ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪೦

ಮನಮಂಥನ

ಈ ಸಾಮಾನ್ಯ ವರ್ತನೆಯ ಉಲ್ಬಣಿಸಿದ ಘೋರ ರೂಪಾಂತರವೇ ನಟನೆ, Malingering.

ಅಪಘಾತದ ಹಿಸ್ಟಿರಿಯಾವನ್ನು ನಟನೆಯ ಪ್ರದರ್ಶನಗಳಿಂದ ಬೇರ್ಪಡಿಸ ಬೇಕಾದರೆ, ಬಹಳ ಶ್ರಮವನ್ನು ವಹಿಸಬೇಕು. ಕಣ್ಣಲ್ಲಿ ಕಣ್ಣಿಟ್ಟುಕೊಂಡು ಪರೀಕ್ಷಿಸಬೇಕು. ತುಂಬಾ ಅನುಭವವನ್ನು ಪಡೆದ ನುರಿತ ವೈದ್ಯರ ಕಣ್ಣಿಗೂ ಹಲವು Malingerers ಮಣ್ಣೆರಚುತ್ತಾರೆ.

ಮುದ್ದುಕೃಷ್ಣನ ರಚ್ಚೆ ಮುದ್ದು ಮುದ್ದಾಗಿತ್ತು. ಮೂರು ವರ್ಷದ ಗಂಡು ಮಗು. ದುಂಡುದುಂಡಾಗಿ ಬೆಳೆದಿದ್ದ ಮಗು, ಸುಂದರವಾಗಿದ್ದ ಮಗು, ಕಂಡವರಿಗೆ ಕೆನ್ನೆ ಚಿವುಟೋಣ ಎನ್ನಿಸುತ್ತಿತ್ತು. ಹುಟ್ಟಿದಾಗಲೇ ದುಂಡುದುಂಡಾಗಿದ್ದುದರಿಂದ ಅದರ ಅಜ್ಜಿ 'ಮುದ್ದು ಕೃಷ್ಣ' ಎಂದು ನಾಮಕರಣವನ್ನು ಹಠಹಿಡಿದು ಮಾಡಿಸಿದಳು. ಅಜ್ಜಿಯ ತದ್ರೂಪ ಮಗು. 'ಮುಂದೆ ಬೇಕಾದರೆ ಇನ್ನು ಯಾವುದಾದರೂ ಹೆಸರಿಟ್ಟುಕೊಳ್ಳಿ. ನಾನನ್ಯ ಮುದ್ದು ಕೃಷ್ಣ ಅಂತಲೇ ಕರೆಯುವುದು' ಎಂದು ಅಜ್ಜಿಯ ವಾದ. ಕಡೆಗೆ ಅದೇ ಹೆಸರು ಶಾಶ್ವತವಾಯಿತು.

ಒಂದು ವರ್ಷದ ಮಗುವು ಓಡಾಡುವುದಕ್ಕೆ ಪ್ರಾರಂಭಿಸಿತು. ಅದರ ಕಾಲಿನಲ್ಲಿ ಭಗವಂತ ಚಕ್ರವನ್ನು ಇಟ್ಟಿದ್ದನೋ ಏನೋ, ಮನೆಯಲ್ಲೆಲ್ಲಾ ಎಡಬಿಡದೆ ಸುತ್ತಾಡುತ್ತಿತ್ತು. ಅರೆಕ್ಷಣ ಒಂದು ಕಡೆ ನಿಲ್ಲದು. ಅರಿಶಿನ ಕುಂಕುಮಕ್ಕೆಂದು, ಪಕ್ಕದ ಮನೆಗೆ ಮಗುವನ್ನೆತ್ತಿಕೊಂಡು ಅಮ್ಮ ಹೋದರೆ, ಅಲ್ಲಿ ತೆಪ್ಪಗಿತ್ತು ಅಂತೀರಾ! ಹೊಸ ಸ್ಥಳ, ಹೊಸ ಮುಖ ಅಂತ ಸಂಕೋಚವೇನಾದರೂ ಇತ್ತು ಅಂತೀರಾ? ಉನ್ನೂ ಅಡೆತಡೆಯಿಲ್ಲದೆ ಆ ಮನೆಯಲ್ಲೆಲ್ಲಾ ಮುದ್ದು ಕೃಷ್ಣ ಅಡ್ಡಾಡುತ್ತಿದ್ದ. ಕಂಡದ್ದಕ್ಕೆ ಕೈ ಹಾಕುವುದು, ಸಿಕ್ಕಿದ್ದನ್ನು ಹಿಡಿಯುವುದು, ಪಾದರಸದಂತೆ ಹರಿದಾಡುವುದು. “ಎಷ್ಟು ಚೂಟಿಯಾಗಿದೆಯೇ, ಮಗು.' ಅಂತ ಹೆಣ್ಣುಗಳೆಲ್ಲಾ ಎತ್ತಿಕೊಂಡು ಮುದ್ದಿಡುತ್ತಿದ್ದರು.

ಹದಿನೆಂಟು ತಿಂಗಳು ವಯಸ್ಸಾದಾಗ, ಮಗುವಿನ ಕೈಯಲ್ಲಿದ್ದ ಚಾಕುವನ್ನು ಅಮ್ಮ ಒಂದು ಮಧ್ಯಾಹ್ನ ಕಿತ್ತುಕೊಂಡಳು. 'ಇದೆಲ್ಲಿ ಸಿಕ್ಕು ಇದರ ಕೈಗೆ, ಕಣ್ಣು ಮೂಗನ್ನು ಊನ ಮಾಡಿಕೊಂಡು ಬಿಡುತ್ತಲ್ಲಾ, ಅರಿಯದ ಮಗು' ಎಂದು ಗಾಬರಿಯಾದ ತಾಯಿ ಚಾಕುವನ್ನು ಕಂಡಕೂಡಲೇ ಜಟ್ಟಂತ ಕಿತ್ತುಕೊಂಡುಬಿಟ್ಟಳು. ಹಠಹಿಡಿದು ಮಗು ಅಳುವುದಕ್ಕೆ ಶುರು ಮಾಡಿತು. ಎಷ್ಟು ಸಮಾಧಾನ ಮಾಡಿದರೂ