ಮನಮಂಥನ
ರಾಗಭಾವಗಳಲ್ಲಿ ಆಳವಿಲ್ಲದೆ ಇರುವುದು ; ಇವೆಲ್ಲವೂ ಹಿಸ್ಟಿರಿಯಾ ಪ್ರದರ್ಶನದ ಮುಖ್ಯವಾದ, ಹಾಗೂ ಮೂಲಭೂತವಾದ ಕಾರಣಗಳು.
ಅಜ್ಜನ ಅವಾಂತರ
ಅರವತ್ತೈದು ವರ್ಷಗಳಾಗಿದ್ದುವು ; ನಮ್ಮ ಮೂಡಲಗಿರಿ ಅಜ್ಜಯ್ಯನಿಗೆ ಕೂದಲು ನರೆತಿದ್ದರೂ ಹೊರವಾಗಿತ್ತು. ಒಂದೆರಡು ಹಲ್ಲುಗಳೇನೋ ಬಿದ್ದಿದ್ದುವು; ಆದರೆ ಎಲಡಿಕೆಯನ್ನು ಜಗಿಯುತ್ತಿದ್ದ. ಬೈಸಾರೆ ಬೇಗನೆದ್ದು ತೋಟದ ಕಡೆಗೆ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ಹಟ ಅಂದರೆ ಹಟದ ಸ್ವಭಾವ ಅವನದು; ಆ ವಯಸ್ಸಿನಲ್ಲಿ ಕೂಡ ತೆಂಗಿನ ಮರವನ್ನು ಹತ್ತಿ ಕಾಯಿಗಳನ್ನು ಇಳಿಸುತ್ತಿದ್ದ. ಅಷ್ಟು ಧೃಡಕಾಯನೂ ಆರೋಗ್ಯವಂತನೂ ಆಗಿದ್ದ.
ಗ್ರಾಮದಲ್ಲಿರುವ ಯಾವ ಮನೆಯಲ್ಲಾಗಲೀ, ಯಾರಿಗಾದರೂ ಸಮಸ್ಯೆ ಉಂಟಾದರೆ, ಅವರೆಲ್ಲರೂ ಅಜ್ಜಯ್ಯನ ಬಳಿಗೆ ಬಂದು ಸಲಹೆಯನ್ನು ಪಡೆಯುತ್ತಿದ್ದರು. ಅಜ್ಜಯ್ಯನ ಅನುಭವವೂ, ವಾಸ್ತವಿಕ ಜಾಣತನವೂ ಅಧಿಕವಾಗಿದ್ದುದರಿಂದ, ಕೊಟ್ಟ ಸಲಹೆಯನ್ನು ಇತರರು ಅನುಸರಿಸುತ್ತಿದ್ದರು. ವಯಸ್ಸು ಅರವತ್ತನ್ನು ಮೀರಿದ್ದರೂ ಅರುಳು-ಮರುಳಿನ ಛಾಯೆಯೂ ಇರಲಿಲ್ಲ. ಇತರರನ್ನು ಮರುಳು ಮಾಡುವ ಚಾಲೂಕು ಸಾಕಷ್ಟಿತ್ತು.
ವರ್ಷಾವಧಿ ಹಬ್ಬದ ಹಿಂದಿನ ದಿನ ತೆಂಗಿನಕಾಯಿಗಳನ್ನು ಇಳಿಸಲು ತಾನೇ ಮರ ಹತ್ತಿದ. ಅವತ್ತೇನು ಗ್ರಹಚಾರವೋ ಕಾಲು ಜಾರಿತು. ಮೂರಾಳು ಎತ್ತರದಿಂದ ದುಡುಂ ಅಂತ ಬಿದ್ದ. ನೆಲದ ಮೇಲಿದ್ದ ಬೆಣಚುಕಲ್ಲು, ಹಣೆಯ ಮೇಲಂಚಿಗೆ ತಾಕಿತು. ಧಾರಾಕಾರವಾಗಿ ರಕ್ತ ಹರಿಯಿತು. ಬಿದ್ದ ಶಬ್ದವನ್ನು ಕೇಳಿ ತೋಟದ ಆಳುಗಳು ಓಡೋಡಿ ಬಂದರು. ಜ್ಞಾನ ತಪ್ಪಿದ್ದ ಅಜ್ಜಯ್ಯನ ತಲೆಗೆ ಬಿಗಿಯಾಗಿ ಪಟ್ಟಿ ಕಟ್ಟಿ, ಮನೆಗೆ ಎತ್ತಿಕೊಂಡು ಬಂದು ಮಲಗಿಸಿದರು.
ಡಾಕ್ಟರನ್ನು ಕರೆಸಿದರು. ಆತ ಬಂದು ಪರೀಕ್ಷಿಸಿದಾಗ, ಹಣೆಯ ಮೇಲ್ಬಾಗದಲ್ಲಿ ತಲೆಯ ಚಿಪ್ಪು ಒಡೆದಿದೆ ಎಂದು ತಿಳಿಯಿತು. ಸೂಕ್ತ ಚಿಕಿತ್ಸೆಯನ್ನು ನಡೆಸಿದರು. ಪ್ರಜ್ಞೆಯು ಹಿಂತಿರುಗಲು ಮೂರು ದಿನಗಳಾದುವು. ಒಂದೆರಡು ವಾರಗಳಲ್ಲಿ ಗಾಯವೂ ಮಾಯವಾಯಿತು. ಹಳ್ಳ ಬಿದ್ದ ಗಾಯದ ಕಲೆಯೊಂದನ್ನು ಬಿಟ್ಟರೆ, ಅಜ್ಜಯ್ಯನ ಆರೋಗ್ಯ ಸ್ಥಿತಿಯು ಹಿಂದಿದ್ದಂತೆಯೇ ಸರಿಯಾಗಿತ್ತು.
ಎರಡು ಮೂರು ತಿಂಗಳುಗಳಾದ ಮೇಲೆ ಅಜ್ಜಯ್ಯನ ನಡವಳಿಕೆಯಲ್ಲಿ ತುಸು ಬದಲಾವಣೆಗಳು ಕಂಡುಬಂದುವು. ಎಂದಿನಂತೆ ಬೆಳಗಾಗುತ್ತಲೂ,