ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಒಬ್ಸೆಷನಲ್ 'ಬೇನೆಗಳು

೧೬೭

ಅಡಿಗೆಯು ಮುಗಿಯುತ್ತಿತ್ತು. ತಾನೇ ತಂದು ನನಗೆ ಬಡಿಸುತ್ತಿದ್ದಳು. ಆಮೇಲೆ ಊಟದ ಮನೆಯನ್ನೂ ನಾಲ್ಕಾರು ಬಾರಿ ಸಾರಿಸುವುದಕ್ಕೆ ಪ್ರಾರಂಭಿಸಿದಳು. 'ಹೀಗೆಲ್ಲಾ ಕೆಲಸ ಮಾಡಿದರೆ ದಣಿಯುತ್ತಿ, ಕ್ಷಯ ಬಂದು ಬಿಡಬಹುದು' ಎಂದು ಬೈದೆ. 'ಮನೆಯಲ್ಲಿ ಮಡಿ ಮಾಡಿದರೆ, ಮಕ್ಕಳು ಮತ್ತು ನಿಮ್ಮನ್ನು ದೇವರು ಕಾಯುತ್ತಾನೆ' ಎಂದಳು. ಆದರೂ ಜುಲುಂ ಮಾಡಿ ಅಡಿಗೆಯ ಮನೆಯಲ್ಲಿಯೇ ಊಟಕ್ಕೆ ಎರಡು ದಿನ ಕುಳಿತೆ. ತಟ್ಟೆ ಇಟ್ಟಿದ್ದ ಜಾಗವನ್ನು ಸಾರಿಸಿದರಾಯಿತು' ಎಂದೆ. ಎದುರು ಮಾತನಾಡಲಿಲ್ಲ. ಆದರೆ ಕೋಪವು ಮುಖದಲ್ಲಿ ಸ್ಪಷ್ಟವಾಗಿ ಕೆರಳಿತ್ತು. ಧುಮುಗುಡುತ್ತಿತ್ತು. ಮೂರನೆಯ ದಿನ ಅವಳಿಗೆ ಹೊಟ್ಟೆಶೂಲೆಯು ಬಂತು. ಡಾಕ್ಟರು ಬಂದು ನೋಡಿದರು. ಅಪೆಂಡಿಸೈಟಿಸ್ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ತತ್‌ಕ್ಷಣ ಆಪರೇಷನ್‌ ಮಾಡಿಸುವುದು ಅತ್ಯಗತ್ಯ ಎಂದರು.

'ಮನೆಯಲ್ಲಿ ಮಡಿ ಕೆಟ್ಟು ಹೋಯಿತು. ಆದ್ದರಿಂದ ಪರಿಣಾಮ ಶೂಲೆಯೂ ಬಂತು. ಆಸ್ಪತ್ರೆಯೂ ಬೇಡ, ಆಪರೇಷನ್ನೂ ಬೇಡ. ಸಾಯುವುದಾದರೆ ಮನೆಯಲ್ಲೇ ಸಾಯುತ್ತೇನೆ” ಎಂದು ಹಠ ಹಿಡಿದಳು. ಭಯಂಕರ ಶೂಲೆಯಿಂದ ನರಳುತ್ತಿದ್ದಳು, ಮುಡುಪು ಕಟ್ಟಿಟ್ಟು, ಮಲಗಿದಳು. ಗಂಗಾಜಲವೊಂದನ್ನು ಬಿಟ್ಟು ಇನ್ನಾವುದನ್ನೂ ಕುಡಿಯಲಿಲ್ಲ. ಎರಡು ದಿನಗಳ ನಂತರ ಗುಣ ಹೊಂದಿ ಎದ್ದು ಕುಳಿತಳು. ಇನ್ನೆರಡು ದಿನಗಳಲ್ಲಿ ಮನೆಗೆಲಸವನ್ನು ಮಾಡತೊಡಗಿದಳು.

ಅವತ್ತಿನಿಂದ ನೋಡಪ್ಪಾ ! ಮಡಿಯು ಅತಿಯಾಯಿತು. ನಾನು ವಿರೋಧಿಸುವುದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆದ್ದರಿಂದ ವಿರೋಧಿಸುವುದನ್ನೇ ಬಿಟ್ಟೆ. ಎಷ್ಟೋ ಬಾರಿ ಬೇಜಾರಾಗುತ್ತೆ. ಕಳೆದ ಏಳೆಂಟು ವರ್ಷಗಳಿಂದ ಬೆಳಗಿನ ಝಾಮ ಅಡಿಗೆಮನೆಯನ್ನು ಸೇರಿದರೆ ರಾತ್ರಿ ಹನ್ನೊಂದು ಹನ್ನೆರಡಕ್ಕೇ ಹೊರಕ್ಕೆ ಬರುವುದು. ದಿನಕ್ಕೆ ನಾಲೈದು ಸರ್ತಿ ಸ್ನಾನ ಮಾಡುತ್ತಾಳೆ. ಮೈಲಿಗೆ ಆಯಿತು ಅಂತ ಅನುಮಾನ ಬಂದರೆ ಅಡಿಗೆಯ ಮನೆಯನ್ನು ಸಾರಿಸುತ್ತಾಳೆ. ಮಕ್ಕಳಿಗೆ ಊಟ ಹಾಕಿ ಶಾಲೆಗೆ ಕಳಿಸಬಾರದೇನೇ ? ಎಂದರೆ, “ಅಷ್ಟು ಹೊತ್ತಿಗೆ ಮಡಿಯಲ್ಲಿ ಅಡಿಗೆ ಮಾಡುಕ್ಕಾಗಲ್ಲ. ಮಧ್ಯಾಹ್ನ ಒಂದು ಗಂಟೆಗೆ ಬಂದಾಗ ಉಂಡು ಹೋಗುತ್ತಾರೆ' ಎಂದನ್ನುತ್ತಾಳೆ. ಮಧ್ಯಾಹ್ನದ ಊಟ ನಮ್ಮನೆಯಲ್ಲಿ ಒಂದು ಗಂಟೆಯ ಹೊತ್ತಿಗಾದರೆ, ರಾತ್ರಿಯ ಊಟ ಹತ್ತು ಗಂಟೆಗೆ, ಈ ಅಂತರದಲ್ಲಿ ಹಾಲು ಬ್ರೆಡ್ಡು ಬಿಟ್ಟು ಇನ್ನೇನೂ ಮಕ್ಕಳಿಗೆ ದೊರಕುವುದಿಲ್ಲ.