೧೩೭
ಎಂಟು ಹತ್ತು ವರ್ಷಗಳಿಂದ ನಮ್ಮ ಬಡಾವಣೆಯಲ್ಲಿ ಅಂಚೆಪೇದೆಯಾಗಿದ್ದಾನೆ. ಸ್ವಲ್ಪ ಮಂಕು ಅಂತಲೇ ಹೇಳಬೇಕು. ಆದುದರಿಂದಲೇ ಏನೋ ಗಾಣದ ಎತ್ತಿ ನಂತೆ ದುಡಿಯುತ್ತಿದ್ದ. ನೆಗಡಿ, ಕೆಮ್ಮು, ತಲೆನೋವು, ಮೂಗು ನೋವು, ಅಂತ ಆಗಿಂದಾಗ್ಗೆ ಚಿಕಿತ್ಸೆಗೆ ಬರುತ್ತಿದ್ದ. ಹೆಚ್ಚು ಮಾತನಾಡುವ ಸ್ವಭಾವದವನಲ್ಲ. ಹುಂ ಉಹುಂಗಳಿಂದಲೇ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಿದ್ದ.
ಒಂದು ಬೆಳಿಗ್ಗೆ ಸಂಪಿಗೆ ಮರದ ಮನೆಗೆ ಕಾಗದವನ್ನು ವಿಲೇವಾರಿ ಮಾಡಲು ಹೋಗಿದ್ದನಂತೆ. ಆ ಮನೆಯವರು ಹೊಸ ನಾಯಿಯೊಂದನ್ನು ತಂದಿಟ್ಟುಕೊಂಡಿದ್ದರಂತೆ. ಇವನನ್ನು ಕಂಡು, ಕಟ್ಟಿ ಹಾಕಿದ್ದ ನಾಯಿಯು ಬೊಗಳಿತಂತೆ. ಧಡೂತಿ ನಾಯಿಯ ಭರ್ಜರಿ ಬೊಗಳುವಿಕೆಗೆ, ರಾಮಾಂಜನಿಯು ಬೆಬ್ಬರ ಬೆದರಿದನಂತೆ. ಕಾಂಪೌಂಡಿನಿಂದ ರಸ್ತೆಗೆ ಹಿಂದೇಟು ನೆಗೆದನಂತೆ.
ರಸ್ತೆಯಲ್ಲಿ ಆ ವೇಳೆಗೆ ಸರಿಯಾಗಿ ಲಾರಿಯೊಂದು ಬರುತ್ತಿತ್ತಂತೆ. ಸೇಂದಿಯನ್ನು ತುಂಬಿಕೊಂಡು ಬರುತ್ತಿದ್ದ ಲಾರಿ. ಅಂದಮೇಲೆ ಅದರ ವಜನ್ ಕೇಳಬೇಕೆ? ಸೇಂದಿಯನ್ನು ತುಂಬಿಕೊಂಡು, ಡ್ರೈವರ್ ಲಾರಿಯನ್ನು ಚಲಾಯಿಸುತ್ತಿದ್ದ. ಅಂದಮೇಲೆ ಲಾರಿಯ ವೇಗವನ್ನು ಕೇಳಬೇಕೇ ?
ಹಠಾತ್ತನೆ ಹಿಮ್ಮೆಟ್ಟಿ ರಸ್ತೆಗೆ ಬಿದ್ದಿದ್ದ ರಾಮಾಂಜನಿಯ ಎಡ ತೋಳಿಗೆ ಲಾರಿಯ ಬಲಗಡೆಯ ಮಡ್‌ಗಾರ್ಡ್ ಗುಮ್ಮಿತು. ಅವನ ಪುಣ್ಯ. ಇಲ್ಲದೆ ಇದ್ದಿದ್ದರೆ ಲಾರಿಯ ಚಕ್ರದ ಕೆಳಗೆ ಸಿಕ್ಕಿಹಾಕಿಕೊಂಡು ರಾಮಾಂಜನಿಯು ಅಪ್ಪಚ್ಚಿಯಾಗಬೇಕಾಗಿತ್ತು. ಎಡತೋಳಿಗೆ ಮೂಗುಪೆಟ್ಟು ಬಲವಾಗಿ ಬಿದ್ದಿತ್ತು.
ಅದೇ ಲಾರಿಯಲ್ಲಿ, ಡ್ರೈವರು ರಾಮಾಂಜನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಅಲ್ಲಿದ್ದ ಡಾಕ್ಟರು ಸಂಪೂರ್ಣವಾಗಿ ಪರೀಕ್ಷೆಯನ್ನು ಮಾಡಿ, ಎಕ್ಸ್‌ರೇಗಳನ್ನು ತೆಗೆಸಿನೋಡಿ, 'ಅಂತಹುದೇನೂ ಪೆಟ್ಟು ಬಿದ್ದಿಲ್ಲ. ಮೂರು ನಾಲ್ಕು ದಿನಗಳಲ್ಲಿ ವಾಸಿಯಾಗುತ್ತೆ' ಎಂದು ಭರವಸೆಯನ್ನು ಕೊಟ್ಟರು. ಸೂಕ್ತ ಚಿಕಿತ್ಸೆಯನ್ನು ಮಾಡಿದರು. ಅಪಘಾತದ ಸುದ್ದಿಯನ್ನು ಕೇಳಿದ ಲಾರಿಯ ಮಾಲಿಕರು, ಆಸ್ಪತ್ರೆಗೆ ಧಾವಿಸಿ ಬಂದು ರಾಮಾಂಜನಿಯನ್ನು ವಿಚಾರಿಸಿದರು. ಮುಂದೆ ಅನಾನುಕೂಲವಾಗದಿರಲಿ ಎಂದು ಪೋಲಿಸ್ ಠಾಣೆಗೆ ಹೋಗಿ ವರದಿಯನ್ನು ಒಪ್ಪಿಸಿದರು.
'ಪೊಲೀಸ್ ಮೊಕದ್ದಮೆಯಾಗುತ್ತದೆ. ಆದಕಾರಣ ವಿವರಗಳೆಲ್ಲವೂ ತೃಪ್ತಿಕರವಾಗಿರಬೇಕು, ಡಾಕ್ಟರೆ' ಎಂದು ವಾರ್ಡಿನ ಡಾಕ್ಟರಿಗೆ ಎಚ್ಚರಿಕೆಯನ್ನು ಕೊಟ್ಟರು.