ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೪೫

ದೈನಂದಿನ ಪ್ರಾತರ್ವಿಧಿ ಮುಗಿಸಿ, ಊಟದ ಹಜಾರಕ್ಕೆ ತಿಂಡಿಯನ್ನು ತಿನ್ನಲು ಬರುತ್ತಿರಲಿಲ್ಲ. ಇದ್ದಲ್ಲಿಂದಲೇ ಮನೆಯವರನ್ನು ಕೂಗಿ 'ಇಷ್ಟು ಹೊತ್ತಾದರೂ, ಮುದುಕನಿಗೆ ಒಂದಿಷ್ಟು ತಿಂಡಿಯನ್ನು ಕೊಡಬಾರದೇನೇ' ಎಂದು ಸೊಸೆಯರನ್ನು ಗದರಿಸುತ್ತ, ಹಾಗೂ ಮಕ್ಕಳಂತೆ ಗೋಗರೆಯುತ್ತಲೂ ಇದ್ದ. ಸ್ನಾನಕ್ಕೆ ಹೋದಾಗ, ಕೊಳದಪ್ಪಲೆಯಲ್ಲಿ ಸಾಕಷ್ಟು ಬಿಸಿನೀರನ್ನು ತುಂಬಿಟ್ಟಿಲ್ಲ ಎಂದು ಹತ್ತು ಹದಿನೈದು ನಿಮಿಷಗಳು ರಂಪ ಮಾಡುತ್ತಿದ್ದ. ಅಜ್ಜಯ್ಯನನ್ನು ಸಮಾಧಾನಕ್ಕೆ ತರಲು ಬೆಳೆದ ಮಕ್ಕಳಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಯೋಗಕ್ಷೇಮವನ್ನು ವಿಚಾರಿಸಲು ಗ್ರಾಮದ ಹಿರಿಯರು ಬಂದರೆ, ಆಮಾತು ಈಮಾತು ಆಡುತ್ತಾ, ಹತ್ತು ವರ್ಷಗಳ ಹಿಂದೆ ತಾ ಮೈಸೂರಿಗೆ ಹೋದುದನ್ನು, ದಸರಾ ಪೋಲೀಸಿನವರನ್ನು ಬೆದರಿಸಿದುದನ್ನೂ ಬಣ್ಣಿಸತೊಡಗಿ, ಬೊಗಳೆ ಕೊಚ್ಚಲಾರಂಭಿಸಿದ. ಗಂಭೀರವಾಗಿ ಮಾತನಾಡುತ್ತಿದ್ದವ ಈಗ ಅಭಿನಯಗಳೊಂದಿಗೆ ನಾಟಕೀಯವಾಗಿ ಆಡಲು ಪ್ರಾರಂಭಿಸಿದ.

ಮಾಮೂಲಾಗಿ ಹಜಾಮತ್ತು ಮಾಡುವ ಕ್ಷೌರಿಕನು ಎಂದಿನಂತೆ ಬಂದ. ಅಜ್ಜಯ್ಯನಿಗೂ ಅವನಿಗೂ ಮೂವತ್ತು ವರ್ಷದ ಪರಿಚಯ. ಆ ದಿನ ಅಜ್ಜಯ್ಯನಿಗೆ ಕ್ಷೌರವನ್ನು ಮಾಡುವಾಗ, ಅಜ್ಜಯ್ಯ ಅಳ್ಳಾಡಿದುದರಿಂದ, ಕೆನ್ನೆಯ ಮೇಲೆ ಸ್ವಲ್ಪ ಚುರುಕ್ ಎನಿಸಿತು. ಐದಾರು ತೊಟ್ಟು ರಕ್ತವೂ ಬಿತ್ತು. ಅಷ್ಟಕ್ಕೆ ಅಜ್ಜಯ್ಯ ಎಷ್ಟು ಅವಾಂತರ ಎಬ್ಬಿಸಿದ ಅಂತ ! ಯಾರದಾದರೂ ಖಿನಿ ಆಗಿದ್ದರೂ ಅಷ್ಟು ಗಲಭೆ ಮಾಡುತ್ತಿರಲಿಲ್ಲ. ಮನೆಯ ಸೂರು ಮುರಿದು ಬೀಳುವ ಹಾಗೆ ಬೊಬ್ಬೆ ಇಟ್ಟ, ಕ್ಷೌರಿಕನ ಮುಖದಿಂದ ನೀರು ಇಳಿಸಿಬಿಟ್ಟ. ಆದರೆ ಇದೇ ಅಜ್ಜಯ್ಯ ಕೇವಲ ಒಂದು ವರ್ಷದ ಹಿಂದೆ ಕಬ್ಬನ್ನು ಕತ್ತರಿಸುತ್ತಿದ್ದ, ಹೆಬ್ಬೆರಳಿಗೆ ಭಾರಿ ಪೆಟ್ಟಾಗಿತ್ತು. ಸುತ್ತಲೂ ಇದ್ದ ಮನೆಯವರೆಲ್ಲಾ ಅಯ್ಯಯ್ಯೋ ಎಂದು ಬೊಬ್ಬಿರಿದರು. ಆದರೆ ಅಜ್ಜಯ್ಯ ಏನು ಮಾಡಿದ್ದ ಗೊತ್ತೆ ? ಒದ್ದೆ ಬಟ್ಟೆಯನ್ನು ಬಿಗಿಯಾಗಿ ಬೆರಳಿಗೆ ಕಟ್ಟಿ, ಕಬ್ಬು ಹೆಚ್ಚುವುದನ್ನು ಮುಂದುವರೆಸಿದ್ದ. ಅಂತಹ ಧೈರ್ಯಶಾಲಿ, ಇವತ್ತು ಕೆನ್ನೆಯಲ್ಲಿ ತುಸು ಚುರುಕ್ ಆದರೆ ಏನೆಲ್ಲಾ ಅವಾಂತರವನ್ನೆಬ್ಬಿಸಿದ.

ಹಾಗಿದ್ದ ಅಜ್ಜಯ್ಯ ಈಗ ನಾಟಕೀಯವಾಗಿ ಮಾತನಾಡುತ್ತ ; ಮಕ್ಕಳಂತೆ ಹಟಹಿಡಿದು ರಂಪ ಮಾಡುತ್ತ ; ಕೆಲವೊಮ್ಮೆ ಎಳೆಯ ಮಕ್ಕಳಂತೆ ಗೋಗರೆಯುತ್ತ; ತಾನು, ತಾನು ಮಾಡಿದ್ದು ಅತಿಶಯ ; ಇತ್ಯಾದಿ ಬೊಗಳೆ ಕೊಚ್ಚುತ್ತಾ ; ಕಂಡವರೆದುರು ನಗೆಪಾಟಲು ಆಗಲು ಕಾರಣವೇನು ? ಇಂತಹ ಪರಿವರ್ತನೆಯು ಹೇಗೆ ಆಯಿತು?