೧೪೭
ಅವ್ಯವಸ್ಥಿತವಾಗುತ್ತದೆ. ತಲೆಗೆ ತಗುಲಿದ ಆಘಾತವು ಹೊರಗಿನ ವಸ್ತುಗಳಿಂದ ಆಗುತ್ತದೆ. ದೇಹದ ಒಳಗಿರುವ ಅಂಗಗಳಲ್ಲಿ ದೋಷವು ಕಂಡುಬಂದರೂ, ಅವುಗಳಲ್ಲಿ ಕೆಲವು ಮೆದುಳಿಗೆ ಆಘಾತವನ್ನುಂಟುಮಾಡುತ್ತವೆ. ರೋಗಾಣುಗಳಿಂದ ಉಂಟಾಗುವ ಮೆನಿಂಜೈಟಿಸ್, ಎನ್‌ಕೆಫಲೈಟಿಸ್, ಇಂತಹ ಬೇನೆಗಳು ಮೆದುಳಿನ ವ್ಯವಸ್ಥೆಯನ್ನು ಕೆಡಿಸುತ್ತವೆ. ಮೆದುಳಿಗೆ ಸರಬರಾಜಾಗುವ ರಕ್ತದ ಪ್ರಮಾಣವು ಕಡಿಮೆಯಾದರೂ ಮನಸ್ಸು ಅವ್ಯವಸ್ಥಿತವಾಗುತ್ತದೆ. ಈಗಾಗಲೇ ತಿಳಿಸಿದಂತೆ ಮೆದುಳಿನಲ್ಲಿ ಬೆಳೆಯುವ ಗಡ್ಡೆಗಳೂ ಇದೇ ಫಲಿತಾಂಶವನ್ನು ನೀಡುತ್ತವೆ. ಈ ಎಲ್ಲ ಕಾರಣಗಳಿಂದ ಮುದುಕರ ಮೆದುಳು ಮಕ್ಕಳ ಅಪೂರ್ಣ ಮೆದುಳಿನಂತೆ ಆಗಿಬಿಡುತ್ತದೆ.
ಸುಮಾರು ಐವತ್ತರ ಪ್ರಾಯದವನೊಬ್ಬ 'ಅಸಾಧ್ಯವಾದ ತಲೆನೋವು ಬಡಿಯುತ್ತದೆ, ನನಗೆ. ಇಂತಹ ತಲೆಯನೋವು ಬಂದಿದ್ದರೆ ಯಾವ ಬ್ರಹ್ಮಾದಿ ಮಗನೂ ಬದುಕುತ್ತಿರಲಿಲ್ಲ. ಮನೋಧೈರ್ಯವಿರುವುದರಿಂದ ನಾನು ತಡೆದುಕೊಂಡಿದ್ದೇನೆ. ಎಂತಹ ಡಾಕ್ಟರುಗಳೋ ನೀವು.' ಎಂದು ರೇಗಿ ಅಲವತ್ತುಕೊಳ್ಳುತ್ತಿದ್ದ. ಎರಡು ಮೂರು ದೊಡ್ಡ ಆಸ್ಪತ್ರೆಗಳಲ್ಲಿ ಅತಿಸೂಕ್ಷ್ಮವಾದ ಪರೀಕ್ಷೆಯನ್ನು ಮಾಡಿದ್ದರು. ತಲೆನೋವನ್ನು ತರುವ ಯಾವ ಕಾರಣವೂ ಸ್ಪಷ್ಟವಾಗಲಿಲ್ಲ. ನಾಟಕೀಯವಾಗಿ ಅವ ತನ್ನ ನೋವನ್ನು ವರ್ಣಿಸುತ್ತಿದ್ದುದರಿಂದ; ತಾನು ಅನುಭವಿಸುತ್ತಿರುವ ತಲೆ ನೋವು ಇನ್ನಾರಿಗೂ ಬಂದಿರಲಿಕ್ಕಿಲ್ಲ ಎಂದು ಅವ ಬೊಗಳೆ ಕೊಚ್ಚುತ್ತಿದ್ದುದರಿಂದ ; ಹಾಗೂ ನಡೆಸಿದ ಪರೀಕ್ಷೆಗಳಿಂದ ಯಾವ ಬೇನೆಯ ಸುಳಿವೂ ಸಿಗದುದರಿಂದ ; ಇವನ ಅಟಾಟೋಪವೆಲ್ಲವೂ ಪ್ರಾಯಶಃ ಹಿಸ್ಟಿರಿಕಲ್ ಇರಬಹುದು ಎಂದು ಪರೀಕ್ಷಿಸಿದ ತಜ್ಞರೆಲ್ಲರೂ ಸಂಶಯಪಟ್ಟರು.
ತಿಂಗಳಿಗೊಮ್ಮೆ ಹೊಸ ತಜ್ಞರ ಬಳಿ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಲೇ ಇದ್ದ. ಯಾವ ಪ್ರಯೋಜನವೂ ದೊರಕಲಿಲ್ಲ. ಮಿಕ್ಕಂತೆ, ಈ ಕಾಲಾವಧಿಯಲ್ಲಿ ಉಣ್ಣುಕೊಂಡು, ತಿಂದುಕೊಂಡು, ಅವ ಆರೋಗ್ಯವಾಗಿಯೇ ಇದ್ದ. ಅವನ ದೇಹದ ತೂಕವು ಕಡಿಮೆಯಾಗಲಿಲ್ಲ. ಕೆಲಸವನ್ನು ಗೊಣಗುತ್ತಾದರೂ ಮಾಡುತ್ತಿದ್ದ.
ಆರೇಳು ತಿಂಗಳುಗಳಾದ ಮೇಲೆ ಯಥಾ ಪ್ರಕಾರ ಮಾಡಿದ ಪರೀಕ್ಷೆಯಿಂದ ಮೆದುಳಿನ ಮುಂಭಾಗದಲ್ಲಿ ಸಣ್ಣ ಗಡ್ಡೆ ಬೆಳೆಯುತ್ತಿರಬಹುದು ಎಂದು ಅನುಮಾನವು ಮೂಡಿತು. ಅದನ್ನು ಖಚಿತಪಡಿಸುವುದಕ್ಕಾಗಿ ಇತರ ವಿಶೇಷ ಪರೀಕ್ಷೆಗಳನ್ನು ಮಾಡಲಾಯಿತು. ಅನುಮಾನವು ಖಚಿತವಾಯಿತು. ಶಸ್ತ್ರ ಚಿಕಿತ್ಸೆಯನ್ನು ಮಾಡಿದಾಗ ಸಣ್ಣಗಡ್ಡೆಯೊಂದು ಇತ್ತು. ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವೂ