ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೮

ಮನಮಂಥನ

ಹಾಕುವ ನವವಧು ; ಬೆಂಕಿಕಡ್ಡಿಯನ್ನು ಬಾಯಿನಲ್ಲಿಟ್ಟುಕೊಂಡು, ಸಿಗರೇಟನ್ನು ಬೆಂಕಿ ಪೊಟ್ಟಣಕೈ, ಮಾತನಾಡುತ್ತ, ತಿಕ್ಕುವ ಕಲೆಗಾರ ; ಒಂದಲ್ಲ ಇಂತಹವು, ಲಕ್ಷಾಂತರ.

ಗೀಳು ಹಿಡಿದವರೂ ಈ ನಡವಳಿಕೆಯನ್ನು ತೋರುತ್ತಾರೆ. ಹೆಣ್ಣ ಹಿಂದೋಡುವ ಗೀಳು ಹಿಡಿದವರು ವಿಚಿತ್ರ ವರ್ತನೆಯನ್ನು ನಡೆಸುತ್ತಾರೆ. ಭಯವಾಗಲೀ, ಲಜ್ಜೆಯಾಗಲಿ, ಅವರ ಅರಿವಿಗೆ ಬರುವುದೇ ಇಲ್ಲ, ಆ ಅವಧಿಯಲ್ಲಿ. ಹಣವನ್ನು ಕೂಡಿಟ್ಟು ಕುಬೇರನನ್ನು ಒತ್ತೆ ಇಟ್ಟುಕೊಳ್ಳುವಂತಾಗಬೇಕೆಂಬ ಗೀಳು ಹಿಡಿದವರು ಸುಖವನ್ನು ಪಡಲಾರರು, ನಿದ್ರೆಯನ್ನೂ ಮಾಡಲಾರರು. ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗುವ ಗೀಳು ಹಿಡಿದವರು, ಮಾನ ಅವಮಾನಗಳನ್ನು ಗಮನಿಸುವುದೇ ಇಲ್ಲ.

ಭಯ, ಲಜ್ಜೆ ; ಮಾನ, ಅವಮಾನ ; ಸುಖ, ನಿದ್ರೆ ; ಇವೇ ಸಮಾಜದ ಭದ್ರತೆಯನ್ನು ಕಾಪಾಡುವ ಮುಖ್ಯ ಅಂಶಗಳು. ಸಮಾಜದಿಂದ ರಕ್ಷಣೆಯನ್ನು ಪಡೆಯ ಬಯಸುವ ಇವರೆಲ್ಲರೂ, ಆಯಾ ಗೀಳು ಹಿಡಿದಾಗ ವಿಚಿತ್ರ ವರ್ತನೆಯನ್ನು, ವಿಧ್ವಂಸಕ ನಡವಳಿಕೆಯನ್ನು ಕಾಣಿಸುತ್ತಾರೆ.

ಆದರೆ ಇಂತಹ ಗೀಳು ಹಿಡಿದವರ ಮನಸ್ಸಿನಲ್ಲಿ ವಾಸ್ತವಿಕತೆಯ ಆಧಾರವು ದೃಢವಾಗಿಯೇ ಇರುತ್ತದೆ. ವಿಚಿತ್ರ ನಡೆವಳಿಕೆಯೂ, ಗೀಳಿನ ಉದ್ದೇಶದ ಸಾಧನೆಯನ್ನು ಸಮಂಜಸವಾಗಿ ಮಾಡಲೋಸುಗವೇ.

ಕೋಪ ಬಂದವರ ಹಣೆಯ ಬರಹವೂ ಇಷ್ಟೇ.

ರಂಗರಾಜನಿಗೆ ನಾಲ್ವತ್ತರ ಪ್ರಾಯ. ಮೂರು ಮಕ್ಕಳು. ಆರುನೂರು ರೂಪಾಯಿನ ಪಗಾರ ದೊರಕುತ್ತಿತ್ತು. ತಕ್ಕಮಟ್ಟಿಗೆ ಸುಖವಾಗಿಯೇ ಇದ್ದ. ಅಂತಹ ಹಿರಿಯಾಶೆಯಾಗಲಿ, ಹೆಬ್ಬಯಕೆಯಾಗಲೀ ಇರಲಿಲ್ಲ. ಹೊಸದಾಗಿ ವರ್ಗವಾಗಿ ಬಂದ ಆಫೀಸರು, 'ಏನೀ ! ರಂಗರಾಜ್ ! ಇಪ್ಪತ್ತು ವರ್ಷ ಕತ್ತೆಯ ಹಾಗೆ ಸರ್ವಿಸ್ ಹಾಕಿದ್ದೀರಿ. ಹೀಗೇನೇ, ನೋಟ್ ಹಾಕೋದು ? ಹೊಟ್ಟೆಗೇನು ತಿಂತೀರೀ' ಎಂದು ಸಿಕ್ಕಾಪಟ್ಟೆ ರೇಗಿದ. ಎಂದೂ ರಂಗರಾಜ ಇಂತಹ ಮಾತುಗಳನ್ನು ಕೇಳಿತ್ತಿಲ್ಲ. ಅವನ ಮೈಯಲ್ಲಾ ಉರಿಯತೊಡಗಿತ್ತು. ತುಟಿ ಅದುರ ತೊಡಗಿತು. ಮರು ಮಾತಾಡಲಾಗಲಿಲ್ಲ. ತನ್ನ ಕೊಠಡಿಗೆ ಬಂದ. ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ. ಮನೆಗೆ ಹೊರಟುಹೋದ.

ಮುಂದಿನ ತಿಂಗಳಿಂದ, ಹೆಂಡತಿ ಮಕ್ಕಳ ಪಾಡೇನು ? ಎನ್ನುವ ವಾಸ್ತವಿಕ ಪರಿಸ್ಥಿತಿಯ ಯೋಚನೆಯೇ ಬರಲಿಲ್ಲ. ಆದರೆ ರಾಜೀನಾಮೆಯನ್ನು ಇತ್ತಾಗ