ಮನಮಂಥನ
'ಮೂರು ಮಿಳ್ಳೆ ತುಪ್ಪವನ್ನು ಹೆಚ್ಚಾಗಿ ಹಾಕಿ, ಅವರೇಕಾಯಿ ಹುಳಿಯನ್ನು ಅನ್ನದ ಜತೆಗೆ ಬಡಿಸಿದರೆ, ಸೊಸೆ ಮಹರಾಯ್ತಿ ಅರ್ಧ ತಿಂದು ಎದ್ದು ಬಿಡುತ್ತಾಳಲ್ಲೀ' ಎಂದು ಪಕ್ಕದ ಮನೆಯಾಕೆಗೆ ಚಾಡಿ ಹೇಳುವ ಅತ್ತೆಯು, ತಾನು ಬಡಿಸಿದ ರೀತಿಯನ್ನು ವಿವರಿಸುವುದಿಲ್ಲ. ನೈಜವಾದ, ಹೃದಯದಿಂದ ಹರಿದು ಬಂದ ಪ್ರೇಮ ಆದರಗಳು ನಮ್ಮ ಸಮಾಜದ ಇಂದಿನ ಸಂಸಾರಗಳಲ್ಲಿ ಸ್ವಲ್ಪ ವಿರಳ. ಹೀಗನ್ನುವಾಗ ನನ್ನ ಅನುಭವವು, ರೋಗಿಗಳಿರುವ ಸಂಸಾರಗಳಿಗೆ ಮಿತಿಗೊಂಡಿದೆ, ಎಂಬುದನ್ನು ಮರೆತಿಲ್ಲ.
ಬೂಟಾಟಿಕೆಯ ಉಪಚಾರದಿಂದ ಎಳ್ಳಷ್ಟೂ ಪ್ರಯೋಜನವಿಲ್ಲ. ಎದೆಯಾಳದಿಂದ ಎರಡು ಒಳ್ಳೆಯ ಮಾತುಗಳನ್ನಾಡಿದರೆ ಎಷ್ಟೋ ಪ್ರಯೋಜನವಾಗುತ್ತದೆ ; ಎಂಬುದನ್ನು ಎಲ್ಲರೂ ಅರಿಯಬೇಕು.
ಮಾನಸಿಕವಾದ ಬೇನೆಯಿದು ಎಂದು ವೈದ್ಯರು ಮನೆಯ ಹಿರಿಯರಿಗೆ ಹೇಳಿದಾಗ, ಅವರುಗಳು ಬಹುಪಾಲು ಅಪಾರ್ಥ ಮಾಡಿಕೊಂಡು, ರೋಗಿಯ ದೇಹಾರೋಗ್ಯವು ಚೆನ್ನಾಗಿಯೇ ಇದೆ. ಆದರೆ ಮನಸ್ಸಿನಲ್ಲಿ ವೈರತ್ವವನ್ನಿರಿಸಿಕೊಂಡು, ಬೇಕು ಬೇಕೂ ಅಂತ ರೋಗದ ಸೋಗು ಹಾಕುತ್ತಿದ್ದಾಳೆ ಎಂದುಕೊಳ್ಳುತ್ತಾರೆ. ನಟನೆಯನ್ನು ಹೂಡಿದವರಿಗೆ ಶಿಕ್ಷೆಯನ್ನು ಕೊಡಬೇಕು ; ಆಗ ಅವರಿಗೆ ಗುಣವಾಗುತ್ತದೆ ಎಂದವರ ಮೂಢ ಅಭಿಪ್ರಾಯ.
ಹಿಸ್ಟಿರಿಯಾ ಪ್ರದರ್ಶನ ರೋಗಿಗಳು ಖಂಡಿತವಾಗಿಯೂ ಬೇಕು ಬೇಕೂಂತ ನಟಿಸುವುದಿಲ್ಲ. ಆಳ ಮನಸ್ಸಿನಲ್ಲಿ ನಡೆಯುವ ವಿಚಿತ್ರಗಳು, ಅವರ ಮನಸ್ಸಿಗೆ ಕಂಡುಬರುವುದೇ ಇಲ್ಲ. ಅವರ ನರಳುವಿಕೆಯಾಗಲೀ, ಸಂಕಟಪಡುವುದಾಗಲೀ ಎಳ್ಳಷ್ಟೂ ಸುಳ್ಳಲ್ಲ. ಅಂತಹವರನ್ನು, ದಿಟವಾಗಿ ನರಕಯಾತನೆಯನ್ನು ಅನುಭವಿಸುತ್ತಿರುವವರನ್ನು, ಶಿಕ್ಷೆಗೆ ಗುರಿಪಡಿಸಿದರೆ, ಅಂಕೆಗೆ ಒಳಪಡಿಸಿದರೆ, ತೋರಮನನ್ನೂ ಮೊಂಡು ಬೀಳುತ್ತದೆ. ನನ್ನಿಂದ ನನ್ನ ನಡವಳಿಕೆಯ ಮೇಲೆ ಹತೋಟಿ ತಪ್ಪಿಹೋಗಿದೆಯೋ ಎನ್ನುವ ಅಪಾರ ಭಯವೂ ಮುಚ್ಚಿಕೊಳ್ಳುತ್ತದೆ. ಅನಂತರ ಹಿಸ್ಟಿರಿಯಾ ಪ್ರದರ್ಶನವು ಬೇರೂರಿ ಬೆಳೆಯಲಾರಂಭಿಸುತ್ತದೆ.
ಆಕಸ್ಮಿಕವಾಗಿ 'ಈ ರೋಗಿಗೆ ಮಾನಸಿಕ ಬೇನೆ, ದೇಹದಲ್ಲಿ ಯಾವ ಕುಂದೂ ಇಲ್ಲ' ಎಂದು ಡಾಕ್ಟರು ಹೇಳುವುದು ಯಥಾರ್ಥವೇ, ಆದರೆ ಅದನ್ನು ಬಲು ಸುಲಭವಾಗಿ ಮನೆಯ ಹಿರಿಯ ಮಂದಿ ಅಪಾರ್ಥಮಾಡಿಕೊಳ್ಳುತ್ತಾರೆ. ಒಂದು ದೃಷ್ಟಿಯಿಂದ ಡಾಕ್ಟರು ಅಂದುದು, ದಿಟವಾಗಿ 'ಶಾಪ'ವಾಗುತ್ತದೆ.
'ನೀವು ಹೇಳಿದ್ದೆಲ್ಲಾ ತಿಳೀತು, ಡಾಕ್ಟರ್ ಸಾಹೇಬ್ರಾ ; ನಮ್ಮ ಸೊಸೀನ