ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬೦

ಮನಮಂಥನ

'ತುಂಬಾ ವಿಶ್ವಾಸದಿಂದ ನೀವು ಕೇಳಿದಿರಿ. ನನ್ನ ಕಷ್ಟವನ್ನು ನಾಚಿಕೆಯಿಲ್ಲದೇ ಹೇಳಿಬಿಟ್ಟೆ, ನಗಬೇಡಿ ಡಾಕ್ಟರೇ' ಎಂದು ಆಕೆ ಕೊರಗುವ ದೀನ ದನಿಯಲ್ಲಿ ವರದಿ ಒಪ್ಪಿಸಿದಳು.

'ನಾನ್ಯಾಕೆ ನಗಲಿ, ಮಗಳೇ ! ಇದು ಒಬ್ಸೆಷನಲ್ ಬೇನೆ, ಭಯಂಕರವಾಗಿ ಕಾಡುತ್ತದೆ. ನಿನ್ನ ಗಂಡನೊಡನೆ ನಾನು ಮಾತನಾಡುತ್ತೇನೆ. ಆತನನ್ನು ನನ್ನ ಬಳಿಗೆ ನಾ ಕರೆದೆ ಅಂತ ಹೇಳಿ ಕಳುಹಿಸಿಕೊಡು' ಎಂದು ಹೇಳಿ, ಕಳಿಸಿಕೊಟ್ಟೆ

ಈ ರೀತಿ ಇಂತಹ ಬೇನೆಯಿಂದ ನರಳುವವರಿಗೆ, ಇತರರಿಗೆ ತಮ್ಮ ಗೋಳನ್ನು ಹೇಳಿಕೊಳ್ಳಲು ವಾಮಾನಿಕೆ ಮತ್ತು ನಾಚಿಕೆ, ಗಂಡ ಮನೆಯಲ್ಲಿರುವಾಗ ಗೆಲುವಾಗಿ ನಗುನಗುತ ಹೆಂಡತಿಯು ಇರುವುದರಿಂದ, ಅವಳ ಗೋಳು ಗಂಡನಿಗೆ ತಿಳಿಯುವುದೇ ಇಲ್ಲ. ಅಂತಹ ಅನುಮಾನವೂ ಬರುವುದಿಲ್ಲ. ಗಂಡನ ಬಳಿ ಹೇಳಿಕೊಳ್ಳುವುದಕ್ಕೆ ನಾಚಿಕೊಂಡವರು, ವೈದ್ಯನ ಬಳಿಗೆ ಹೋಗಿ ಹೇಳಿಕೊಳ್ಳುತ್ತಾರೆಯೇ? ತಮ್ಮನ್ನು ಕಾಡುವ ಅನುಮಾನ ಮತ್ತು ಭ್ರಮೆಗಳು ಸುಳ್ಳು ಎಂದು ಅವರಿಗೂ ಚೆನ್ನಾಗಿ ತಿಳಿದಿರುತ್ತದೆ. ಆದರೆ ಅನುಮಾನಗಳಿಗೆ ಅನ್ವಯಿಸುವಂತೆ ನಡೆದುಕೊಳ್ಳಲೇಬೇಕು? ಇಲ್ಲದಿದ್ದರೆ ತುಂಬಾ ಕೋಪ, ಅಸಮಾಧಾನ, ಅಶಾಂತಿಗಳು ಉಂಟಾಗುತ್ತವೆ. ಆದ್ದರಿಂದ ಹಾಗೆ ನಡೆದುಕೊಳ್ಳುತ್ತಾರೆ. ಹೀಗಾಗುತ್ತೆ ಎಂದು ಹೇಳಿಕೊಂಡರೆ ನಗೆಪಾಟಲಿಗೆ ಗುರಿಯಾಗುತ್ತೇವೆ ಎಂಬ ಹೆದರಿಕೆಯೂ ಇರುತ್ತದೆ. ಆದಕಾರಣ ಸಾಮಾನ್ಯವಾಗಿ ಹೇಳಿಕೊಳ್ಳುವುದಿಲ್ಲ.

ಆಕೆಯ ಗಂಡ ಬಂದು ನನ್ನನ್ನು ಕಂಡ, 'ಅಯ್ಯಾ ! ನಿನ್ನ ಹೆಂಡತಿಗೆ ಒದ್ದೆಷನಲ್ ಬೇನೆಯು ಬಡಿದಿದೆ. ಹೀಗೆ ಹೀಗೆ ಅವಳು ನರಳುತ್ತಿದ್ದಾಳೆ. ಆಕಸ್ಮಾತ್ತಾಗಿ ನನಗೆ ತಿಳಿದು ಬಂತು. ಅಗತ್ಯವಾಗಿ ಚಿಕಿತ್ಸೆಯನ್ನು ಮಾಡಿಸು, ಮನೋವೈದ್ಯರಿಂದ. ನೆಂಟರು ಯಾರಾದರೂ ಬಂದು ಮನೆಯಲ್ಲಿ ಜತೆಗಿದ್ದರೆ, ನರಳುವುದು ತುಸು ಕಡಿಮೆಯಾಗಬಹುದು' ಎಂದು ಸಲಹೆ ಮಾಡಿದೆ.

“ಅಯ್ಯೋ, ಇದೆಲ್ಲಾ ಭೂತಚೇಷ್ಟೆ, ಡಾಕ್ಟರೇ ! ನಮ್ಮೂರಿನ ಕಡೆ ಭೂತಗಳು ಹೀಗೆ ಕಾಡುವುದು ಸಾಮಾನ್ಯ, ಅವಳ ಸೋದರಮಾವನ ಚಿಕ್ಕಪ್ಪನಿಗೆ ಕುಷ್ಠ ರೋಗವಿತ್ತು. ಇವಳಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ, ಇವಳಿದ್ದ ಮನೆಯಲ್ಲಿ ಅವ ತೀರಿಕೊಂಡ. ಇಪ್ಪತ್ತು ವರ್ಷಗಳ ಮೇಲೆ ಅವನ ಪಿಶಾಚಿಯು ಬಂದು ಏಕೆ ಕಾಡುತ್ತದೆ? ನಮ್ಮೂರ ಕಡೆ ಜಾಣ ಮಂತ್ರವಾದಿಗಳು ಇದ್ದಾರೆ. ಪೂಜೆ ಹಾಕಿ ಇಂತಹ ಭೂತಗಳನ್ನು ಬಿಡಿಸುತ್ತಾರೆ. ಇದಕ್ಕೆ ವೈದ್ಯ ಚಿಕಿತ್ಸೆಯು ಅಗತ್ಯವೇ