೧೫೯
ಆದರೆ ಅದೇ ಮನಸ್ಸಿನಲ್ಲಿ ಮೂಡಿದ ಅನುಮಾನವು, ಒದ್ದು, ಜುಲುಮನ್ನು ಹೂಡಿ, ತಿರುಗಿ ನೋಡಿಕೊಂಡು ಬರುವಂತೆ ಬಲವಂತ ಮಾಡುತ್ತದೆ. ಏನಿಲ್ಲ. ಅಂದರೂ ಹತ್ತು ಹನ್ನೆರಡುಸಾರಿ ಹೀಗೆ ಮಾಡಬೇಕಾಗುತ್ತದೆ.
ಅಡಿಗೆ ಮಾಡಿ ಇಡುತ್ತೇನೆ. ತತ್‌ಕ್ಷಣ ಮುಚ್ಚಳವನ್ನು ಹಾಕದೇ ಇದ್ದರೆ, ಕುಷ್ಠರೋಗದವ ಬಂದು ಅಡಿಗೆಯನ್ನು ಮೂತ್ರಮಾಡಿ ಕೆಡಿಸಿ ಬಿಡುತ್ತಾನೇನೋ ಎಂಬ ಭಯ ಹುಟ್ಟುತ್ತದೆ.
ಬಾಗಿಲುಗಳನ್ನು ಹಾಕಿದ್ದೀನಿ ಎಂದು ಧೈರ್ಯಬಂದರೂ, ಕಿಟಕಿಗಳು ತೆರೆದಿರುತ್ತಲ್ಲಾ ; ಅದರ ಮೂಲಕ ಅವ ಬಂದು ಬಿಟ್ಟರೆ, ಅಡಿಗೆಯನ್ನು ಹಾಳುಮಾಡಿ ಬಿಟ್ಟರೆ ? ಎನ್ನುವ ಶಂಕೆಯು ಬರುತ್ತದೆ. ಇದು ಹೇಗೆ ಸಾಧ್ಯ ಎಂದು ಒಂದುಕ್ಷಣ ಅನ್ನಿಸುತ್ತೆ. ಆದರೆ ಅದೇ ಕ್ಷಣದಲ್ಲಿ ಕಿಟಕಿಬಾಗಿಲು ಹಾಕಿ ಬಂದೋಬಸ್ತು ಮಾಡು ಎಂದು ತೀಕ್ಷ್ಮವಾಗಿ ಬಲವಂತ ಮಾಡುತ್ತದೆ. ಕಿಟಕಿಯನ್ನು ಮುಚ್ಚುತ್ತೇನೆ. ಆದರೆ ಒಮ್ಮೊಮ್ಮೆ ಮುಚ್ಚಳವನ್ನು ಪಾತ್ರೆಗೆ ಹಾಕಲು ಸ್ವಲ್ಪ ವಿಳಂಬವಾಗುತ್ತದೆ. ಆಗ ಮಾಡಿದ್ದ ಅಡಿಗೆಯನ್ನೆಲ್ಲಾ ಬಚ್ಚಲಿಗೆ ಎಸೆದು, ತಿರುಗಿ ಎಚ್ಚರದಿಂದ ಅಡಿಗೆಯನ್ನು ಮಾಡುತ್ತೇನೆ. ಒಬ್ಬಳೇ ಊಟಕ್ಕೆ ಕೂಡುವುದಕ್ಕೂ ಭಯವಾಗುತ್ತೆ. ಆದ್ದರಿಂದ ಮಧ್ಯಾಹ್ನದ ಊಟವನ್ನು ಎಷ್ಟೋ ದಿನಗಳು ಮಾಡುವುದೇ ಇಲ್ಲ. ಆರಳು ಅವಲಕ್ಕಿಯನ್ನು ಆಗಾಗ್ಗೆ ತಿಂದು ಸುಮ್ಮಗಾಗುತ್ತೇನೆ. ದಿನವೆಲ್ಲಾ ಹೀಗೆ ಥರಪರಗುಟ್ಟುತ್ತಾ ನರಳುತ್ತೇನೆ.
ಸಂಜೆಯ ಹೊತ್ತಿಗೆ ಗಂಡ ಮನೆಗೆ ಬಂದಮೇಲೆ, ಧೈರ್ಯ ಬರುತ್ತದೆ. ಅವರಿರುವಾಗ ಕುಷ್ಠರೋಗದವನು ಬರುವುದಿಲ್ಲ ಎನ್ನುವ ಧೈರ್ಯ ಮೂಡುತ್ತದೆ. ಗೆಲುವು ಮನಸ್ಸನಲ್ಲಿ ಮೂಡುತ್ತದೆ. ಅವರೊಂದಿಗೆ ಹೊಟ್ಟೆ ತುಂಬಾ ಉಣ್ಣುತ್ತೇನೆ. ನಗು ನಗ್ತಾ ಇದ್ದೀನಿ. ಅವರನ್ನು ನೀವು ಕಂಡೀರಲ್ಲಾ. ಮಾತು ಮಾತಿಗೆ ನಗಿಸುತ್ತಲೇ ಇರುತ್ತಾರೆ.
ಹೀಗಾಗುತ್ತದೆ, ಹೀಗೆ ಅನುಮಾನದ ಪಿಶಾಚಿ ಹಿಡಿದಿದೆ. ಈ ರೀತಿ ನರಳುತ್ತಿದ್ದೇನೆ ಎಂದು ಯಾರ ಹತ್ತಿರವೂ ಹೇಳಿಕೊಳ್ಳಲು ನಾಚಿಕೆಯಾಗುತ್ತೆ. ಗಂಡನ ಬಳಿ ಹೇಳಿಕೊಳ್ಳಲೂ ನಾಚಿಕೆಯಾಗುತ್ತೆ. ಓದಿದ ಹುಡುಗಿ ನೀನು, ಕಿಟಕಿಯೊಳಗಿಂದ ಯಾವನು ಬರುಕ್ಕಾಗುತ್ತೆ ಎಂದು ನಕ್ಕುಬಿಡ್ತಾರೆ. ನಂಟರಿಷ್ಟರೆದುರಿಗೆ ಹೇಳುವುದಕ್ಕೂ ಅವರು ಹೇಸುವುದಿಲ್ಲ. ಆದ್ದರಿಂದ ಯಾರಿಗೂ ಹೇಳಿಲ್ಲ.