ಮನಮಂಥನ
ಆಚರಣೆಯು ಅತಿಯಾಗಿರಲಿಲ್ಲ. ಮೂರು ದಿನಗಳು ಮೂಲೆಯಲ್ಲಿ ಕೂಡುವುದೂ ಇರಲಿಲ್ಲ. ಹೊಲೆ ಮನೆ, ಮಡಿ ಎನ್ನುವ ಕಾಳಜಿಯೂ ಇರಲಿಲ್ಲ.
ಇಂತಹ ಪರಿಸ್ಥಿತಿಯಿದ್ದ ಮನೆಯಲ್ಲಿ ಒಂದು ದಿನ ಅಡಿಗೆ ಮನೆಯಿಂದ ಬಂದ ಅತ್ತೆಯು ಸೊಸೆಯ ಹತ್ತಿರವಿದ್ದ ಟವಲನ್ನು ತೆಗೆದುಕೊಂಡು ಕೈ ಒರೆಸಿಕೊಂಡರು. 'ಅಯ್ಯೋ, ಇದೇನು ಹೀಗೆ ಮಾಡಿಬಿಟ್ಟಿರಿ ! ಮುಸುರೆ ಕೈಯಲ್ಲಿ ಟವಲನ್ನು ಮುಟ್ಟಿ ಬಿಟ್ಟಿರಲ್ಲಾ' ಎಂದು ಅನಸೂಯ ಅತ್ಯಾತಂಕದಿಂದ ಚೀರಿದಳು. 'ಇದ್ಯಾತರ ಮುಸುರೆಯೇ ; ಎಂತಹ ಮುಸುರೆಯೇ, ಅನ್ನವನ್ನು ಮಾಡೇ ಇಲ್ಲವಲ್ಲೇ' ಎಂದು ಅತ್ತೆಯು ಎಷ್ಟೋ ಹೇಳಿದಳು. ಅನಸೂಯಳಿಗೆ ಸಮಾಧಾನವಾಗಲಿಲ್ಲ. ಬಾಣಂತಿಯಾಗಿದ್ದರೂ ಎದ್ದು, ಆ ಟವಲನ್ನು ಒಗೆದು ಹರವಿ ಹಾಕಿದಳು.
ಅವತ್ತಿನಿಂದ ಮುಸುರೆ ಪಿಶಾಚಿಯು ಕಾಡತೊಡಗಿತು. ಅನ್ನವನ್ನು ತಿಂದರೆ ಮುಸುರೆಯು ಕೈಗೆ ಅಂಟಿಕೊಂಡು ಬಿಡುತ್ತದೆ.ಎಷ್ಟು ತೊಳೆದರೂ ಹೋಗುವುದಿಲ್ಲ. ಎಂಬ ತೀವ್ರ ಕಳವಳವು ಶುರುವಾಯಿತು. ಆದುದರಿಂದ ಒಣಗಿದ ಚಪಾತಿಯನ್ನು ತಿನ್ನಲಾರಂಭಿಸಿದಳು. ಅಹೋರಾತ್ರಿ ಒಂದೇ ಭಯ ; ಯಾವುದು ಎಲ್ಲಿ ಮುಸುರೆಯಾಗಿ ಬಿಡುತ್ತದೋ ಎನ್ನುವ ಭಯ. ಭಯಂಕರವಾದ ಆತಂಕದಿಂದ ಅನಸೂಯಳ ಮುಖದಲ್ಲಿ ಹುಬ್ಬು ಗಂಟಿಕ್ಕಿಕೊಂಡಿರುವುದು ಸ್ಥಿರವಾಯಿತು. ಕೆನ್ನೆಗಳ ಮೇಲೆಲ್ಲಾ ಉದ್ದುದ್ದ ಗೆರೆಗಳು ಮೂಡಲಾರಂಭಿಸಿದುವು. ದುಂಡು ದುಂಡಾಗಿದ್ದ ಅನಸೂಯ ಕೇವಲ ಆರೇಳು ತಿಂಗಳುಗಳಲ್ಲಿ ಸಣಕಲ ಕಡ್ಡಿಯಾದಳು.
ಯಾರಾದರೂ ಸ್ನೇಹಿತರು ಮನೆಗೆ ಬಂದರೆ, ಅವರೆದುರಿಗೆ ಹೇಗೋ ಪ್ರಾಣವನ್ನು ಬಿಗಿಹಿಡಿದುಕೊಂಡು, ಸ್ವಸ್ಥವಾಗಿರುವವಳಂತೆಯೇ ನಡೆದುಕೊಳ್ಳುತ್ತಿದ್ದಳು. ಬಂದವರು ಹೊರಗೆ ಹೋದಕೂಡಲೇ, ಅವರು ಕುಳಿತಿದ್ದ ಕುರ್ಚಿ, ನಡೆದಿದ್ದ ಜಾಗ, ಮುಟ್ಟಿದ್ದ ಬಟ್ಟೆ, ತಾಕಿದ್ದ ಬಾಗಿಲ ಪರದೆಗಳು, ಇವೆಲ್ಲವನ್ನೂ ಒದ್ದೆ ಬಟ್ಟೆಯಲ್ಲಿ ಒರೆಸುತ್ತಿದ್ದಳು. ಬೀದಿಯಲ್ಲಿ ನಡೆದು ಬಂದಿದ್ದ ಅವರು ಎಂಜಲೆಲೆಯನ್ನು ತುಳಿದಿರಬಹುದಲ್ಲ. ಹಾಗಾಗಿ ಮುಸುರೆ ಅಂಟಿಕೊಂಡಿರುತ್ತಲ್ಲಾ. ಆ ಮುಸುರೆ ತನ್ನ ಮನೆಯಲ್ಲೂ ಸೋಂಕಿರುತ್ತಲ್ಲಾ ! ಇದೇ ಅನಸೂಯಳ ಮನಸ್ಸಿನ ವಿಚಾರ ಸರಣಿ, ದಿನಕ್ಕೆ ಇಪ್ಪತ್ತು ಮೂವತ್ತು ಬಾರಿ ಹೀಗೆ ಮಾಡಲಾರಂಭಿಸಿದರೆ ದೇಹದ ಆರೋಗ್ಯವು ಶಿಥಿಲವಾಗದೆ ಇರುತ್ತದೆಯೇ ? ಇಪ್ಪತ್ತು ಪೌಂಡು ತೂಕವು ಆರೇಳು ತಿಂಗಳಿನಲ್ಲಿ ಇಳಿಯಿತು.