫

ಅವನೂ ನನ್ನ ಜೊತೆಯಲ್ಲಿ ಹಿಂತಿರುಗುವವನಿದ್ದ.

ಕಾರಿನಲ್ಲಿ ಹಿಂತಿರುಗುವಾಗ, ಆ ಮಾತು ಈ ಮಾತು ಆಡುತ್ತಾ, ವಿವರಗಳನ್ನು ತಮ್ಮನಿಂದ ತಿಳಿದುಕೊಂಡೆ. ತಮ್ಮನಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ, ತಾಯಿಯು ತೀರಿಕೊಂಡಿದ್ದಳು. ಅಂದಿನಿಂದ ಇರುದಯ ಮೇರಿಯು ತಮ್ಮನನ್ನು ಸಾಕುತ್ತಿದ್ದಳು. ಮದುವೆಯಾಗಿ ಗಂಡನ ಮನೆಗೆ ಆಕೆಯು ಪಟ್ಟಣಕ್ಕೆ ಬಂದಳು. ಪಟ್ಟಣದಲ್ಲಿ ಓದುವುದಕ್ಕೆ ಹೆಚ್ಚು ಸೌಕರ್ಯವಿರುತ್ತೆ ಎಂದು, ಎರಡನೆಯ ಮದುವೆಯನ್ನು ಮಾಡಿಕೊಂಡಿದ್ದ ತಂದೆಯು ಸಂತೋಷದಿಂದ ಮೊದಲ ಹೆಂಡತಿಯ ಮಗನನ್ನು ಕಳುಹಿಸಿಕೊಟ್ಟಿದ್ದ. ಪಟ್ಟಣದಲ್ಲಿ ಅಕ್ಕನ ಮನೆಯಲ್ಲಿರಬೇಕಾದಾಗ, ಭಾವನು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾನೋ ಎನ್ನುವ ಕಾತರವು ತಮ್ಮನಿಗೆ ಇರುತ್ತೆ. ಆದರೆ ಭಾವನು ಕೂಡ ಬಲು ಆದರದಿಂದ ಇವನನ್ನು ನಡೆಸಿಕೊಂಡನಂತೆ. ದಂಪತಿಗಳು ಬಹಳ ಅನ್ನೋನ್ಯವಾಗಿದ್ದ ಸಂಸಾರ. ಶ್ರೀಮಂತರಲ್ಲದಿದ್ದರೂ, ಬಡತನದ ಬೇಗೆಯು ಅವರನ್ನು ತಟ್ಟಿರಲಿಲ್ಲ. ದೇವರು ದಿಂಡರು ಎಂದರೆ ತುಂಬಾ ಭಕ್ತಿ. ಮನೆಯವರೆಲ್ಲರೂ ಪ್ರತಿ ಭಾನುವಾರವೂ ಇಗರ್ಜಿಗೆ ತಪ್ಪದೆ ಹೋಗಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದರು. ಈ ಮಾತು ಹೇಳಿದಾಗ ತಮ್ಮನು ತುಸು ಉದ್ಯೋಗಿಯಾದ.

'ನಾನೂ ತಪ್ಪದೆ ಇಗರ್ಜಿಗೆ ಹೋಗಿ ಬರುತ್ತೇನೆ, ಡಾಕ್ಟರೇ ! ಅಕ್ಕನಿಗೆ ಸಂತೋಷವಾಗಲಿ ಅಂತ, ಆದರೆ ಜಾತಿ ಮತ ಎನ್ನುವ ಅತಿ ಮಡಿವಂತಿಕೆ ನನಗೆ ಹಿಡಿಸುಲ್ಲ' ಎಂದು ಹೇಳಿದ.

ಇವನ್ಯಾಕೆ ಉದ್ವೇಗಗೊಂಡ ಎಂದು ನನ್ನ ಕುತೂಹಲವು ಕೆರಳಿತು. ಆದ ಕಾರಣ 'ಹಾಗೇಕೆ ಅಂತೀ' ಎಂದೆ. 'ನಿನ್ನ ಅಭಿಪ್ರಾಯವೇ ನನ್ನದೂನೂ ಈ ವಿಷಯದಲ್ಲಿ. ಆದರೆ ನೀನು ಸಂಪ್ರದಾಯಸ್ಥರ ಮನೆಯಲ್ಲಿ ಬೆಳೆದವ. ಹೀಗನ್ನ ಬೇಕಾದರೆ ಏನಾದರೂ ಕಾರಣವಿರಬೇಕು' ಎಂದು ಕುಮ್ಮಕ್ಕು ಕೊಟ್ಟೆ, ಅವನ ಬಾಯಿ ಬಿಡಿಸಲು. ಸ್ವಲ್ಪಕಾಲ ಎಳ್ಳಂಬಳಸೆ ಮಾಡಿದ ಮೇಲೆ ಅವನು ವಿಷಯವನ್ನು ತಿಳಿಸಿದ.

ಇವ ಆಡಿಟರ್ ಪರೀಕ್ಷೆಗೆ ಓದುತ್ತಿದ್ದ. ಜೊತೆಯಲ್ಲಿ ಓದುತ್ತಿದ್ದ ತರುಣಿ ಯೊಬ್ಬಳಲ್ಲಿ ಇವ ಅನುರಕ್ತನಾಗಿದ್ದ. ಇವನನ್ನು ಕಂಡರೆ ಆಕೆಯೂ ಬಾಯಿ ಬಿಡುತ್ತಿದ್ದಳು. ಇವನನ್ನು ಮದುವೆಯಾಗುವುದಕ್ಕೆ ಅವಳೂ ಸಮ್ಮತಿಸಿದ್ದಳು. ಆದರೆ ಅವಳು ಅನಾಥಾಲಯದಲ್ಲಿ ಬೆಳೆದ ಹುಡುಗಿ, ಜಾಣ ವಿದ್ಯಾರ್ಥಿನಿ. ಆದುದರಿಂದ ವಿದ್ಯಾರ್ಥಿವೇತನವನ್ನು ತಪ್ಪದೆ ಪಡೆದು ಓದನ್ನು ಮುಂದುವರಿಸಿದ್ದಳು.