ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೮

ಮನಮಂಥನ

ವಾರ್ಡಿನ ಡಾಕ್ಟರು, ಅಗತ್ಯವಾದುದೆಲ್ಲವನ್ನೂ ಮಾಡಿದ್ದರು. ಆದರೆ ನ್ಯಾಯಾಸ್ಥಾನದಲ್ಲಿ ಎಂತೆಂತಹ ಪ್ರಶ್ನೆಗಳನ್ನು ಕೇಳುತ್ತಾರೋ ಏನೋ ! ನನಗ್ಯಾಕೆ ಇದರ ಜವಾಬ್ದಾರಿ ಎಂದುಕೊಂಡು, ಆಸ್ಪತ್ರೆಯ ಹಿರಿಯ ವೈದ್ಯರು ಮೂವರನ್ನು ಕರಸಿ, ಅವರ ಸಲಹೆಗಳನ್ನು ಗುರ್ತು ಮಾಡಿಸಿದರು, ರೋಗಿಯ ವರದಿಯಲ್ಲಿ.

ಮೂರು ನಾಲ್ಕು ದಿನಗಳಲ್ಲಿ ವಾಸಿಯಾಗುತ್ತೆ ಎಂದು ಡಾಕ್ಟರು ಮೊದಲು ಹೇಳಿದಾಗ, ರಾಮಾಂಜನಿಗೆ ಸಂತೋಷವಾಗಿತ್ತು. ಘೋರವಾಗಬಹುದಾಗಿದ್ದ ಆಘಾತವು ಇಷ್ಟರಲ್ಲೇ ಪರ್ಯವಸಾನವಾಯಿತಲ್ಲ ಎನ್ನುವ ಸಮಾಧಾನ. ಆದರೆ ಮೂರು ನಾಲ್ಕು ಜನ ಡಾಕ್ಟರುಗಳು ಬಂದು, ಮೇಲಿಂದ ಮೇಲೆ ಪರೀಕ್ಷೆಯನ್ನು ಮಾಡಿ, ಸ್ವಹಸ್ತದಲ್ಲಿ ವರದಿಯ ಹಾಳೆಗಳನ್ನು ತುಂಬಿದ್ದನ್ನು ನೋಡಿದ, ಇಷ್ಟೆಲ್ಲಾ ತಪಾಸು ಮಾಡಬೇಕಾದರೆ, ನನಗೇನೋ ಆಗಿದೆ, ಅಥವಾ ಮುಂದೆ ಆಗಬಹುದು ಎನ್ನುವ ಅನುಮಾನವು ಮೂಡಿತು.

ರಾಮಾಂಜನಿಯ ಹೇಳಿಕೆಯನ್ನು ಬರೆದುಕೊಳ್ಳಲು ಪೋಲೀಸಿನವರು ಬಂದರು. ಆದುದನ್ನು ಸರಿಯಾಗಿ ಹೇಳು, ಸಾಕಷ್ಟು ಪರಿಹಾರ ಧನವನ್ನು ಲಾರಿಯ ಮಾಲೀಕರಿಂದ ಗಿಟ್ಟಿಸಬಹುದು. ಅವರು ತಾನೇ ತಮ್ಮ ಕೈಯಿಂದ ಕೊಡುತ್ತಾರೆಯೇ? ಇನ್ಸೂರೆನ್ಸ್ ಕಂಪನಿ ಪೀಕುತ್ತೆ. ಪೀಕಲಿ ಕಣೋ,' ಎಂದು ಲಘುವಾಗಿ ಹೇಳಿದ್ದರು.

ಐದಾರು ದಿನಗಳಾದವು. ಎಡತೋಳನ್ನೆತ್ತಲು ರಾಮಾಂಜನಿಗೆ ಸಾಧ್ಯವಾಗಲಿಲ್ಲ. ಎರಡು ವಾರಗಳಾದರೂ ಗುಣಮುಖವಾಗಲಿಲ್ಲ. ಬದಲು ನೋವು ಕಾಣಿಸಿಕೊಂಡಿತು. ಹೆಚ್ಚಾಗುತ್ತಲೂ ಹೋಯಿತು. ಡಾಕ್ಟರು ಎಷ್ಟು ಭರವಸೆಯನ್ನು ಕೊಟ್ಟು ತೋಳನ್ನೆತ್ತು ಎಂದು ಹುರಿದುಂಬಿಸಿದರೂ, ರಾಮಾಂಜನಿಯು ತೋಳನ್ನು ಎತ್ತಲು ಸಾಧ್ಯವಾಗಲೇ ಇಲ್ಲ. ನ್ಯಾಯಾಸ್ಥಾನದಲ್ಲಿ ಮೊಕದ್ದಮೆಯು ಮೂರು ವರ್ಷಗಳ ಕಾಲ ನಡೆಯಿತು. ಕಡೆಗೆ ಎಂಟುನೂರು ರೂಪಾಯಿಗಳ ಪರಿಹಾರ ಧನವು ದೊರಕಿತು, ಆದರೆ ಬಿದ್ದ ತೋಳು ಪುನಃ ಸ್ವಸ್ಥವಾಗಲೇ ಇಲ್ಲ.

ನನಗೆ ಸಂಭವಿಸಿದ ಅಪಘಾತವು ಅಷ್ಟೇನೂ ಘೋರವಾದುದಲ್ಲ ಎಂದು ರಾಮಾಂಜನಿಗೆ ಆಸ್ಪತ್ರೆಗೆ ಹೋಗಿ, ಮೊದಲ ಪರೀಕ್ಷೆಯಾದ ನಂತರ, ಸಮಾಧಾನವಾಗಿತ್ತು. ಆದರೆ ಮೇಲಿಂದ ಮೇಲೆ ಹಲವಾರು ಡಾಕ್ಟರುಗಳು ಬಂದು ವಿಧ ವಿಧ ಪರೀಕ್ಷೆಗಳನ್ನು ಮಾಡಿದಾಗ, ನನಗೇನೋ ಆಗಬಾರದ್ದು