೧೪೧
ರಜ್ಜೆಯನ್ನು ಮಗು ನಿಲ್ಲಿಸಲಿಲ್ಲ. ಚಂಡಿ ಹಿಡಿದು ಮಗು ಗಟ್ಟಿಯಾಗಿ ಅಳತೊಡಗಿತು. ಆರೆಕ್ಷಣದಲ್ಲಿ ಉಸಿರು ಸಿಕ್ಕಿಕೊಂಡಿತು. ಕೆಲವು ಸೆಕೆಂಡುಗಳು, ಒಳಕ್ಕೆ ಉಸಿರು ಹೋಗಲೇ ಇಲ್ಲ. ಮುಖವು ನೀಲಿಗಟ್ಟಿತು. ಕೈ ಕಾಲುಗಳು ಒಂದೆರಡು ಬಾರಿ ಚಿಮ್ಮಿದುವು, ಅಮ್ಮ, ಅಜ್ಜಿ, ಎಲ್ಲರೂ 'ಅಯ್ಯಯ್ಯೋ' ಅಂತ ಅಳುವುದಕ್ಕೆ ಶುರು ಮಾಡಿದರು. ಮುದ್ದು ಕೃಷ್ಣನ ಆಟ ಮುಗಿಯಿತೇನೋ ಎಂದವರ ಭಯ. ಒಂದೆರಡು ನಿಮಿಷಗಳಲ್ಲಿ, ಮನೆಯಲ್ಲಿ ಕೆಲಸಮಾಡುತ್ತಿದ್ದಾಕೆಯು ಇದನ್ನು ಕಂಡು ಚಿಟಿಕಿ ಹಾಕಿದಳು. ದೊಡ್ಡ ಉಸಿರನ್ನು ಮುದ್ದು ಕೃಷ್ಣ ಎಳೆದುಕೊಂಡ. ನಂತರ ಸರಾಗವಾಗಿ ಉಸಿರಾಡಲು ಆರಂಭಿಸಿದ. ನೀಲಿಯಾಗಿದ್ದ ಮುಖವು ಕೆಂಚಗಾಯ್ತು. ಹಾಗೆಯೇ ನಿದ್ರೆ ಹೋದ. ಹದಿನೈದು ಇಪ್ಪತ್ತು ನಿಮಿಷಗಳಾದ ಮೇಲೆ ಮಗು ಎಚ್ಚರಗೊಂಡಿತು. ಯಥಾಪ್ರಕಾರ ಸರಿದಾಡಲು ಪ್ರಾರಂಭಿಸಿತು. ಚಾಕು ಎಲ್ಲಿ ಎಂದು ತಿರುಗಿ ಕೇಳಲಿಲ್ಲ. ಮರೆತೇ ಬಿಟ್ಟಿತ್ತು.
ಮೂರು ನಾಲ್ಕು ವರ್ಷಗಳಾಗುವ ತನಕ, ಚಂಡಿಹಿಡಿದು ಅತ್ತಾಗಲೆಲ್ಲ, ಮುದ್ದು ಕೃಷ್ಣನಿಗೆ, ಹೀಗೆಯೇ ಆಗುತ್ತಿತ್ತು. ಮೊದಮೊದಲು ವಾರಕ್ಕೊಂದೆರಡು ಬಾರಿ ಹೀಗಾಗುತ್ತಿತ್ತು. ವಯಸ್ಸು ಹೆಚ್ಚಿದಂತೆಲ್ಲ ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ಆಗತೊಡಗಿತು. ನಾಲ್ಕನೆಯ ಹುಟ್ಟಿದ ಹಬ್ಬದ ಹೊತ್ತಿಗೆ ಹೀಗಾಗುವುದು ನಿಂತುಹೋಯಿತು.
Tantrums ಎಂದು ಕರೆಯಲ್ಪಡುವ ಈ ಪ್ರವೃತ್ತಿಯು ಕೆಲವು ಮಕ್ಕಳಲ್ಲಿ ಕಾಣಬರುತ್ತದೆ.
ಮೆದುಳು ಮತ್ತು ನರಮಂಡಲವು ಮಕ್ಕಳಲ್ಲಿ ಸಂಪೂರ್ಣವಾಗಿ ವ್ಯವಸ್ಥೆಯಾಗದೆ ಇರುವುದರಿಂದ, ರೇಗಿ ಚಂಡಿ ಹಿಡಿದಾಗ ಒಂದೆರಡು ಕ್ಷಣ ಉಸಿರು ನಿಂತು ಹೋಗುತ್ತದೆ. ಮಗುವಿನ ಮುಖವು ಆಗ ನೀಲಿಗಟ್ಟುತ್ತದೆ. ಕೆಲವೊಮ್ಮೆ ಜ್ಞಾನವೂ ತಪ್ಪಿ ಹೋಗುತ್ತದೆ. ಕೆಲವು ನಿಮಿಷಗಳಲ್ಲಿ ಉಸಿರಾಡುವುದು ಸರಿಹೋಗುತ್ತದೆ. ನೋಡುತ್ತಿರುವವರಿಗೆ ಆ ಕೆಲವು ನಿಮಿಷಗಳು ಯುಗಗಳಂತೆ ಭಾಸವಾಗುತ್ತದೆ.
ಕೆಲವು ಎಳೆಯ ಮಕ್ಕಳಲ್ಲಿ ಮಾತ್ರ ಹೀಗಾಗುತ್ತದೆ. ಬೆಳಯುತ್ತ ಬೆಳೆಯುತ್ತ ಕಡಿಮೆಯಾಗುವ, ಕೊನೆಗೆ ನಿಂತು ಹೋಗುವ, ಈ ಬೇನೆಗೆ ತಾತ್ಕಾಲಿಕ ಶಮನವು ಮಾತ್ರ ಸಾಕು, ದೀರ್ಘಕಾಲದ ಯಾವ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ. ಮಗುವಿನ ಮನಸ್ಸು ಚಂಚಲ ಸ್ವಭಾವದ್ದು. ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುತ್ತದೆ. ಆದರೆ ಆ ಕ್ಷಣದಲ್ಲಿದ್ದ ಗೀಳು ಬಲವಾಗಿರುತ್ತದೆ. ಆ ಗೀಳು ಮಗುವನ್ನು ಪಟ್ಟು